ಬೆಂಗಳೂರು: 2022ರ ಸಾಲಿನ ಐಪಿಎಲ್ ಗೆ ಈಗಾಗಲೇ ತಯಾರಿ ನಡೆಯುತ್ತಿದೆ. ಫೆಬ್ರವರಿ ಮೊದಲ ವಾರ ನಡೆಯಲಿರುವ ಹರಾಜಿಗಾಗಿ ಅನೇಕ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಯಾವ ಆಟಗಾರ ಯಾವ ತಂಡದ ಪಾಲಾಗುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್‌ನಲ್ಲಿ ಆರ್‌ಸಿಬಿಯ ಮುಂದಿನ ನಾಯಕ ಯಾರಾಗುತ್ತಾರೆ ಎನ್ನುವುದು ಕೂಡಾ ಅಷ್ಟೇ ಕುತೂಹಲಕಾರಿಯಾಗಿದೆ.
ಕಳೆದ ಐಪಿಎಲ್ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಸದ್ಯ ವಿರಾಟ್ ತಂಡದ ಆಟಗಾರನಾಗಿ ಮಾತ್ರ ಉಳಿದುಕೊಂಡಿದ್ದಾರೆ. ಹೀಗಾಗಿ ತಂಡಕ್ಕೆ ಹೊಸ ನಾಯಕನನ್ನು ನೇಮಿಸುವ ದೊಡ್ಡ ಸವಾಲು ಫ್ರಾಂಚೈಸಿ ಮುಂದಿದೆ.
ವರದಿಗಳ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕನ್ನಡಿಗ ಮನೀಶ್ ಪಾಂಡೆ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್: ಲಬುಶೇನ್ ನಂ. ವನ್
ವಿರಾಟ್ ಕೊಹ್ಲಿಯ ನಾಯಕತ್ವದ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸುವ ಯಾರನ್ನಾದರೂ ತಂಡ ಹುಡುಕುತ್ತಿದೆ. ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಐಪಿಎಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮನೀಷ್ ಪಾಂಡೆ ಐಪಿಎಲ್ 2022 ರಲ್ಲಿ ಆರ್‌ಸಿಬಿ ನಾಯಕತ್ವ ವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ವರದಿಗಳ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022 ರ ಹರಾಜಿನಲ್ಲಿ ಮನೀಶ್ ಪಾಂಡೆಯನ್ನು ಖರೀದಿಸಲು ಮುಂದಾಗಗಿದೆ. ಪಾಂಡೆಯನ್ನು 2018 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಂಬಲಾಗದ 11 ಕೋಟಿಗೆ ಖರೀದಿಸಿತು. ಪಾಂಡೆ ಕರ್ನಾಟಕ ತಂಡದ ನಾಯಕನಾಗಿಯೂ ಯಶಸ್ವಿಯಾಗಿದ್ದಾರೆ.