ದುಬೈ: ಪ್ಲೇಆಫ್ ದೃಷ್ಟಿಯಿಂದ ಯಾವುದೇ ಮಹತ್ವ ಹೊಂದಿರದಿದ್ದ ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಜಯ ಗಳಿಸಿದೆ. ಅದು ಡೆಲ್ಲಿ ಕ್ಯಾಪಿ ಟಲ್ಸ್ ವಿರುದ್ಧ ಅಂತಿಮ ಎಸೆತದಲ್ಲಿ 7 ವಿಕೆಟ್‌ಗಳ ಗೆಲುವು ಗಳಿಸಿತು. ಈ ಗೆಲುವಿನಿಂದ ಬೆಂಗಳೂರು ಆತ್ಮವಿಶ್ವಾಸದಿಂದ ಪ್ಲೇಆಫ್ಗೆ ಸಿದ್ಧವಾಗಿದೆ.
ಮೊದಲು ಬ್ಯಾಟಿಂಗ್ 20 ಓವರ್‌ಗಳಲ್ಲಿ ಅದು 5 ವಿಕೆಟ್ ಕಳೆದುಕೊಂಡು 164 ರನ್ ಬಾರಿಸಿತು. ಇದನ್ನು ಬೆನ್ನತ್ತಿದ ಬೆಂಗಳೂರು 20 ಓವರ್ ಗಳಲ್ಲಿ 3 ವಿಕೆಟ್‌ಗೆ 166 ರನ್ ಗಳಿಸಿತು. ಆರ್ ಸಿಬಿಯ ಈ ಅದ್ಭುತ ಗೆಲುವಿನಲ್ಲಿ ಶ್ರೀಕರ್ ಭರತ್
(52 ಎಸೆತ, 78 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (33 ಎಸೆತ, 51 ರನ್) ಪಾತ್ರ ಪ್ರಮುಖ ವಾದದ್ದು. ಶ್ರೀಕರ್ ಭರತ್ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ನಂಬಲಸಾಧ್ಯ ಜಯಕ್ಕೆ ಕಾರಣವಾದರು.
ಡೆಲ್ಲಿ ಉತ್ತಮ ಮೊತ್ತ: ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಪೃಥ್ವಿ ಶಾ ಮತ್ತು ಶಿಖರ್ ಧವನ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 88 ರನ್ ಒಗ್ಗೂಡಿಸಿದರು. ಪೃಥ್ವಿ 31 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 48 ರನ್ ಬಾರಿಸಿದರು. ಮತ್ತೂಂದು ಧವನ್ 35 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 43 ರನ್ ಗಳಿಸಿದರು. ಈ ಇಬ್ಬರ ಸಹಜಶೈಲಿಗೆ ಹೋಲಿಸಿದರೆ ರನ್‌ಗಳಿಕೆ ಬಹಳ ನಿಧಾನವಾಗಿತ್ತು. ಇವರಿಬ್ಬರನ್ನು ಹೊರತುಪಡಿಸಿದರೆ ಪರವಾಗಿಲ್ಲ ಎನ್ನುವಂತೆ ಬ್ಯಾಟಿಂಗ್ ಮಾಡಿದ್ದು ಶಿಮ್ರಾನ್ ಹೆಟ್‌ಮೈರ್. ಅವರು 22 ಎಸೆತಗಳಲ್ಲಿ 29 ರನ್ ಬಾರಿಸಿದರು. ಮಾಜಿ ನಾಯಕ ಶ್ರೇಯಸ್ ಐಯ್ಯರ್ 18 ಎಸೆತ ಸರಿಯಾಗಿ 18 ರನ್ ಬಾರಿಸಿದರು. ನಾಯಕ ರಿಷಭ್ ಪಂತ್ ಕೇವಲ 10 ರನ್‌ಗಳಿಗೆ ಔಟಾದರು.
ಬೆಂಗಳೂರು ಪರ ಮೊದಲ ಓವರ್ ಎಸೆದಿದ್ದು ಗ್ಲೆನ್ ಮ್ಯಾಕ್ಸ್‌ವೆಲ್. ಆದರೆ ಅವರಿಗೆ ಯಾವುದೇ ಯಶಸ್ಸು ಸಿಗಲಿಲ್ಲ. 3 ಓವರ್ ಎಸೆದ ಅವರು 29 ರನ್ ಬಿಟ್ಟುಕೊಟ್ಟರು. ಆದರೆ ವೇಗಿ ಮೊಹಮ್ಮದ್ ಸಿರಾಜ್ ಉತ್ತಮ ಯಶಸ್ಸು ಪಡೆದರು. ಅವರು 4 ಓವರ್ ಎಸೆದು 25 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಯಜುವೇಂದ್ರ ಚಹಲ್, ಹರ್ಷಲ್ ಪಟೇಲ್, ಡ್ಯಾನ್ ಕ್ರಿಸ್ಟಿಯನ್ ತಲಾ 1 ವಿಕೆಟ್ ಪಡೆದರು. ಬೆಂಗಳೂರು ಪರ ಒಟ್ಟು 6 ಮಂದಿ ಬೌಲಿಂಗ್ ಮಾಡಿದ್ದೊಂದು ವಿಶೇಷ.
ಸಂಕ್ಷಿಪ್ತ ಸ್ಕೋರ್: ಡೆಲ್ಲಿ ಕ್ಯಾಪಿಟಲ್ಸ್ 20 ಓವರ್, 164/5 (ಪೃಥ್ವಿ ಶಾ 48, ಶಿಖರ್ ಧವನ್ 43, ಮೊಹಮ್ಮದ್ ಸಿರಾಜ್ 25ಕ್ಕೆ 2). ಬೆಂಗಳೂರು 20 ಓವರ್, 166/3 (ಶ್ರೀಕರ್ ಭರತ್ 78, ಮ್ಯಾಕ್ಸ್‌ವೆಲ್ 51, ಅನ್ರಿಚ್ ನೋರ್ಜೆ 24ಕ್ಕೆ 2).