Advertisement

ಹೊಸ ಜೆರ್ಸಿಯೊಂದಿಗೆ ಯುಎಇ ಚರಣದ ಮೊದಲ ಪಂದ್ಯವಾಡಲಿದೆ ಆರ್ ಸಿಬಿ ತಂಡ

10:50 AM Sep 14, 2021 | Team Udayavani |

ದುಬೈ: ಬಹುನಿರೀಕ್ಷಿತ ಐಪಿಎಲ್ ಕೂಟದ ಯುಎಇ ಚರಣ ಸನ್ನಿಹಿತವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ವರ್ಣರಂಜಿತ ಚುಟುಕು ಕ್ರಿಕೆಟ್ ಕೂಟ ಮತ್ತೆ ಆರಂಭವಾಗಲಿದೆ. ಈಗಾಗಲೇ ತಂಡಗಳು ಯುಎಇ ಗೆ ತೆರಳಿದ್ದು ತಾಲೀಮಿನಲ್ಲಿ ಭಾಗಿಯಾಗಿವೆ.

Advertisement

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆ.20ರಂದು ಪುನರಾರಂಭದ ತನ್ನ ಮೊದಲ ಪಂದ್ಯವಾಡಲಿದೆ. ಅಬುಧಾಬಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದ ಮತ್ತೊಂದು ವಿಶೇಷವೆಂದರೆ ಆರ್ ಸಿಬಿ ಹೊಸ ಜರ್ಸಿಯೊಂದಿಗೆ ಆಡಲಿದೆ.

ಕೋವಿಡ್ ವೈರಸ್ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಯೋಧರಿಗೆ ಗೌರವ ಮತ್ತು ಬೆಂಬಲ ನೀಡುವ ಉದ್ದೇಶದಿಂದ ಆರ್ ಸಿಬಿ ತಂಡವು ತಿಳಿ ನೀಲಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.

ಐಪಿಎಲ್ 2021 ರ ಮೊದಲ ಹಂತದಲ್ಲಿ, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೋವಿಡ್ ಸಮಯದಲ್ಲಿ ಮುಂಚೂಣಿ ಕೆಲಸಗಾರರಿಗೆ ಫ್ರಾಂಚೈಸಿಯ ವತಿಯಿಂದ ತಮ್ಮ ಬೆಂಬಲ ಸೂಚಿಸಿದ್ದರು. ಕೋವಿಡ್ ಸಮಯದಲ್ಲಿ ಬೆಂಗಳೂರು ಮತ್ತು ದೇಶದ ಇತರ ನಗರಗಳಲ್ಲಿ ಆಮ್ಲಜನಕ ಬೆಂಬಲಕ್ಕೆ ಸಂಬಂಧಿಸಿದ ಆರೋಗ್ಯ ರಕ್ಷಣೆಯ ಮೂಲಸೌಕರ್ಯಕ್ಕೆ ಸಹಾಯ ಮಾಡಲು ತಮ್ಮ ಫ್ರ್ಯಾಂಚೈಸಿ ಆರ್ಥಿಕ ಕೊಡುಗೆ ನೀಡುವುದಾಗಿ ಕೊಹ್ಲಿ ಘೋಷಿಸಿದ್ದರು.

ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಬ್ರೆಂಡನ್ ಟೇಲರ್

Advertisement

ಆರ್‌ಸಿಬಿ ಫ್ರಾಂಚೈಸಿಯು ಗಿವ್ ಇಂಡಿಯಾ ಫೌಂಡೇಶನ್‌ನೊಂದಿಗೆ ಕೈಜೋಡಿಸಿ, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಸುಮಾರು 100 ಯೂನಿಟ್‌ಗಳಷ್ಟು ಆಮ್ಲಜನಕ ಕಾನ್ಸನ್ಟ್ರೇಟರ್ ಗಳನ್ನು ಒದಗಿಸಿತ್ತು. ಆರ್‌ಸಿಬಿಯ ಮಾತೃ ಸಂಸ್ಥೆ ಡಿಯಾಜಿಯೊ ಇಂಡಿಯಾ 3 ಲಕ್ಷ ಲೀಟರ್ ಸ್ಯಾನಿಟೈಜರ್‌ಗಳನ್ನು ತಯಾರಿಸಿ ವಿತರಿಸಿದೆ.

ಕಳೆದ ಏಪ್ರಿಲ್ ನಲ್ಲಿ ಆರಂಭವಾಗಿದ್ದ 14ನೇ ಆವೃತ್ತಿಯ ಐಪಿಎಲ್ ಕೂಟ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಹೀಗಾಗಿ ಸೆ.19ರಂದು ದುಬೈನಲ್ಲಿ ಮತ್ತೆ ಕೂಟ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next