Advertisement

IPL2023: ರೋಚಕ ಪಂದ್ಯ ; ಧೋನಿ ಪಡೆಗೆ ಶರಣಾದ ಆರ್‌ಸಿಬಿ

11:44 PM Apr 17, 2023 | Team Udayavani |

ಬೆಂಗಳೂರು: ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಬೃಹತ್‌ ಮೊತ್ತದ ರೋಚಕ ಐಪಿಎಲ್‌ ಮೇಲಾಟದಲ್ಲಿ ಚೆನ್ನೈ 8 ರನ್ನುಗಳಿಂದ ಆರ್‌ಸಿಬಿಗೆ ಆಘಾತವಿಕ್ಕಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ 6 ವಿಕೆಟಿಗೆ 226 ರನ್‌ ಪೇರಿಸಿತು. ಇದು “ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್‌ಸಿಬಿ ವಿರುದ್ಧ ದಾಖಲಾದ ಅತ್ಯಧಿಕ ಮೊತ್ತ. ಇದನ್ನು ದಿಟ್ಟ ರೀತಿಯಲ್ಲೇ ಬೆನ್ನಟ್ಟಿಕೊಂಡು ಹೋದ ಆರ್‌ಸಿಬಿ 8 ವಿಕೆಟಿಗೆ 218 ರನ್‌ ಮಾಡಿ ಸಣ್ಣ ಅಂತರದ ಸೋಲನುಭವಿಸಿತು

ವಿರಾಟ್‌ ಕೊಹ್ಲಿ (6) ಮತ್ತು ಮಹಿಪಾಲ್‌ ಲೊನ್ರೋರ್‌ (0) ಅವರನ್ನು 15 ರನ್‌ ಆಗುವಷ್ಟರಲ್ಲಿ ಕಳೆದುಕೊಂಡ ಬೆಂಗಳೂರು ತಂಡಕ್ಕೆ ನಾಯಕ ಫಾ ಡು ಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಧಾರವಾದರು. ಧೋನಿ ಪಡೆಯ ದಾಳಿಯನ್ನು ಧೂಳೀಪಟ ಮಾಡಿದರು. 3ನೇ ವಿಕೆಟಿಗೆ 61 ಎಸೆತಗಳಿಂದ 126 ರನ್‌ ಹರಿದು ಬಂತು. ಅಬ್ಬರಿಸಿದ ಮ್ಯಾಕ್ಸ್‌ವೆಲ್‌ 36 ಎಸೆತಗಳಿಂದ 76 ರನ್‌ ಚಚ್ಚಿದರು. 4 ಬೌಂಡರಿ, 8 ಸಿಕ್ಸರ್‌ ಸಿಡಿಸಿ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

14ನೇ ಓವರ್‌ ಅಂತ್ಯಕ್ಕೆ ಡು ಪ್ಲೆಸಿಸ್‌ ಔಟಾಗುವುದರೊಂದಿಗೆ ಆರ್‌ಸಿಬಿ ಗೆಲುವಿನ ಸಾಧ್ಯತೆ ಕಡಿಮೆಗೊಂಡಿತು. ಡು ಪ್ಲೆಸಿಸ್‌ 33 ಎಸೆತಗಳಿಂದ 62 ರನ್‌ ಬಾರಿಸಿದರು (5 ಬೌಂಡರಿ, 4 ಸಿಕ್ಸರ್‌).

ಚೆನ್ನೈ ಭರ್ಜರಿ ಮೊತ್ತ
ರುತುರಾಜ್‌ ಗಾಯಕ್ವಾಡ್‌ (3) ಹೊರತು ಪಡಿಸಿ ಉಳಿದವರೆಲ್ಲ ಮುನ್ನುಗ್ಗಿ ಬಾರಿಸಿ ಚೆನ್ನೈ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಚೆನ್ನೈ ಸರದಿಯಲ್ಲಿ ಬೌಂಡರಿಗಿಂತ ಸಿಕ್ಸರ್‌ಗಳೇ ಜಾಸ್ತಿ ಸಿಡಿದವು. ಬೌಂಡರಿಗಳ ಸಂಖ್ಯೆ ಹನ್ನೆರಡಾದರೆ, ಸಿಕ್ಸರ್‌ ಸಂಖ್ಯೆ 17ಕ್ಕೆ ಏರಿತು. ಸಿರಾಜ್‌ ಹೊರತುಪಡಿಸಿ ಉಳಿದವರೆಲ್ಲ ಹತ್ತಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್‌ ನೀಡಿದರು. ಕರ್ನಾಟಕದವರೇ ಆದ ವೈಶಾಖ್‌ ವಿಜಯ್‌ ಕುಮಾರ್‌ ಅವರ 4 ಓವರ್‌ಗಳಲ್ಲಿ 62 ರನ್‌ ಸೋರಿಹೋಯಿತು. ಡೇವನ್‌ ಕಾನ್ವೇ, ಶಿವಂ ದುಬೆ ಅವರ ಅರ್ಧ ಶತಕದಿಂದ ಚೆನ್ನೈ ಸರದಿ ಬೆಳೆಯಿತು.

Advertisement

ಮೊಹಮ್ಮದ್‌ ಸಿರಾಜ್‌ ಅವರ ಆರಂಭಿಕ ಸ್ಪೆಲ್‌ ಅತ್ಯಂತ ಪರಿಣಾಮಕಾರಿಯಾಗಿತ್ತು. ಮೊದಲ ಓವರ್‌ನಲ್ಲಿ ಸತತ 4 ಡಾಟ್‌ ಬಾಲ್‌ ಎಸೆದ ಅವರು ಕೇವಲ 3 ರನ್‌ ಬಿಟ್ಟುಕೊಟ್ಟರು. ದ್ವಿತೀಯ ಓವರ್‌ನಲ್ಲಿ ಅಪಾಯಕಾರಿ ಓಪನರ್‌ ರುತುರಾಜ್‌ ಗಾಯಕ್ವಾಡ್‌ (3) ವಿಕೆಟ್‌ ಉರುಳಿಸಿದರು.

ಮತ್ತೋರ್ವ ಆರಂಭಕಾರ ಡೇವನ್‌ ಕಾನ್ವೇ ಬಿರುಸಿನ ಗತಿಯಲ್ಲಿದ್ದರು. ಪಾರ್ನೆಲ್‌ ಅವರಿಗೆ ಮೊದಲ ಓವರ್‌ನಲ್ಲೇ ಬೌಂಡರಿ, ಸಿಕ್ಸರ್‌ ರುಚಿ ತೋರಿಸಿದರು. ಕಳೆದ ಪಂದ್ಯದ ಯಶಸ್ವಿ ಬೌಲರ್‌ ವೈಶಾಖ್‌ ವಿಜಯ್‌ಕುಮಾರ್‌ ಅವರನ್ನೂ ಕಾನ್ವೇ ಬೌಂಡರಿ ಮೂಲಕ ಸ್ವಾಗತಿಸಿದರು. ರಹಾನೆ ಸಿಕ್ಸರ್‌ ಎತ್ತಿದರು. ಪವರ್‌ ಪ್ಲೇಯಲ್ಲಿ ಚೆನ್ನೈ ಒಂದು ವಿಕೆಟಿಗೆ 51 ರನ್‌ ಪೇರಿಸಿತು. ಈ ಅವಧಿಯಲ್ಲಿ ಪಾರ್ನೆಲ್‌ ಬಹಳ ದುಬಾರಿಯಾದರು. ಅವರ 3 ಓವರ್‌ಗಳಲ್ಲಿ 34 ರನ್‌ ಸೋರಿ ಹೋಯಿತು. 9ನೇ ಓವರ್‌ನಲ್ಲಿ ದಾಳಿಗಿಳಿದ ಹರ್ಷಲ್‌ ಪಟೇಲ್‌ 14 ರನ್‌ ನೀಡಿ ಚೆನ್ನೈ ಪಾಳೆಯದಲ್ಲಿ ಹರ್ಷ ಉಕ್ಕಿಸಿದರು.

ಹಸರಂಗ ತಮ್ಮ ದ್ವಿತೀಯ ಓವರ್‌ನಲ್ಲಿ ಅಜಿಂಕ್ಯ ರಹಾನೆ ಅವರನ್ನು ಬೌಲ್ಡ್‌ ಮಾಡುವ ಮೂಲಕ ಆರ್‌ಸಿಬಿಗೆ ರಿಲೀಫ್ ಕೊಟ್ಟರು. ರಹಾನೆ ಗಳಿಕೆ 20 ಎಸೆತಗಳಿಂದ 37 ರನ್‌ (3 ಬೌಂಡರಿ, 2 ಸಿಕ್ಸರ್‌). ದ್ವಿತೀಯ ವಿಕೆಟಿಗೆ ಕೇವಲ 43 ಎಸೆತಗಳಿಂದ 74 ರನ್‌ ಒಟ್ಟುಗೂಡಿತು. 10 ಓವರ್‌ ಅಂತ್ಯಕ್ಕೆ ಚೆನ್ನೈ 2 ವಿಕೆಟಿಗೆ 97 ರನ್‌ ಪೇರಿಸಿ ಸುಸ್ಥಿತಿಯಲ್ಲಿತ್ತು. ಕಾನ್ವೇ ಆಗಲೇ ಅರ್ಧ ಶತಕದ ಗಡಿ ದಾಟಿದ್ದರು.

ದ್ವಿತೀಯಾರ್ಧದ ಆಟದಲ್ಲೂ ಕಾನ್ವೇ ಬ್ಯಾಟಿಂಗ್‌ ಅಬ್ಬರ ಮುಂದುವರಿಯಿತು. ಅವರಿಗೆ ಶಿವಂ ದುಬೆ ಉತ್ತಮ ಬೆಂಬಲವಿತ್ತರು. 15 ಓವರ್‌ ಅಂತ್ಯಕ್ಕೆ ಚೆನ್ನೈ 2ಕ್ಕೆ 165 ರನ್‌ ಪೇರಿಸಿ ಬೃಹತ್‌ ಮೊತ್ತದ ಸುಳಿವನ್ನಿತ್ತಿತು. ಆರ್‌ಸಿಬಿಯ ಯಾವುದೇ ಬೌಲರ್‌ಗಳಿಗೆ ಚೆನ್ನೈ ಮೇಲೆ ನಿಯಂತ್ರಣ ಹೇರಲಾಗಲಿಲ್ಲ.

ಶತಕದ ನಿರೀಕ್ಷೆಯಲ್ಲಿದ್ದ ಡೇವನ್‌ ಕಾನ್ವೇಗೆ ಇದರಲ್ಲಿ ಯಶಸ್ಸು ಸಿಗಲಿಲ್ಲ. ಅವರು 83 ರನ್‌ ಮಾಡಿ ಹರ್ಷಲ್‌ ಪಟೇಲ್‌ ಎಸೆತದಲ್ಲಿ ಬೌಲ್ಡ್‌ ಆದರು. ಇದು ಈ ಐಪಿಎಲ್‌ನಲ್ಲಿ ಅವರ 2ನೇ ಫಿಫ್ಟಿ. 45 ಎಸೆತಗಳ ಈ ಸೊಗಸಾದ ಆಟದಲ್ಲಿ 6 ಸಿಕ್ಸರ್‌, 6 ಬೌಂಡರಿ ಒಳಗೊಂಡಿತ್ತು. ಕಾನ್ವೇ-ದುಬೆ ಜೋಡಿ ದ್ವಿತೀಯ ವಿಕೆಟಿಗೆ 37 ಎಸೆತಗಳಿಂದ 80 ರನ್‌ ಪೇರಿಸಿ ಆರ್‌ಸಿಬಿಗೆ ಬೆವರಿಳಿಸಿತು.

ಅಬ್ಬರಿಸಿದ ಶಿವಂ ದುಬೆ ಅರ್ಧ ಶತಕದೊಂದಿಗೆ ಮಿಂಚಿದರು. 27 ಎಸೆತಗಳಿಂದ 52 ರನ್‌ ಬಾರಿಸಿದರು. ಸಿಡಿಸಿದ್ದು 5 ಸಿಕ್ಸರ್‌, 2 ಫೋರ್‌. ಕೊನೆಯ 5 ಓವರ್‌ಗಳಲ್ಲಿ ಚೆನ್ನೈ 61 ರನ್‌ ಪೇರಿಸಿತು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ಆರ್‌. ಗಾಯಕ್ವಾಡ್‌ ಸಿ ಪಾರ್ನೆಲ್‌ ಬಿ ಸಿರಾಜ್‌ 3
ಡೇವನ್‌ ಕಾನ್ವೇ ಬಿ ಪಟೇಲ್‌ 83
ಅಜಿಂಕ್ಯ ರಹಾನೆ ಬಿ ಹಸರಂಗ 37
ಶಿವಂ ದುಬೆ ಸಿ ಸಿರಾಜ್‌ ಬಿ ಪಾರ್ನೆಲ್‌ 52
ಅಂಬಾಟಿ ರಾಯುಡು ಸಿ ಕಾರ್ತಿಕ್‌ ಬಿ ವೈಶಾಖ್‌ 14
ಮೊಯಿನ್‌ ಅಲಿ ಔಟಾಗದೆ 19
ರವೀಂದ್ರ ಜಡೇಜ ಸಿ ಸುಯಶ್‌ ಬಿ ಮ್ಯಾಕ್ಸ್‌ವೆಲ್‌ 10
ಎಂ.ಎಸ್‌. ಧೋನಿ ಔಟಾಗದೆ 1
ಇತರ 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 226
ವಿಕೆಟ್‌ ಪತನ: 1-16, 2-90, 3-170, 4-178, 5-196, 6-224.
ಬೌಲಿಂಗ್‌:
ಮೊಹಮ್ಮದ್‌ ಸಿರಾಜ್‌ 4-0-30-1
ವೇಯ್ನ ಪಾರ್ನೆಲ್‌ 4-0-48-1
ವಿಜಯ್‌ಕುಮಾರ್‌ ವೈಶಾಖ್‌ 4-0-62-1
ಗ್ಲೆನ್‌ ಮ್ಯಾಕ್ಸ್‌ವೆಲ್‌ 2.4-0-28-1
ವನಿಂದು ಹಸರಂಗ 2-0-21-1
ಹರ್ಷಲ್‌ ಪಟೇಲ್‌ 3.2-0-36-1

ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಬಿ ಆಕಾಶ್‌ 6
ಫಾ ಡು ಪ್ಲೆಸಿಸ್‌ ಸಿ ಧೋನಿ ಬಿ ಅಲಿ 62
ಎಂ. ಲೊನ್ರೋರ್‌ ಸಿ ಗಾಯಕ್ವಾಡ್‌ ಬಿ ತುಷಾರ್‌ 0
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಧೋನಿ ಬಿ ತೀಕ್ಷಣ 76
ಶಾಬಾಜ್‌ ಅಹ್ಮದ್‌ ಸಿ ಗಾಯಕ್ವಾಡ್‌ ಬಿ ಪತಿರಣ 12
ದಿನೇಶ್‌ ಕಾರ್ತಿಕ್‌ ಸಿ ತೀಕ್ಷಣ ಬಿ ತುಷಾರ್‌ 28
ಪ್ರಭುದೇಸಾಯಿ ಸಿ ಜಡೇಜ ಬಿ ಪತಿರಣ 19
ವೇಯ್ನ ಪಾರ್ನೆಲ್‌ ಸಿ ದುಬೆ ಬಿ ತುಷಾರ್‌ 2
ವನಿಂದು ಹಸರಂಗ ಔಟಾಗದೆ 2
ಇತರ 11
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 218
ವಿಕೆಟ್‌ ಪತನ: 1-6, 2-15, 3-141, 4-159, 5-191, 6-192, 7-197,
ಬೌಲಿಂಗ್‌:
ಆಕಾಶ್‌ ಸಿಂಗ್‌ 3-0-35-1
ತುಷಾರ್‌ ದೇಶಪಾಂಡೆ 4-0-45-3
ಮಹೀಶ್‌ ತೀಕ್ಷಣ 4-0-41-1
ರವೀಂದ್ರ ಜಡೇಜ 4-0-37-0
ಮತೀಶ ಪತಿರಣ 4-0-42-2
ಮೊಯಿನ್‌ ಅಲಿ 1-0-13-1

Advertisement

Udayavani is now on Telegram. Click here to join our channel and stay updated with the latest news.

Next