Advertisement

8ನೇ ಸೋಲಿನ ಕಂಟಕ; ಆರ್‌ಸಿಬಿ “ಔ…ಟ್‌…’

11:56 AM Apr 29, 2019 | keerthan |

ಹೊಸದಿಲ್ಲಿ: ಎಂಟನೇ ಸೋಲಿನ ಕಂಟಕಕ್ಕೆ ಸಿಲುಕಿದ ಆರ್‌ಸಿಬಿ ಐಪಿಎಲ್‌ ಕೂಟದಿಂದ 99.99 ಪ್ರತಿಶತ ಹೊರಬಿದ್ದಿದೆ. ಇನ್ನೊಂದೆಡೆ ರವಿವಾರದ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆಯನ್ನು 16 ರನ್ನುಗಳಿಂದ ಮಗುಚಿದ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ-ಆಫ್ಗೆ ನೆಗೆದ ದ್ವಿತೀಯ ತಂಡವಾಗಿ ಮೂಡಿಬಂದಿದೆ.
ಕೋಟ್ಲಾ ಕದನದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ 5 ವಿಕೆಟಿಗೆ 187 ರನ್‌ ಪೇರಿಸಿದರೆ, ಆರ್‌ಸಿಬಿ 7 ವಿಕೆಟಿಗೆ 171 ರನ್‌ ಗಳಿಸಿ ಶರಣಾಯಿತು. ಇದರೊಂದಿಗೆ ಡೆಲ್ಲಿ 2012ರ ಬಳಿಕ ಮೊದಲ ಸಲ ಐಪಿಎಲ್‌ ಕೂಟದ ದ್ವಿತೀಯ ಸುತ್ತಿಗೇರಿದ ಹೆಗ್ಗಳಿಕೆಗೆ ಪಾತ್ರವಾಯಿತು.

Advertisement

ಆರ್‌ಸಿಬಿ ಅಧಿಕೃತವಾಗಿ ಕೂಟದಿಂದ ಹೊರಬಿದ್ದಿಲ್ಲವಾದರೂ ಮುಂದಿನ ಹಾದಿ ಮುಚ್ಚಿರುವುದಂತೂ ಖಚಿತ. ಹೀಗಾಗಿ ಕೊಹ್ಲಿ ಪಡೆಯ ಮೇಲೆ ಏನೇನೋ ಲೆಕ್ಕಾಚಾರ ಇರಿಸಿಕೊಂಡು, ಪವಾಡವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ.

ಧವನ್‌, ಅಯ್ಯರ್‌ ಅರ್ಧ ಶತಕ
ಡೆಲ್ಲಿಯ ಸವಾಲಿನ ಮೊತ್ತಕ್ಕೆ ಕಾರಣರಾದವರು ಆರಂಭಕಾರ ಶಿಖರ್‌ ಧವನ್‌ ಮತ್ತು ನಾಯಕ ಶ್ರೇಯಸ್‌ ಅಯ್ಯರ್‌. ಇವರಿಬ್ಬರೂ ಅರ್ಧ ಶತಕ ಬಾರಿಸಿ ತವರಿನ ಅಭಿಮಾನಿಗಳಿಗೆ ಧಾರಾಳ ರಂಜನೆ ನೀಡಿದರು. ಇವರ ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 68 ರನ್‌ ಒಟ್ಟುಗೂಡಿತು.

ಓಪನರ್‌ ಪೃಥ್ವಿ ಶಾ ಕೂಡ ಜೋಶ್‌ನಲ್ಲಿದ್ದರು. ಆದರೆ 18 ರನ್ನಿನ ಆಚೆ ಬ್ಯಾಟಿಂಗ್‌ ವಿಸ್ತರಿಸಲು ಉಮೇಶ್‌ ಯಾದವ್‌ ಅವಕಾಶ ಕೊಡಲಿಲ್ಲ. 10 ಎಸೆತ ಎದುರಿಸಿದ ಶಾ 4 ಬೌಂಡರಿ ಬಾರಿಸಿದರು. ಮೊದಲ ವಿಕೆಟಿಗೆ ಶಾ-ಧವನ್‌ ಜೋಡಿಯಿಂದ 3.3 ಓವರ್‌ಗಳಿಂದ 35 ರನ್‌ ಒಟ್ಟುಗೂಡಿತು.
ಶಾ ನಿರ್ಗಮನದ ಬಳಿಕ ಜತೆಗೂಡಿದ ಧವನ್‌-ಅಯ್ಯರ್‌ ಆರ್‌ಸಿಬಿ ಬೌಲರ್‌ಗಳಿಗೆ ಬಿಸಿ ಮುಟ್ಟಿಸುತ್ತ ಹೋದರು. ಮೊದಲ ಎಸೆತವನ್ನೇ ಬೌಂಡರಿಗೆ ರವಾನಿಸಿದ ಅಯ್ಯರ್‌ 16ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು. ಡೆಲ್ಲಿ ಕಪ್ತಾನನ ಕೊಡುಗೆ 37 ಎಸೆತಗಳಿಂದ 52 ರನ್‌. ಸಿಡಿಸಿದ್ದು 3 ಸಿಕ್ಸರ್‌, 2 ಬೌಂಡರಿ.

ದ್ವಿತೀಯ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡ ಶಿಖರ್‌ ಧವನ್‌ ಕೂಡ 37 ಎಸೆತ ನಿಭಾಯಿಸಿದರು. ಗಳಿಸಿದ ರನ್‌ ಭರ್ತಿ 50. ಇದರಲ್ಲಿ 5 ಫೋರ್‌, 2 ಸಿಕ್ಸರ್‌ ಒಳಗೊಂಡಿತ್ತು. ಅರ್ಧ ಹಾದಿ ಕ್ರಮಿಸುವಾಗ ಡೆಲ್ಲಿ ಸ್ಕೋರ್‌ ಒಂದು ವಿಕೆಟಿಗೆ 88 ರನ್‌.

Advertisement

ಚಾಹಲ್‌ ಕಡಿವಾಣ
ಚಾಹಲ್‌ ದಾಳಿಗೆ ಇಳಿದ ಬಳಿಕ ಡೆಲ್ಲಿ ರನ್‌ಗತಿ ಕುಂಠಿತಗೊಂಡಿತು. ಜತೆಗೆ 2 “ಬಿಗ್‌ ವಿಕೆಟ್‌’ಗಳನ್ನೂ ಬುಟ್ಟಿಗೆ ಹಾಕಿಕೊಂಡರು. ಮೊದಲು ಧವನ್‌ಗೆ ಪೆವಿಲಿಯನ್‌ ಹಾದಿ ತೋರಿಸಿದ ಚಾಹಲ್‌, ಮುಂದಿನ ಓವರಿನಲ್ಲೇ ಅಪಾಯಕಾರಿ ರಿಷಬ್‌ ಪಂತ್‌ (7) ವಿಕೆಟನ್ನೂ ಉಡಾಯಿಸಿದರು. ಎರಡೇ ರನ್‌ ಅಂತರದಲ್ಲಿ ವಾಷಿಂಗ್ಟನ್‌ ಸುಂದರ್‌ ದೊಡ್ಡ ಬೇಟೆಯಾಡಿ ಅಯ್ಯರ್‌ಗೆ ಬಲೆ ಬೀಸಿದರು. ಕಾಲಿನ್‌ ಇನ್‌ಗಾÅಮ್‌ (11) ಕೂಡ ಹೆಚ್ಚು ಹೊತ್ತು ಉಳಿಯಲಿಲ್ಲ. 17ನೇ ಓವರ್‌ ವೇಳೆ ಡೆಲ್ಲಿ 141ಕ್ಕೆ 5 ವಿಕೆಟ್‌ ಉರುಳಿಸಿಕೊಂಡಿತ್ತು.

ಅಂತಿಮ ಓವರ್‌ 20 ರನ್‌
6ನೇ ವಿಕೆಟಿಗೆ ಜತೆಗೂಡಿದ ಶೆಫೇìನ್‌ ರುದರ್‌ಫೋರ್ಡ್‌ ಮತ್ತು ಅಕ್ಷರ್‌ ಪಟೇಲ್‌ 3.1 ಓವರ್‌ಗಳಲ್ಲಿ 46 ರನ್‌ ರಾಶಿ ಹಾಕಿದ್ದರಿಂದ ಡೆಲ್ಲಿ ಮೊತ್ತ 180ರ ಗಡಿ ದಾಟಿತು. ಸೈನಿ ಎಸೆದ ಕೊನೆಯ ಓವರಿನಲ್ಲಿ 20 ರನ್‌ ಬಂತು.

ಡೆಲ್ಲಿ ಬೌಲರ್‌ಗಳ ಮೇಲುಗೈ
ಪಾರ್ಥಿವ್‌ ಪಟೇಲ್ ಸಾಹಸದಿಂದ ಮೊದಲ 6 ಓವರ್‌ಗಳಲ್ಲಿ 60 ರನ್‌ ಗಡಿ ದಾಟಿದ ಆರ್‌ಸಿಬಿ ಮೇಲುಗೈ ಸಾಧಿಸುವ ಸ್ಪಷ್ಟ ಸೂಚನೆ ರವಾನಿಸಿತ್ತು. ಆದರೆ ಪಟೇಲ್ ಔಟಾದ ಬಳಿಕ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಕೊಹ್ಲಿ, ಎಬಿಡಿ, ದುಬೆ, ಕ್ಲಾಸೆನ್‌, ಮಾನ್‌ ತಂಡದ ನೆರವಿಗೆ ನಿಲ್ಲಲಿಲ್ಲ. ಎಲ್ಲರೂ ಸಣ್ಣ ಮೊತ್ತವನ್ನಷ್ಟೇ ದಾಖಲಿಸಿ ಹೊರನಡೆದರು. ಪಾರ್ಥಿವ್‌ ಗಳಿಕೆ 20 ಎಸೆತಗಳಿಂದ 39 ರನ್‌ (7 ಬೌಂಡರಿ, 1 ಸಿಕ್ಸರ್‌). ಕೊನೆಯಲ್ಲಿ ಸ್ಟೋಯಿನಿಸ್‌ ಕ್ರೀಸ್‌ ಆಕ್ರಮಿಸಿಕೊಂಡರೂ ಅವರಿಂದ ಸ್ಫೋಟಕ ಆಟ ಹೊರಹೊಮ್ಮಲಿಲ್ಲ. ಅಮಿತ್‌ ಮಿಶ್ರಾ, ಅಕ್ಷರ್‌ ಪಟೇಲ್ ಸ್ಪಿನ್ನಿಗೆ ಆರ್‌ಸಿಬಿ ಬಳಿ ಉತ್ತರ ಇರಲಿಲ್ಲ. ಹೀಗಾಗಿ ಕೊನೆಯ 5 ಓವರ್‌ಗಳಲ್ಲಿ 62 ರನ್‌ ಬಾರಿಸಲು ಸಾಧ್ಯವಾಗದೇ ಹೋಯಿತು.

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಪಾರ್ಥಿವ್‌ ಬಿ ಯಾದವ್‌ 18
ಶಿಖರ್‌ ಧವನ್‌ ಸಿ ಸುಂದರ್‌ ಬಿ ಚಾಹಲ್‌ 50
ಶ್ರೇಯಸ್‌ ಅಯ್ಯರ್‌ ಸಿ ಕೊಹ್ಲಿ ಬಿ ಸುಂದರ್‌ 52
ರಿಷಬ್‌ ಪಂತ್‌ ಎಲ್‌ಬಿ ಡಬ್ಲ್ಯು ಬಿ ಚಾಹಲ್‌ 7
ಕಾಲಿನ್‌ ಇನ್‌ಗಾÅಮ್‌ ಸಿ ಸುಂದರ್‌ ಬಿ ಸೈನಿ 11
ಶೆಫೇìನ್‌ ರುದರ್‌ಫೋರ್ಡ್‌ ಔಟಾಗದೆ 28
ಅಕ್ಷರ್‌ ಪಟೇಲ್‌ ಔಟಾಗದೆ 16
ಇತರ 5
ಒಟ್ಟು (5 ವಿಕೆಟಿಗೆ) 187
ವಿಕೆಟ್‌ ಪತನ- 1-35, 2-103, 3-127, 4-129, 5-141.
ಬೌಲಿಂಗ್‌:
ಉಮೇಶ್‌ ಯಾದವ್‌ 4-0-39-1
ವಾಷಿಂಗ್ಟನ್‌ ಸುಂದರ್‌ 4-0-29-1
ಯಜುವೇಂದ್ರ ಚಾಹಲ್‌ 4-0-41-2
ನವ್‌ದೀಪ್‌ ಶೈನಿ 4-0-44-1
ಮಾರ್ಕಸ್‌ ಸ್ಟೋಯಿನಿಸ್‌ 3-0-24-0
ಶಿವಂ ದುಬೆ 1-0-5-0

ರಾಯಲ್‌ ಚಾಲೆಂಜರ್ ಬೆಂಗಳೂರು
ಪಾರ್ಥಿವ್‌ ಪಟೇಲ್‌ ಸಿ ಅಕ್ಷರ್‌ ಬಿ ರಬಾಡ 39
ವಿರಾಟ್‌ ಕೊಹ್ಲಿ ಸಿ ರುದರ್‌ಫೋರ್ಡ್‌ ಬಿ ಅಕ್ಷರ್‌ 23
ಎಬಿ ಡಿ ವಿಲಿಯರ್ ಸಿ ಅಕ್ಷರ್‌ ಬಿ ರುದರ್‌ಫೋರ್ಡ್‌ 17
ಶಿವಂ ದುಬೆ ಸಿ ಧವನ್‌ ಬಿ ಮಿಶ್ರಾ 24
ಹೆನ್ರಿಕ್‌ ಕ್ಲಾಸೆನ್‌ ಸಿ ಪಂತ್‌ ಬಿ ಮಿಶ್ರಾ 3
ಗುರುಕೀರತ್‌ ಸಿಂಗ್‌ ಮಾನ್‌ ಸಿ ಪಂತ್‌ ಬಿ ಇಶಾಂತ್‌ 27
ಮಾರ್ಕಸ್‌ ಸ್ಟೋಯಿನಿಸ್‌ ಔಟಾಗದೆ 32
ವಾಷಿಂಗ್ಟನ್‌ ಸುಂದರ್‌ ಸಿ ಅಯ್ಯರ್‌ ಬಿ ರಬಾಡ 1
ಉಮೇಶ್‌ ಯಾದವ್‌ ಔಟಾಗದೆ 0
ಇತರ 5
ಒಟ್ಟು (7 ವಿಕೆಟಿಗೆ) 171
ವಿಕೆಟ್‌ ಪತನ: 1-63, 2-68, 3-103, 4-108, 5-111, 6-160, 7-164.
ಬೌಲಿಂಗ್‌:
ಇಶಾಂತ್‌ ಶರ್ಮ 4-0-40-1
ಅಕ್ಷರ್‌ ಪಟೇಲ್‌ 4-0-26-1
ಸಂದೀಪ್‌ ಲಮಿಚಾನೆ 3-0-36-0
ಕಾಗಿಸೊ ರಬಾಡ 4-0-31-2
ಅಮಿತ್‌ ಮಿಶ್ರಾ 4-0-29-2
ಶೆಫೇìನ್‌ ರುದರ್‌ಫೋರ್ಡ್‌ 1-0-6-1
ಪಂದ್ಯಶ್ರೇಷ್ಠ: ಶಿಖರ್‌ ಧವನ್‌

Advertisement

Udayavani is now on Telegram. Click here to join our channel and stay updated with the latest news.

Next