Advertisement

RCB ರಾಜಸ್ಥಾನ್‌ ಬಿಸಿಯಿಂದ ಪಾರಾದೀತೇ?

12:27 AM Apr 06, 2024 | Team Udayavani |

ಜೈಪುರ: “ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಕಣಕ್ಕಿಳಿದು ಮೂರು ಸೋಲಿನಿಂದ ದಿಕ್ಕೆಟ್ಟಿರುವ ಬೆಂಗಳೂರು ತಂಡ ಶನಿವಾರ ತನ್ನ 5ನೇ ಪಂದ್ಯದಲ್ಲಿ “ಹೈ ಫ್ಲೈಯಿಂಗ್‌’ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಅವರದೇ ಜೈಪುರ ಅಂಗಳದಲ್ಲಿ ಎದುರಿಸಲಿದೆ. ಇಲ್ಲಿ ಗೆಲುವಿನ ಹಳಿ ಏರದೇ ಹೋದರೆ ಆರ್‌ಸಿಯ ಹಾದಿ ದುರ್ಗಮಗೊಳ್ಳುವುದರಲ್ಲಿ ಅನುಮಾನವಿಲ್ಲ.

Advertisement

ಇನ್ನೊಂದೆಡೆ ಸಂಜು ಸ್ಯಾಮ್ಸನ್‌ ಸಾರಥ್ಯದ ರಾಜಸ್ಥಾನ್‌ ಆಡಿದ ಮೂರರಲ್ಲೂ ಜಯಭೇರಿ ಮೊಳಗಿಸಿದೆ. ಜೈಪುರದಲ್ಲಿ ಆಡಿದ 2 ಪಂದ್ಯದ ಜತೆಗೆ ಮುಂಬೈಯನ್ನು ಅವರದೇ “ವಾಂಖೇಡೆ’ ಅಂಗಳದಲ್ಲಿ ಸೋಲಿಸಿ ಬಂದಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ರಾಜಸ್ಥಾನ್‌ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಎಲ್ಲ ವಿಭಾಗಗಳಲ್ಲೂ ಆರ್‌ಸಿಬಿಗಿಂತ ಹೆಚ್ಚು ಬಲಿಷ್ಠವಾಗಿದೆ. ಜತೆಗೆ ತವರಿನ ಅಂಗಳದ ಲಾಭವೂ ಇದೆ.

ಆರ್‌ಸಿಬಿ ಘೋರ ವೈಫ‌ಲ್ಯ
ಕೆಕೆಆರ್‌ ಮತ್ತು ಲಕ್ನೋ ವಿರುದ್ಧ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆಡಿದ ಕಳೆದೆರಡೂ ಪಂದ್ಯಗಳಲ್ಲಿ ಬೆಂಗಳೂರು ತಂಡದ್ದು ಘೋರ ವೈಫ‌ಲ್ಯ. ಕೂಟದಲ್ಲೇ ಅತ್ಯಂತ ದುರ್ಬಲ ಬೌಲಿಂಗ್‌ ವಿಭಾಗವನ್ನು ಹೊಂದಿರುವ ಆರ್‌ಸಿಬಿಗೆ ಈಗ ಬ್ಯಾಟಿಂಗ್‌ ಸಮಸ್ಯೆಯೂ ಎದುರಾಗಿದೆ.

ಈ ಎರಡು ಪಂದ್ಯಗಳನ್ನು ಉಲ್ಲೇಖೀಸಿ ವಿಶ್ಲೇಷಿಸುವುದಾದರೆ, ಆರ್‌ಸಿಬಿ ಎದುರಾಳಿ ತಂಡದ ಒಬ್ಬೊಬ್ಬ ಆಟಗಾರನಿಗೆ ಶರಣಾಗಿರುವುದು ಸ್ಪಷ್ಟ. ಕೆಕೆಆರ್‌ ವಿರುದ್ಧ ಸುನೀಲ್‌ ನಾರಾಯಣ್‌ ಆರ್‌ಸಿಬಿ ಬೌಲರ್‌ಗಳನ್ನು ಚೆಂಡಾಡಿದರೆ, ಲಕ್ನೋದ ನೂತನ ಬೌಲಿಂಗ್‌ ಅಸ್ತ್ರವಾಗಿರುವ ಮಾಯಾಂಕ್‌ ಯಾದವ್‌ ಆರ್‌ಸಿಬಿ ಬ್ಯಾಟರ್‌ಗಳನ್ನು ದಿಕ್ಕಾಪಾಲು ಮಾಡಿದರು. ವಿರಾಟ್‌ ಕೊಹ್ಲಿ ಹೊರತುಪಡಿಸಿ ಆರ್‌ಸಿಬಿಯ ಆಷ್ಟೂ ಬ್ಯಾಟರ್ ಒಬ್ಬ ಸುನೀಲ್‌ ನಾರಾಯಣ್‌ಗೆ ಸಮನಾಗಲಿಲ್ಲ. ಹಾಗೆಯೇ ಆರ್‌ಸಿಬಿಯ ಅಷ್ಟೂ ಬೌಲರ್ ಓರ್ವ ಮಾಯಾಂಕ್‌ ಯಾದವ್‌ಗೆ ಸರಿಸಾಟಿ ಎನಿಸಲಿಲ್ಲ. ಒಟ್ಟಾರೆ ಹೇಳುವುದಾದರೆ, ಆರ್‌ಸಿಬಿ ಒಂದು ತಂಡವಾಗಿ ಆಡುವುದರಲ್ಲಿ ಸಂಪೂರ್ಣ ವಿಫ‌ಲವಾಗಿದೆ.

ಮೇಲ್ನೋಟಕ್ಕೆ ಆರ್‌ಸಿಬಿಯ ಬ್ಯಾಟಿಂಗ್‌ ಸರದಿ ಖಂಡಿತ ದುರ್ಬಲವಲ್ಲ. ಡು ಪ್ಲೆಸಿಸ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ಪಾಟಿದಾರ್‌ ಸ್ಫೋಟಕ ಆಟಕ್ಕೆ ಎತ್ತಿದ ಕೈ. ಆದರೆ ಈವರೆಗೆ ಇವರೆಲ್ಲರ ಬ್ಯಾಟ್‌ಗಳೂ ಮುಷ್ಕರ ಹೂಡಿವೆ, ಮ್ಯಾಕ್ಸ್‌ವೆಲ್‌ ಆಟ ನೋಡಿದರಂತೂ, ವಿಶ್ವಕಪ್‌ನಲ್ಲಿ ಅಫ್ಘಾನಿಸ್ಥಾನ ವಿರುದ್ಧ ದ್ವಿಶತಕ ಬಾರಿಸಿ ಆಸ್ಟ್ರೇಲಿಯವನ್ನು ಗೆಲ್ಲಿಸಿದ ಕ್ರಿಕೆಟಿಗ ಇವರೇನಾ ಎಂಬ ಸಂಶಯ ಮೂಡದಿರದು.

Advertisement

ರಾಜಸ್ಥಾನದ ಬಲಿಷ್ಠ ಬೌಲಿಂಗ್‌ ಪಡೆಯ ಮುಂದೆ ಆರ್‌ಸಿಬಿಯ ಆಟ ಸಾಗೀತೇ ಎಂಬ ಆತಂಕ ಸಹಜ, ಬೌಲ್ಟ್, ಅಶ್ವಿ‌ನ್‌, ಚಹಲ್‌, ಆವೇಶ್‌ ಖಾನ್‌, ಬರ್ಗರ್‌ ಜತೆಗೆ ಇನ್ನಷ್ಟು ಅಪಾಯಕಾರಿ ಬೌಲರ್ ರಾಜಸ್ಥಾನ್‌ ಪಾಳೆಯದಲ್ಲಿದ್ದಾರೆ.

ಕ್ಲಬ್‌ ಮಟ್ಟದ ಬೌಲಿಂಗ್‌
ಆರ್‌ಸಿಬಿ ಬೌಲಿಂಗ್‌ ಕ್ಲಬ್‌ ಮಟ್ಟಕ್ಕಿಂತಲೂ ಕಳಪೆಯಾಗಿದೆ. ಯಾರೂ ಎದುರಾಳಿಗೆ ಭೀತಿ ಹುಟ್ಟಿಸುವ ಮಟ್ಟದಲ್ಲಿಲ್ಲ. ಸರಾಗ ರನ್‌ ನೀಡುವ ಮೂಲಕ ಅತ್ಯಂತ ದುಬಾರಿಯಾಗಿ ಪರಿಣಮಿಸಿದ್ದಾರೆ. ಅಲ್ಜಾರಿ ಜೋಸೆಫ್ ಬದಲು ರೀಸ್‌ ಟಾಪ್ಲಿ ಬಂದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಅದು ಇನ್ನಷ್ಟು ಬಿಗಡಾಯಿಸಿದೆ. ಇನ್ನು ಲಾಕಿ ಫ‌ರ್ಗ್ಯುಸನ್‌ ಅವರನ್ನು ಆಡಿಸುವುದೊಂದು ಬಾಕಿ ಉಳಿದಿದೆ.

ಜೈಸ್ವಾಲ್‌-ಬಟ್ಲರ್‌, ಸ್ಯಾಮ್ಸನ್‌, ಹೆಟ್‌ಮೈರ್‌, ಜುರೆಲ್‌, ರಿಯಾನ್‌ ಪರಾಗ್‌, ರೋವ¾ನ್‌ ಪೊವೆಲ್‌ ಅವರನ್ನು ಒಳಗೊಂಡ ರಾಜಸ್ಥಾನ್‌ ಬ್ಯಾಟಿಂಗ್‌ ಸರದಿ ಅತ್ಯಂತ ಬಲಿಷ್ಠ. ಇವರನ್ನು ನಿಯಂತ್ರಿಸಲು ಆರ್‌ಸಿಬಿ ಬೌಲರ್‌ಗಳಿಂದ ಸಾಧ್ಯವೇ? ಆತಂಕ ಸಹಜ.

ಪಿಚ್‌ ರಿಪೋರ್ಟ್‌
ಜೈಪುರದ ಸವಾಯ್‌ ಮಾನ್‌ಸಿಂಗ್‌ ಅಂಗಳದ ಪಿಚ್‌ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿ. ಚೆಂಡು ಬೌನ್ಸ್‌ ಆಗಿ ನೇರವಾಗಿ ಬ್ಯಾಟ್‌ಗೆ ಬಂದೆರಗುವುದರಿಂದ ರನ್‌ ಗಳಿಕೆ ಸುಲಭ. ಟಾಸ್‌ ನಿರ್ಣಾಯಕ. ಮೊದಲು ಬೌಲಿಂಗ್‌ ಆಯ್ದುಕೊಂಡು, ಬಳಿಕ ಚೇಸಿಂಗ್‌ ನಡೆಸಿದರೆ ಗೆಲುವಿನ ಸಾಧ್ಯತೆ ಹೆಚ್ಚು.

ಸಂಭಾವ್ಯ ತಂಡಗಳು
ಆರ್‌ಸಿಬಿ: ಫಾ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ಕ್ಯಾಮರಾನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ರಜತ್‌ ಪಾಟಿದಾರ್‌, ಅನುಜ್‌ ರಾವತ್‌, ದಿನೇಶ್‌ ಕಾರ್ತಿಕ್‌, ಮಾಯಾಂಕ್‌ ಡಾಗರ್‌, ರೀಸ್‌ ಟಾಪ್ಲಿ, ಮೊಹಮ್ಮದ್‌ ಸಿರಾಜ್‌, ಯಶ್‌ ದಯಾಳ್‌.

ರಾಜಸ್ಥಾನ್‌: ಯಶಸ್ವಿ ಜೈಸ್ವಾಲ್‌, ಜಾಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌ (ನಾಯಕ), ರಿಯಾನ್‌ ಪರಾಗ್‌, ಧ್ರುವ ಜುರೆಲ್‌, ಶಿಮ್ರನ್‌ ಹೆಟ್‌ಮೈರ್‌, ಆರ್‌. ಅಶ್ವಿ‌ನ್‌, ಟ್ರೆಂಟ್‌ ಬೌಲ್ಟ್, ಆವೇಶ್‌ ಖಾನ್‌, ನಾಂಡ್ರೆ ಬರ್ಗರ್‌, ಯಜುವೇಂದ್ರ ಚಹಲ್‌.

ರಾಜಸ್ಥಾನ್‌ ಮಹಿಳೆಯರಿಗೆ ಪಂದ್ಯ ಅರ್ಪಣೆ
ಶನಿವಾರದ ಆರ್‌ಸಿಬಿ ವಿರುದ್ಧದ ಐಪಿಎಲ್‌ ಪಂದ್ಯವನ್ನು ರಾಜಸ್ಥಾನ್‌ ರಾಯಲ್ಸ್‌ ಫ್ರಾಂಚೈಸಿಯು ರಾಜಸ್ಥಾನದ ಮಹಿಳೆಯರಿಗೆ‌ ಅರ್ಪಿಸಿದೆ. ಆರ್‌ಸಿಬಿ-ರಾಜಸ್ಥಾನ್‌ ಪಂದ್ಯದ ವೇಳೆ ದಾಖಲಾಗುವ ಪ್ರತೀ ಸಿಕ್ಸರ್‌ ಭಾರೀ ಬೆಲೆ ಬಾಳಲಿದ್ದು, ಇದರಿಂದ 6 ಮನೆಗಳಿಗೆ ಉಚಿತ ಸೌರವಿದ್ಯುತ್‌ ಸಂಪರ್ಕವನ್ನು ಫ್ರಾಂಚೈಸಿ ನೀಡಲಿದೆ. ರಾಜಸ್ಥಾನದ ಮಹಿಳೆಯರನ್ನು ಸಶಕ್ತಗೊಳಿಸಲು, ಇಡೀ ದಿನದ ಆದಾಯವನ್ನು ಫ್ರಾಂಚೈಸಿ ಮೀಸಲಾಗಿಟ್ಟಿದೆ. ಇದಕ್ಕಾಗಿ ರಾಜಸ್ಥಾನ್‌ ರಾಯಲ್ಸ್‌ ಫೌಂಡೇಶನ್‌ ಎಂಬ ಸಂಸ್ಥೆ ಸ್ಥಾಪನೆಯಾಗಿದೆ. ಶನಿವಾರ ತಂಡದ ಎಲ್ಲ ಆಟಗಾರರು ಗುಲಾಲಿ ದಿರಿಸಿನಲ್ಲಿ ಕಣಕ್ಕಿಳಿಯಲಿದ್ದಾರೆ. ಮಾತ್ರವಲ್ಲ ಫ್ರಾಂಚೈಸಿಗೆ ಸಂಬಂಧಿಸಿದ ಎಲ್ಲವೂ ಗುಲಾಬಿ ಬಣ್ಣದಲ್ಲೇ ಇರಲಿದೆ. ತಂಡದ ಕಿಟ್‌ಗಳಲ್ಲಿ ಆರ್‌ಆರ್‌ಎಫ್ನಿಂದ ಲಾಭ ಪಡೆದ ಮಹಿಳೆಯರ ಹೆಸರು ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next