Advertisement

ಕೋಟ್ಲಾ ಕದನಕ್ಕೆ ಕಾದಿವೆ ಆರ್‌ಸಿಬಿ-ಡೆಲ್ಲಿ

11:49 PM May 05, 2023 | Team Udayavani |

ಹೊಸದಿಲ್ಲಿ: ಅಂಕಪಟ್ಟಿಯಲ್ಲಿ ಮೇಲೇರಲು ಶತಪ್ರಯತ್ನ ಮಾಡುತ್ತಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಕೊನೆಯ ಸ್ಥಾನಕ್ಕೆ ಗಮ್‌ ಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್‌ ಶನಿವಾರ ರಾತ್ರಿ “ಫಿರೋಜ್‌ ಶಾ ಕೋಟ್ಲಾ”ದಲ್ಲಿ ದ್ವಿತೀಯ ಸುತ್ತಿನ ಕದನಕ್ಕೆ ಅಣಿಯಾಗಿವೆ. ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳನ್ನು ರೋಚಕವಾಗಿ ಗೆದ್ದ ಖುಷಿಯಲ್ಲಿವೆ.

Advertisement

ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ 23 ರನ್ನುಗಳಿಂದ ಡೆಲ್ಲಿಯನ್ನು ಕೆಡವಿತ್ತು. ಡು ಪ್ಲೆಸಿಸ್‌ ಪಡೆ 6ಕ್ಕೆ 174 ರನ್‌ ಗಳಿಸಿದರೆ, ವಾರ್ನರ್‌ ಬಳಗ 9ಕ್ಕೆ 151 ರನ್‌ ಮಾಡಿ ಶರಣಾಗಿತ್ತು. ಇದಕ್ಕೆ ತವರಿನಂಗಳದಲ್ಲಿ ಸೇಡು ತೀರಿಸಿಕೊಳ್ಳಲು ಡೆಲ್ಲಿಯಿಂದ ಸಾಧ್ಯವೇ ಎಂಬುದೊಂದು ನಿರೀಕ್ಷೆ. ಹಾಗೆಯೇ ಈ ಋತುವಿನ ಕೆಲವು ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ ವಿರಾಟ್‌ ಕೊಹ್ಲಿ ಅವರಿಗೂ ಇದು ತವರು ಪಂದ್ಯ.

ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳೆರಡರ ಕೊನೆಯ ಗೆಲುವು ಸಣ್ಣ ಮೊತ್ತದ ಹೋರಾಟದಲ್ಲಿ ದಾಖಲಾಗಿತ್ತು. ಲಕ್ನೋ ಅಂಗಳದಲ್ಲಿ ಆರ್‌ಸಿಬಿ ಕೇವಲ 126 ರನ್‌ ಗಳಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಮರುದಿನವೇ ಹೈದರಾಬಾದ್‌ ವಿರುದ್ಧ ಡೆಲ್ಲಿ ಬರೀ 130 ರನ್‌ ಮಾಡಿ 5 ರನ್ನಿನಿಂದ ಗೆದ್ದು ಬಂದಿತ್ತು. ಕೋಟ್ಲಾ ಗ್ರೌಂಡ್‌ನ‌ಲ್ಲಿ ಇತ್ತಂಡಗಳು ಬ್ಯಾಟಿಂಗ್‌ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ.

ಮಿಡ್ಲ್ ಆರ್ಡರ್‌ ಸಮಸ್ಯೆ
ಆರ್‌ಸಿಬಿಯ ಬಹು ದೊಡ್ಡ ಸಮಸ್ಯೆಯೆಂದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನದ್ದು. ಫಾ ಡು ಪ್ಲೆಸಿಸ್‌, ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌
ವೆಲ್‌ ಹೊರತುಪಡಿಸಿದರೆ ತಂಡದಲ್ಲಿ ಬ್ಯಾಟರ್‌ಗಳೇ ಇಲ್ಲ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಇವರಲ್ಲಿ ಮೂವರೂ ಒಟ್ಟಿಗೇ ಸಿಡಿದು ನಿಂತದ್ದು ಅಪರೂಪ. ಒಬ್ಬರಾದರೂ ಸೊನ್ನೆ ಸುತ್ತಿ ಹೋಗುವುದು ಮಾಮೂಲು. ಹಾಗೆಯೇ ವನ್‌ಡೌನ್‌ನಲ್ಲಿ ಸೂಕ್ತ ಬ್ಯಾಟ್ಸ್‌ಮನ್‌ಗಳೇ ಇಲ್ಲ. ಬಹುಶಃ ಈ ಕ್ರಮಾಂಕದಲ್ಲಿ ಇನ್ನು ಬ್ಯಾಟ್‌ ಹಿಡಿದು ಬರಲು ಯಾರೂ ಬಾಕಿ ಇಲ್ಲವೇನೋ!

ಇಂಥ ಸ್ಥಿತಿಯಲ್ಲಿ ಮಹಾರಾಷ್ಟ್ರದ ಕೇದಾರ್‌ ಜಾಧವ್‌ ಅಚ್ಚರಿಯ ಕರೆ ಪಡೆದಿದ್ದಾರೆ. ಗಾಯಾಳು ವೇಗಿ ಡೇವಿಡ್‌ ವಿಲ್ಲಿ ಬದಲು ಆರ್‌ಸಿಬಿ
ಬ್ಯಾಟರ್‌ಗೆ ಪ್ರಾಮುಖ್ಯತೆ ನೀಡಿದೆ. ಜಾಧವ್‌ ಡೆಲ್ಲಿ ವಿರುದ್ಧ ಆಡುವ ಸಾಧ್ಯತೆ ಇದೆ. ಇದರಿಂದ ತಂಡದ ಸಮಸ್ಯೆ ಬಗೆಹರಿದೀತೇ ಎಂಬುದಷ್ಟೇ ಪ್ರಶ್ನೆ.
ಆರ್‌ಸಿಬಿ ಬೌಲಿಂಗ್‌ ವಿಭಾಗ ಇಲ್ಲಿಯ ತನಕ ದುರ್ಬಲವಾಗಿಯೇ ಇತ್ತು. ಇದಕ್ಕೀಗ ಆಸ್ಟ್ರೇಲಿಯನ್‌ ವೇಗಿ ಜೋಶ್‌ ಹೇಝಲ್‌ವುಡ್‌ ಹೆಚ್ಚಿನ ಬಲ ತುಂಬಿದ್ದಾರೆ. ಲಕ್ನೋ ವಿರುದ್ಧದ ಬೌಲಿಂಗ್‌ ಟ್ರ್ಯಾಕ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿತ್ತು. ಮೊಹಮ್ಮದ್‌ ಸಿರಾಜ್‌, ಹರ್ಷಲ್‌ ಪಟೇಲ್‌, ಸ್ಪಿನ್ನರ್‌ಗಳಾದ ವನಿಂದು ಹಸರಂಗ, ಕಣ್‌ì ಶರ್ಮ… ಎಲ್ಲರೂ ಮಿಂಚಿದ್ದರು.

Advertisement

ಆದರೆ ಬ್ಯಾಟಿಂಗ್‌ಗೆ ಸಹಕರಿಸುವ ಪಿಚ್‌ನಲ್ಲೂ ಬೆಂಗಳೂರು ಟೀಮ್‌ನ ಬೌಲಿಂಗ್‌ ಹರಿತಗೊಳ್ಳಬೇಕಿದೆ. ಕೆಲವು ಕೋನಗಳಲ್ಲಿ ಸಣ್ಣ ಅಂಗಳವಾಗಿ ಗೋಚರಿಸುವ ಕೋಟ್ಲಾದಲ್ಲಿ ರನ್‌ಮಳೆಯಾಗುವ ಸಾಧ್ಯತೆ ಇದೆ. ಹೈದರಾಬಾದ್‌ ವಿರುದ್ಧ ಇಲ್ಲಿ ಆಡಲಾದ ಕೊನೆಯ ಪಂದ್ಯದಲ್ಲಿ ಬ್ಯಾಟರ್‌ಗಳು ಮಿಂಚಿದ್ದನ್ನು ಮರೆಯುವಂತಿಲ್ಲ. ಹೈದರಾಬಾದ್‌ 6ಕ್ಕೆ 197 ರನ್‌ ಪೇರಿಸಿದರೆ, ಡೆಲ್ಲಿ 6ಕ್ಕೆ 188 ರನ್‌ ಗಳಿಸಿ 9 ರನ್‌ ಸೋಲನುಭವಿಸಿತ್ತು.

ಈ ಪಂದ್ಯದಲ್ಲಿ ಡೆಲ್ಲಿಯ ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಸರಣಿಯಲ್ಲೇ ಅಮೋಘ ಪ್ರದರ್ಶನ ನೀಡಿದ್ದರು. 27ಕ್ಕೆ 4 ವಿಕೆಟ್‌ ಉರುಳಿಸುವ ಜತೆಗೆ 63 ರನ್‌ ಬಾರಿಸಿದ್ದರು. ಫಿಲ್‌ ಸಾಲ್ಟ್ ಕೂಡ ಅರ್ಧ ಶತಕ ಬಾರಿಸಿದ್ದರು. ಆದರೆ ಉಳಿದವರ ಸತತ ವೈಫ‌ಲ್ಯ ಡೆಲ್ಲಿಯನ್ನು ಕಾಡುತ್ತಲೇ ಇದೆ.

ಬ್ಯಾಟಿಂಗ್‌ಗಿಂತ ಡೆಲ್ಲಿಯ ಬೌಲಿಂಗ್‌ ವಿಭಾಗವೇ ಹೆಚ್ಚು ವೈವಿಧ್ಯಮಯ ಎನ್ನಲಡ್ಡಿಯಿಲ್ಲ. ಇಶಾಂತ್‌ ಶರ್ಮ, ಆ್ಯನ್ರಿಚ್‌ ನೋರ್ಜೆ, ಖಲೀಲ್‌ ಅಹ್ಮದ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಅವರ ಕ್ವಾಲಿಟಿ ಬೌಲಿಂಗ್‌ ಡೆಲ್ಲಿಯನ್ನು ಮೇಲೆತ್ತಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next