Advertisement

ಶೀಘ್ರ ಬರಲಿದೆ ಇ-ರೂಪಾಯಿ; ಆರ್‌ಬಿಐ ಸಲಹಾ ಪತ್ರಿಕೆಯಲ್ಲಿ ಉಲ್ಲೇಖ

11:38 PM Oct 07, 2022 | Team Udayavani |

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಶೀಘ್ರವೇ ಸೀಮಿತ ಉಪಯೋಗಕ್ಕಾಗಿ ಇ- ರೂಪಾಯಿಯನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಜತೆಗೆ ಆ ನಿಟ್ಟಿನಲ್ಲಿ ಶುಕ್ರವಾರ ಸಲಹಾ ಪತ್ರಿಕೆಯನ್ನೂ ಬಿಡುಗಡೆ ಮಾಡಿದೆ.

Advertisement

ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ(ಸಿಬಿಡಿಸಿ) ಹೆಸರಿನಲ್ಲಿ ಆರ್‌ಬಿಐ ಇ- ರೂಪಾಯಿಯನ್ನು ಬಿಡುಗಡೆ ಮಾಡಲಿದೆ.

ಡಿಜಿಟಲ್‌ ರೂಪಾಯಿ ಎಂದರೇನು?
ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ(ಸಿಬಿಡಿಸಿ) ಅನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡಿದ ಕಾನೂನುಬದ್ಧ ಕರೆನ್ಸಿ ಎಂದು ವ್ಯಾಖ್ಯಾನಿಸಬಹುದು. ಇದನ್ನು ಡಿಜಿಟಲ್‌ ರೂಪಾಯಿ ಅಥವಾ ಇ-ರೂಪಾಯಿ ಎಂದು ಕರೆಯಬಹುದು. ಆರ್‌ಬಿಐನ ಸಿಬಿಡಿಸಿ ಸಾಮಾನ್ಯ ಕರೆನ್ಸಿಯಂತೆಯೇ, ಇದು ವರ್ಗಾಯಿಸಬಹುದಾದ ಕರೆನ್ಸಿಯಾಗಿದೆ.

ಸಿಬಿಡಿಸಿ ವಿಧಗಳು:
ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ(ಸಿಬಿಡಿಸಿ)ಯನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ. ಸಾಮಾನ್ಯ ಅಥವಾ ರೀಟೆಲ್‌(ಸಿಬಿಡಿಸಿ-ಆರ್‌) ಮತ್ತು ವೋಲ್‌ಸೆಲ್‌(ಸಿಬಿಡಿಸಿ-ಡಬ್ಲ್ಯೂ ). ರೀಟೆಲ್‌ ಸಿಬಿಡಿಸಿ ಅನ್ನು ಖಾಸಗಿ ವಲಯ, ಸಾಮಾನ್ಯ ಗ್ರಾಹಕರು ಮತ್ತು ವ್ಯವಹಾರಗಳಿಗಾಗಿ ಎಲ್ಲರೂ ಬಳಕೆ ಮಾಡಬಹುದಾಗಿದೆ. ವೋಲ್‌ಸೇಲ್‌ ಸಿಬಿಡಿಸಿ ಅನ್ನು ಆಯ್ದ ಹಣಕಾಸು ಸಂಸ್ಥೆಗಳು ನಿರ್ದಿಷ್ಟ ಬಳಕೆಗಾಗಿ ಬಳಸಲಾಗುತ್ತದೆ.

ರೀಟೆಲ್‌ ಸಿಬಿಡಿಸಿ ಚಿಲ್ಲರೆ ವಹಿವಾಟಿಗಾಗಿ ನಗದು ರೂಪಕ್ಕೆ ಬದಲಾಗಿ ಇರುವ ಎಲೆಕ್ಟ್ರಾನಿಕ್‌ ರೂಪವಾಗಿ ವಿನ್ಯಾಸಗೊಳಿಸಲಾಗಿದೆ. ವೋಲ್‌ಸೇಲ್‌ ಸಿಬಿಡಿಸಿ ಅನ್ನು ಅಂತರ್‌ಬ್ಯಾಂಕ್‌ ವರ್ಗಾವಣೆ ಮತ್ತು ಸಂಬಂಧಿತ ಸಗಟು ವಹಿವಾಟುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

Advertisement

ಡಿಜಿಟಲ್‌ ರೂಪಾಯಿ ಹೇಗೆ ಭಿನ್ನ:
ಪ್ರಸ್ತುತ ಸಾರ್ವಜನಿಕರ ಬಳಕೆಯಲ್ಲಿರುವ “ಡಿಜಿಟಲ್‌ ಮನಿ’ಗಿಂತ ಸಿಬಿಡಿಸಿ ಭಿನ್ನವಾಗಿದೆ. ಏಕೆಂದರೆ ಸಿಬಿಡಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಉತ್ತರದಾಯಿತ್ವ ಹೊಂದಿದೆ. ಹಾಗೂ ಇದು ಯಾವುದೇ ವಾಣಿಜ್ಯ ಬ್ಯಾಂಕ್‌ನ ಉತ್ತರದಾಯಿತ್ವ ಅಲ್ಲ.

ಡಿಜಿಟಲ್‌ ರೂಪಾಯಿಯ ವೈಶಿಷ್ಯಗಳೇನು:
– ಸಿಬಿಡಿಸಿ ಎಂಬುದು ಕೇಂದ್ರೀಯ ಬ್ಯಾಂಕುಗಳು ತಮ್ಮ ಹಣಕಾಸು ನೀತಿಗೆ ಅನುಗುಣವಾಗಿ ನೀಡಲಾದ ಅಧಿಕೃತ ಕರೆನ್ಸಿಯಾಗಿದೆ.
– ಇದು ಆರ್‌ಬಿಐನ ಬ್ಯಾಲೆನ್ಸ್‌ಶೀಟ್‌ನಲ್ಲಿ ಲಯಬಿಲಿಯಾಗಿ ದಾಖಲಾಗಲಿದೆ.
– ಇದನ್ನು ಎಲ್ಲ ನಾಗರಿಕರು, ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳು ಪಾವತಿಯ ಮಾಧ್ಯಮವಾಗಿ, ಕಾನೂನುಬದ್ಧ ಕರೆನ್ಸಿಯಾಗಿ ಬಳಕೆ ಮಾಡಬಹುದು.
– ವಾಣಿಜ್ಯ ಬ್ಯಾಂಕ್‌ನ ಹಣ ಮತ್ತು ನಗದಾಗಿ ಸಿಬಿಡಿಸಿ ಯನ್ನು ಮುಕ್ತವಾಗಿ ವರ್ಗಾಯಿಸಬಹುದಾಗಿದೆ.
– ಸಿಬಿಡಿಸಿ ಕಾನೂನುಬದ್ಧ ಕರೆನ್ಸಿಯಾಗಿದ್ದು, ಇದನ್ನು ಹೊಂದಲು ಬ್ಯಾಂಕ್‌ ಖಾತೆಯ ಅಗತ್ಯವಿಲ್ಲ.
– ಸಿಬಿಡಿಸಿಯು ನಗದು ವಿತರಣೆ ಮತ್ತು ವಹಿವಾಟಿನ ವೆಚ್ಚವನ್ನು ತಗ್ಗಿಸಲಿದೆ ಎಂಬ ನಿರೀಕ್ಷೆಯಿದೆ.

ಸಿಬಿಡಿಸಿ ಉಪಯೋಗಗಳು:
– ನಗದು ನಿರ್ವಹಣೆ ವೆಚ್ಚ ತಗ್ಗಿಸುವ ಸಾಧ್ಯತೆ.
– ಕಡಿಮೆ ನಗದು ಆರ್ಥಿಕತೆ ಸಾಧಿಸಲು ಡಿಜಿಟಲೀಕರಕ್ಕೆ ಇದು ಸಹಕಾರಿ.
– ಪಾವತಿಯಲ್ಲಿ ಸ್ಪರ್ಧೆ, ದಕ್ಷತೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲಿದೆ.
– ಗಡಿಯಾಚೆಗಿನ ವಹಿವಾಟುಗಳ ಸುಧಾರಣೆಗೆ ಸಿಬಿಡಿಸಿ ಬಳಕೆ.

Advertisement

Udayavani is now on Telegram. Click here to join our channel and stay updated with the latest news.

Next