ಹೊಸದಿಲ್ಲಿ : ದೇಶದಲ್ಲಿ ನಗದು ರಹಿತ ವ್ಯವಹಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಸೇವಾ ಶುಲ್ಕವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಬ್ಯಾಂಕುಗಳಿಗೆ ನೀಡಿರುವುದಾಗಿ ಹಣಕಾಸು ವ್ಯವಹಾರಗಳ ಕೇಂದ್ರ ಸಹಾಯಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ. ಅಂತೆಯೇ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿದರವನ್ನು ಇಳಿಸಲು ಆರ್ ಬಿ ಐ ಉದ್ದೇಶಿಸಿದೆ ಎಂದವರು ಹೇಳಿದ್ದಾರೆ.
ಕ್ರೆಡಿಟ್ ಕಾರ್ಡ್ ಪಾವತಿ ಬಾಕಿಗೆ ವಿಧಿಸಲಾಗುವ ಬಡ್ಡಿ ದರದ ಮೇಲಿನ ನಿಯಂತ್ರಣವನ್ನು ಆರ್‌ಬಿಐ ಬಿಟ್ಟುಕೊಟ್ಟಿದೆ. ಆರ್‌ಬಿಐ ಕಾಲಕಾಲಕ್ಕೆ ಬಡ್ಡಿ ಕುರಿತಾಗಿ ನೀಡುವ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಆಯಾ ಬ್ಯಾಂಕುಗಳ ನಿರ್ದೇಶಕ ಮಂಡಳಿಯು ನೀಡುವ ಒಪ್ಪಿಗೆಯ ಪ್ರಕಾರ ಬಡ್ಡಿ ದರಗಳನ್ನು ನಿರ್ಧರಿಸಲಾಗುತ್ತದೆ. ಆರ್‌ಬಿಐ ಈ ಸಂಬಂಧ ಕಮಿಷನ್ ದರ ಕುರಿತಾದ ಯಾವುದೇ ಮಾಹಿತಿಗಳನ್ನು ಇರಿಸಿಕೊಳ್ಳುವುದಿಲ್ಲ.
ಆಧಾರ್ ಕಾರ್ಡ್ ಆಧರಿಸಿಕೊಂಡು ವ್ಯಾಪಾರಿಗಳಿಗೆ ಮಾಡಲಾಗುವ ಪಾವತಿಯ ಮೇಲೆ ಶೇ.0.5 ರ ಪ್ರೋತ್ಸಾಹನೆಯನ್ನು ನೀಡುವುದಕ್ಕೆ ನಬಾರ್ಡ್ ಸಮ್ಮತಿಸಿದೆ.
ಪಿಓಎಸ್ ಮಶೀನ್‌ಗಳ ಮೂಲಕ ನಡೆಯುವ ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ ಸಂಬಂಧಿಸಿದಂತೆ 2017ರ ಜನವರಿ 1ರಿಂದ ಮಾರ್ಚ್ 31ರ ವರೆಗಿನ ಅವಧಿಯ ತನಕ 1,000 ರೂ. ವರೆಗಿನ ಪಾವತಿಗೆ ಶೇ.0.25, ಮತ್ತು 1,000 ರೂ.ಗಳಿಂದ 2,000 ರೂ. ವರೆಗಿನ ವ್ಯವಹಾರಗಳಿಗೆ ಶೇ.0.50 ಎಂಡಿಆರ್ ನೀಡಲಾಗುವುದು.
2017ರ ಮಾರ್ಚ್ 31ರ ವರೆಗೆ ಐಎಂಪಿಎಸ್, ಯುಎಸ್‌ಎಸ್‌ಡಿ ಮತುತ ಯುಪಿಐ ಮೂಲಕ ಗ್ರಾಹಕರು ಮಾಡುವ 1,000 ರೂ. ವರೆಗಿನ ಪಾವತಿ ವ್ಯವಹಾರಗಳಿಗೆ ಯಾವುದೇ ಶುಲ್ಕ ವಿಧಿಸಕೂಡದೆಂದು ಆರ್ ಬಿ ಐ ಸೂಚಿಸಿದೆ.
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚಾರ್ಜ್ ಕಾರ್ಡ್ ಮತ್ತು ಇತರ ಬಗೆಯ ಪಾವತಿ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಲಾಗುವ 2,000 ರೂ.ಗಳ ವರೆಗಿನ ವ್ಯವಹಾರಗಳ ಮೇಲಿನ ಯಾವುದೇ ರೀತಿಯ ಬ್ಯಾಂಕ್ ಸೇವಾ ಶುಲ್ಕಕ್ಕೆ ವಿನಾಯಿತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರೋತ್ಸಾಹನ ನೀಡಲು ಸರಕಾರ ಲಕ್ಕಿ ಗ್ರಾಹಕ ಯೋಜನೆ, ವ್ಯಾಪಾರಿಗಳಿಗೆ ಡಿಜಿ ಧನ ಯೋಜನೆಯನ್ನು ಆರಂಭಿಸಿದೆ.