Advertisement

RBI Monetary Policy: ಬಡ್ಡಿದರ ಏರಿಕೆಗೆ ಬ್ರೇಕ್‌! ಯಥಾಸ್ಥಿತಿ ಕಾಯ್ದುಕೊಂಡ RBI

12:25 AM Apr 07, 2023 | Team Udayavani |

ಮುಂಬಯಿ: ಬಡ್ಡಿ ದರ ಏರಿಕೆಯ ಸರಣಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಾತ್ಕಾಲಿಕ ಬ್ರೇಕ್‌ ಹಾಕಿದೆ. 3 ದಿನಗಳ ಕಾಲ ನಡೆದ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ ಗುರುವಾರ ಮುಕ್ತಾಯವಾಗಿದ್ದು, ರೆಪೋ ದರದಲ್ಲಿ ಯಥಾಸ್ಥಿತಿ (ಶೇ. 6.5) ಕಾಯ್ದುಕೊಳ್ಳಲಾಗಿದೆ. ಆರ್‌ಬಿಐನ ಈ ನಿರ್ಧಾರದಿಂದಾಗಿ ಮತ್ತೆ ಬಡ್ಡಿಯ ಬರೆ ಬೀಳಲಿದೆ ಎಂಬ ಭೀತಿಯಲ್ಲಿದ್ದ ಜನಸಾಮಾನ್ಯರು ನಿರಾಳರಾಗಿದ್ದಾರೆ.

Advertisement

ರೆಪೋ ದರ ಯಥಾ ಸ್ಥಿತಿಯು ಕೇವಲ ಎಪ್ರಿಲ್‌ ತಿಂಗಳ ಸಭೆಗೆ ಮಾತ್ರ ಸೀಮಿತವಾಗಿದ್ದು, ಅಗತ್ಯ ಬಿದ್ದರೆ ಕ್ರಮ ಕೈಗೊಳ್ಳಲು ನಾವು ಹಿಂದೆ -ಮುಂದೆ ನೋಡುವುದಿಲ್ಲ ಎಂದೂ ಹೇಳುವ ಮೂಲಕ, ಮುಂದಿನ ಬಾರಿ ಬಡ್ಡಿ ಏರಿಕೆ ಮಾಡಲೂ ಬಹುದು ಎಂಬ ಸುಳಿವನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ನೀಡಿದ್ದಾರೆ.

ಯುಪಿಐ ಮೂಲಕ ಸಾಲ!
ದೇಶದಲ್ಲಿನ ಯುಪಿಐ (ಯುನಿ ಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಆರ್‌ಬಿಐ ನಿರ್ಧರಿಸಿದ್ದು, ಗ್ರಾಹಕರು ಇನ್ನು ಮುಂದೆ ಬ್ಯಾಂಕ್‌ನಿಂದ ಯುಪಿಐ ಮೂಲಕ ಸಾಲ ಪಡೆಯುವ ವ್ಯವಸ್ಥೆಯನ್ನು ಪರಿಚಯಿಸಲು ಪ್ರಸ್ತಾವಿಸಿದೆ. ಇದು ಜಾರಿಯಾದರೆ, ಈಗಲೇ ಖರೀದಿಸಿ, ಅನಂತರ ಪಾವತಿಸಿ (ಬೈ ನೌ, ಪೇ ಲೇಟರ್‌) ಪ್ಲಾಟ್‌ಫಾರ್‌ಂ ಮೂಲಕ ನೇರವಾಗಿ ಯುಪಿಐನಿಂದ ಸಾಲ ಪಡೆಯಬಹುದು. ಇದರಿಂದ ಗ್ರಾಹಕರು ಸಾಲಕ್ಕಾಗಿ ಬ್ಯಾಂಕ್‌ ಮೊರೆ ಹೋಗುವುದು ತಪ್ಪುತ್ತದೆ, ವೆಚ್ಚ, ಸಮಯವೂ ಉಳಿತಾಯವಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ವಾರಸುದಾರರಿಲ್ಲದ ಠೇವಣಿ ಪತ್ತೆಗೆ ವೆಬ್‌ ಪೋರ್ಟಲ್‌
ದೇಶದ ವಿವಿಧ ಬ್ಯಾಂಕುಗಳಲ್ಲಿದ್ದ ವಾರಸುದಾರರಿಲ್ಲದ ಸುಮಾರು 35 ಸಾವಿರ ಕೋಟಿ ರೂ.ಗಳ ಠೇವಣಿಯು ಈಗ ಆರ್‌ಬಿಐ ಸುಪರ್ದಿಗೆ ಬಂದಿದೆ. ಈ ಮೊತ್ತವು ಅವುಗಳ ನ್ಯಾಯಯುತ ಮಾಲಕರಿಗೆ ಮತ್ತು ಅರ್ಹ ಫ‌ಲಾನುಭವಿಗಳಿಗೆ ಸೇರಬೇಕು ಎಂಬ ಉದ್ದೇಶದಿಂದ ಆರ್‌ಬಿಐ ಈಗ ಮಹತ್ವದ ಹೆಜ್ಜೆಯಿ ಇಟ್ಟಿದೆ. ಅದರಂತೆ, ಇನ್ನು ಮುಂದೆ ಬ್ಯಾಂಕ್‌ ಗ್ರಾಹಕರು ಇಂತಹ ಠೇವಣಿಗಳ ಮಾಹಿತಿ ಪಡೆಯಲು ಬೇರೆ ಬೇರೆ ಬ್ಯಾಂಕುಗಳ ವೆಬ್‌ಸೈಟ್‌ಗಳಲ್ಲಿ ಜಾಲಾಡಬೇಕಾಗಿಲ್ಲ. ಇದಕ್ಕೆಂದೇ ಭಾರತೀಯ ರಿಸರ್ವ್‌ ಬ್ಯಾಂಕ್‌ ಒಂದು ಕೇಂದ್ರೀಕೃತ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಲಿದೆ. ಗ್ರಾಹಕರು ತಮ್ಮ 10 ವರ್ಷಗಳು ಮತ್ತು ಅದಕ್ಕಿಂತ ಹಳೆಯದಾದ ಠೇವಣಿಯ ವಿವರಗಳನ್ನು ಒಂದೇ ಕಡೆ ಪಡೆಯಲು ಈ ಹೊಸ ವೆಬ್‌ ಪೋರ್ಟಲ್‌ ನೆರವಾಗಲಿದೆ. ಇದರಿಂದ ವಾರಸುದಾರರಿಲ್ಲದ ಹಣವು ಅದರ ನ್ಯಾಯಯುತ ಮಾಲಕರಿಗೆ ಅಥವಾ ಫ‌ಲಾನುಭವಿಗಳಿಗೆ ದೊರೆಯಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಸರ್ಚ್‌ ಫ‌ಲಿತಾಂಶವನ್ನು ಪರಿಣಾಮಕಾರಿಯಾಗಿಸಲಾಗುತ್ತದೆ ಎಂದು ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next