ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಶುಕ್ರವಾರ (ಜೂನ್ 04) ದ್ವೈಮಾಸಿಕ ಹಣಕಾಸು ನೀತಿಯ ಪರಿಶೀಲನೆ ನಡೆಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿಯೇ (ಶೇ.4) ಮುಂದುವರಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ
ರೆಪೋ ಮತ್ತು ರಿವರ್ಸ್ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿರುವುದು ಸಾಲಗಾರರ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ. ರೆಪೋ ದರವನ್ನು ಈ ಹಿಂದಿನ ಶೇ.4ರಷ್ಟು ಹಾಗೂ ರಿವರ್ಸ್ ರೆಪೋ ದರ ಶೇ.3.35ರಷ್ಟರಲ್ಲಿ ಮುಂದುವರಿಸಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ 19 ಸೋಂಕು ಎರಡನೇ ಅಲೆ ತಡೆಗಟ್ಟಲು ಹೊಸ ನಿರ್ಬಂಧಗಳನ್ನು ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಆರ್ ಬಿಐ ತಿಳಿಸಿದೆ. ರೆಪೋ ದರ ಯಥಾಸ್ಥಿತಿ ಮುಂದುವರಿಕೆಯಿಂದ ಗೃಹ ಮತ್ತು ವಾಹನಗಳ ಮೇಲಿನ ಸಾಲದ ಇಎಂಐ ಇಳಿಕೆಯಾಗಲಿದೆ ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ.
ಏನಿದು ರಿವರ್ಸ್ ರೆಪೋ ದರ?
ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನ ಸಾಧಿಸಲು ರಿವರ್ಸ್ ರೆಪೋ ದರ ಪ್ರಮುಖ ಪಾತ್ರ ವಹಿಸುತ್ತದೆ.