ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್, ದೀರ್ಘ ಕಾಲದಿಂದ ಶೇ.6.25ರಲ್ಲೇ ಉಳಿದಿದ್ದ ತನ್ನ ರಿಪೋ ಬಡ್ಡಿ ದರವನ್ನು ಶೇ.0.25ರಷ್ಟು ಕಡಿಮೆ ಮಾಡಿ ಶೇ.6.00 ಮಟ್ಟಕ್ಕೆ ಇಳಿಸಿದೆ. ಇದು 2010ರ ನವೆಂಬರ್ ಬಳಿಕದ ಕನಿಷ್ಠ ಮಟ್ಟವಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಹಣದುಬ್ಬರವು ಐದು ವರ್ಷಗಳಿಗೂ ಅಧಿಕ ಕಾಲದ ಕನಿಷ್ಠ ಮಟ್ಟವಾಗಿ ಶೇ.1.54ಕ್ಕೆ ಇಳಿದಿರುವ ಕಾರಣ ಆರ್‌ಬಿಐ ತನ್ನ ರಿಪೋ ಬಡ್ಡಿ ದರವನ್ನು ಶೇ.025ರಷ್ಟು ಕಡಿಮೆ ಮಾಡಿರುವುದು ದೇಶದ ಕೈಗಾರಿಕಾ ರಂಗದ ನಿರೀಕ್ಷೆಗೆ ಅನುಗುಣವಾಗಿಯೇ ಇದೆ.
ಆರ್‌ಬಿಐ ರಿಪೋ ಬಡ್ಡಿದರವನ್ನು ಶೇ.0.25ರಷ್ಟು ಕಡಿಮೆ ಮಾಡಿರುವುದರಿಂದ ಈಗಿನ್ನು ಎಲ್ಲ ಬಗೆಯ ಬ್ಯಾಂಕ್ ಸಾಲಗಳು, ಹೊಸತೇ ಇರಲಿ, ಈಗಾಗಲೇ ಚಾಲ್ತಿಯಲ್ಲಿರುವ ಸಾಲಗಳೇ ಆಗಲಿ – ಅಗ್ಗವಾಗಲಿವೆ – ಅದು ಬೇಕಿದ್ದರೆ ಗೃಹ ಸಾಲವೇ ಇರಲಿ, ಮೋಟಾರು ವಾಹನ ಸಾಲವೇ ಇರಲಿ ಅಥವಾ ವೈಯಕ್ತಿಕ ಸಾಲವೇ ಇರಲಿ – ಗ್ರಾಹಕರಿಗೆ ಅನುಕೂಲಕರವಾಗಲಿವೆ. ರಿಪೋ ದರ ಕಡಿತದಿಂದ ಎಂಸಿಎಲ್‌ಆರ್ ಕೂಡ ಕಡಿಮೆಯಾಗಲಿದೆ ಎಂದು ಬ್ಯಾಂಕ್ ಬಜಾರ್ ಡಾಟ್ ಕಾಮ್‌ನ ಸಿಇಓ ಅಧಿಲ್ ಶೆಟ್ಟಿ ಹೇಳಿದ್ದಾರೆ.
ಆದರೆ ಆರ್‌ಬಿಐ ರಿಪೋ ಬಡ್ಡಿ ದರ ಕಡಿತವನ್ನು ಪ್ರಕಟಿಸಿದ ಬೆನ್ನಿಗೇ ಮುಂಬಯಿ ಶೇರು ಮಧ್ಯಾಹ್ನ 3.10ರ ಹೊತ್ತಿಗೆ 93.61 ಅಂಕಗಳಷ್ಟು ಕೆಳಮುಖವಾಗಿದೆಯಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 33.10 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
2016ರ ಅಕ್ಟೋಬರ್ ಬಳಿಕದಲ್ಲಿ ಆರ್‌ಬಿಐ ಮಾಡಿರುವ ಮೊದಲ ರೇಟ್ ಕಟ್ ಇದಾಗಿದ್ದು ಈಗ ನಿಗದಿಸಲಾಗಿರುವ ರಿಪೋ ದರ ಶೇ.6.00 ಕಳೆದ ಆರು ವರ್ಷಗಳಲ್ಲೇ ಕನಿಷ್ಠ ವಾಗಿದೆ.