ನವದೆಹಲಿ: ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಲಿರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸತತ ಮೂರನೇ ಬಾರಿಗೆ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಶುಕ್ರವಾರ (ಡಿಸೆಂಬರ್ 04, 2020) ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.
ಒಂದು ವೇಳೆ ಭವಿಷ್ಯದಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ಆರ್ಥಿಕ ಚೇತರಿಕೆಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಇನ್ನಷ್ಟು ರೆಪೋ ದರ ಕಡಿತಗೊಳಿಸಲು ಬದ್ಧವಾಗಿರುವುದಾಗಿಯೂ ಆರ್ ಬಿಐ ಈ ಸಂದರ್ಭದಲ್ಲಿ ಹೇಳಿದೆ.
ದೇಶದ ಆರ್ಥಿಕ ಉತ್ತೇಜನಕ್ಕಾಗಿ ರೆಪೋ ದರ ಕಡಿತಗೊಳಿಸಲಾಗುತ್ತದೆ. ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಆರ್ ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ) ಸರ್ವಾನುಮತದ ಮತ ನೀಡಿದೆ. ಕೋವಿಡ್ 19 ಸೋಂಕಿನ ನಡುವೆಯೂ ದೇಶ ವೇಗವಾಗಿ ಆರ್ಥಿಕ ಚೇತರಿಕೆ ಕಂಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?
ರೆಪೋ ದರವನ್ನು ಶೇ.4ರಷ್ಟು ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ರಿವರ್ಸ್ ರೆಪೋ ದರ ಶೇ.3.35ರಷ್ಟು ಎಂದು ವಿವರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ.
ಏನಿದು ರಿವರ್ಸ್ ರೆಪೋ ದರ?
ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನ ಸಾಧಿಸಲು ರಿವರ್ಸ್ ರೆಪೋ ದರ ಪ್ರಮುಖ ಪಾತ್ರ ವಹಿಸುತ್ತದೆ.