Advertisement

ಇಎಂಐ ಏರಿಕೆ ಸದ್ಯಕ್ಕಿಲ್ಲ

08:49 AM Oct 06, 2018 | |

ಮುಂಬಯಿ: ಗೃಹ, ವಾಹನ ಮತ್ತು ಇತರ ಸಾಲ ಹೊಂದಿರುವವರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ನೆಮ್ಮದಿಯ ಸುದ್ದಿ ನೀಡಿದೆ. ಬಡ್ಡಿ ದರ ಏರಿಕೆಯಾಗಬಹುದೇ ಎಂಬ ಭೀತಿಯಲ್ಲಿ ಇದ್ದವರಿಗೆ ಅಂಥ ಆಘಾತ ನೀಡದೆ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿದೆ. ಬುಧವಾರದಿಂದ 3 ದಿನಗಳ ಕಾಲ ಮುಂಬಯಿಯಲ್ಲಿ ನಡೆದ ಹಣಕಾಸು ನೀತಿ ನಿರ್ವಹಣಾ ಸಮಿತಿ ಸಭೆಯ ಅನಂತರ ಬಡ್ಡಿ ದರ ಏರಿಕೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುವ ಘೋಷಣೆ ಯನ್ನು ಆರ್‌ಬಿಐ ಗವರ್ನರ್‌ ಡಾ| ಊರ್ಜಿತ್‌ ಆರ್‌. ಪಟೇಲ್‌ ಮಾಡಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲ ದರ ಕಳವಳಕಾರಿ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. 

Advertisement

ನಿರ್ಲಿಪ್ತತೆಯಲ್ಲಿ ಇರುವುದರ ಬದಲು ಧೈರ್ಯದಿಂದ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುವ ನಿಲುವನ್ನು ಆರ್‌ಬಿಐ ಪ್ರಕಟಿಸಿದಂತಾಗಿದೆ. ಆದರೆ, ಬಡ್ಡಿ ದರ ಹೆಚ್ಚು ಮಾಡದೇ ಇರುವುದು ಆಶ್ಚರ್ಯಕರ ಎಂದು ವಿಶ್ಲೇಷಿಸಲಾಗುತ್ತದೆ. ಆರು ಮಂದಿ ಸದಸ್ಯರ ಪೈಕಿ ಐವರು ಯಥಾಸ್ಥಿತಿಯ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದರೆ ಒಬ್ಬ ಸದಸ್ಯ ಮಾತ್ರ ಪರಿಷ್ಕರಿಸಬೇಕು ಎಂಬ ವಾದ ಮುಂದಿಟ್ಟಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಅಮೆರಿಕದ ಡಾಲರ್‌ ಎದುರು ರೂಪಾಯಿ ಕುಸಿತ, ಬೆಲೆಯೇರಿಕೆ ಹಿನ್ನೆಲೆಯಲ್ಲಿ ಕಠಿಣ ಕ್ರಮ ಮತ್ತು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಈ ನಿರ್ಧಾರ ಎಂದು ಊರ್ಜಿತ್‌ ಪಟೇಲ್‌ ಹೇಳಿದ್ದಾರೆ. ಹಾಲಿ ಮಾರುಕಟ್ಟೆಯಲ್ಲಿನ ಸ್ಥಿತಿಯಿಂದಾಗಿ ಶೇ.0.50ರ ವರೆಗೆ ಬಡ್ಡಿ ದರ ಏರಿಕೆಯಾಗುವ ನಿರೀಕ್ಷೆ ಮಾಡಲಾಗಿತ್ತು. 

ಕೇಂದ್ರ ಸರಕಾರ ತೈಲದ ಮೇಲಿನ ತೆರಿಗೆ ಪ್ರಮಾಣವನ್ನು 2.50 ರೂ. ಇಳಿಕೆ ಮಾಡಿರುವ ಕ್ರಮ ಚಿಲ್ಲರೆ ಹಣದುಬ್ಬರ ದರ ಏರಿಕೆಗೆ ಅಲ್ಪ ಪ್ರಮಾಣದಲ್ಲಿ ಕಾರಣವಾದೀತು ಎಂದಿದೆ ಆರ್‌ಬಿಐ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 86ರಿಂದ 88 ಡಾಲರ್‌ಗೆ ಹೆಚ್ಚಳವಾಗಿರುವುದು ಶೇ.0.15ರಷ್ಟು ಪ್ರಮಾಣದಲ್ಲಿ ಪ್ರಗತಿ ಮೇಲೆ ಪ್ರತಿಕೂಲ ಮತ್ತು ಶೇ.0.20ರಷ್ಟು ಪ್ರಮಾಣದಲ್ಲಿ ಅಭಿ ವೃದ್ಧಿಗೆ ಕೊರತೆಯಾದೀತು ಎಂದು ಎಚ್ಚರಿಸಿದೆ. ಜತೆಗೆ ಹಾಲಿ ವರ್ಷದ ಆರ್ಥಿಕ ಪ್ರಗತಿ ದರದ ನಿರೀಕ್ಷೆಯಲ್ಲಿ ಶೇ.7.4ನ್ನೇ ಕಾಯ್ದುಕೊಳ್ಳಲಾಗಿದೆ. ನಗದು ಮೀಸಲು ಅನುಪಾತ  ಶೇ.4, ನಗದು ಮೀಸಲು ಮಿತಿ (ಸಿಆರ್‌ಆರ್‌) ಶೇ.4, ರೆಪೋರೇಟ್‌ ಶೇ.6.25 ಅನ್ನೇ ಕಾಯ್ದುಕೊಳ್ಳಲಾಗಿದೆ. 

ರೂಪಾಯಿ ದಾಖಲೆ ಕುಸಿತ
ವಾರಾಂತ್ಯವಾದರೂ ಅಮೆರಿಕದ ಡಾಲರ್‌ ಮುಂದೆ ರೂಪಾಯಿ ಚೇತರಿಸಿಕೊಂಡಿಲ್ಲ. ಒಟ್ಟಾರೆಯಾಗಿ 18 ಪೈಸೆಯಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ ಡಾಲರ್‌ ಎದುರು 73.76 ರೂ.ಗೆ ತಲುಪಿದೆ. ಮಧ್ಯಾಂತರ ವಹಿವಾಟಿನ ವೇಳೆ ಅದು 74ರೂ. ಗಳ ಗಡಿ ದಾಟಿತ್ತು. ಇಂಥ ಬೆಳವಣಿಗೆ ಇದೇ ಮೊದಲ ಬಾರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಬಿಐ ಗವರ್ನರ್‌ ಡಾ.ಊರ್ಜಿತ್‌ ಪಟೇಲ್‌ ಭಾರತದ ಅರ್ಥ ವ್ಯವಸ್ಥೆಗೆ ಸಮನಾಗಿರುವ ಇತರ ರಾಷ್ಟ್ರಗಳ ಕರೆನ್ಸಿಗೆ ಹೋಲಿಕೆ ಮಾಡಿದರೆ ನಮ್ಮ ರೂಪಾಯಿ ದೃಢವಾಗಿದೆ ಎಂದು ಹೇಳಿದ್ದಾರೆ. ರೂಪಾಯಿಗೆ ಎದುರಾಗಿ ಇಷ್ಟೇ ಮೌಲ್ಯದ ವಿನಿಮಯ ದರ ನಿಗದಿ ಮಾಡಬೇಕು ಎಂಬ ಗುರಿ ಇಲ್ಲ ಎಂದು ಹೇಳಿದ್ದಾರೆ. 

Advertisement

ನಿಲ್ಲದ ಪೇಟೆ ಕುಸಿತ 
ಆರ್‌ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಬೆನ್ನಲ್ಲೇ ಬಾಂಬೆ ಷೇರು ಪೇಟೆ ಸೂಚ್ಯಂಕ 792.17 ಅಂಕಗಳಷ್ಟು ಕುಸಿದಿದೆ. ದಿನದ ಅಂತ್ಯಕ್ಕೆ ವಹಿವಾಟು ಮುಕ್ತಾಯದ ಸಂದರ್ಭದಲ್ಲಿ 34,376.99 ಅಂಕಗಳಿಗೆ ಕುಸಿದಿದೆ. ಹೀಗಾಗಿ 6 ತಿಂಗಳ ಹಿಂದಿನ ಕನಿಷ್ಠಕ್ಕೆ ಸೂಚ್ಯಂಕ ಬಂದಂತಾಗಿದೆ. ಇದು ಸತತ 5ನೇ ವಾರದ ನಷ್ಟವಾಗಿದೆ. ಈ ಅವಧಿಯಲ್ಲಿ ಒಟ್ಟು 1,850.15ರಷ್ಟು ಇಳಿಕೆಯಾದಂತಾಗಿದ್ದು, ಆರ್‌ಬಿಐ ನಿರ್ಧಾರ ಘೋಷಣೆಯಾಗುತ್ತಲೇ ಷೇರುಗಳ ಮಾರಾಟ ಬಿರುಸಾಯಿತು. ಇನ್ನು, ನಿಫ್ಟಿ ಸೂಚ್ಯಂಕ 282.80 ಪಾಯಿಂಟ್ಸ್‌ಗಳಷ್ಟು ಪತನವಾಗಿದೆ. ಮಧ್ಯಾಂತರದಲ್ಲಿ ಅದು 10,261.90ಕ್ಕೆ ಇಳಿಯಿತು. ವಹಿವಾಟು ಮುಕ್ತಾಯದ  ವೇಳೆಗೆ 10, 316.45ಕ್ಕೆ ಸ್ಥಿರವಾಯಿತು. ವಾಲ್‌ಸ್ಟ್ರೀಟ್‌ನಲ್ಲಿಯೂ ವಹಿವಾಟು ಕುಸಿದಿತ್ತು. ಜತೆಗೆ ಸಿಂಗಾಪುರ, ಜಪಾನ್‌, ಪ್ಯಾರಿಸ್‌ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿಯೂ ವಹಿವಾಟು ಕುಸಿದಿತ್ತು.

15 ವರ್ಷಗಳಿಗೆ ಹೋಲಿಸಿದರೆ ರೂಪಾಯಿಗೆ ಇದು ಅತ್ಯಂತ ಉತ್ತಮ ಸಮಯ. 5 ವರ್ಷಗಳ ಅವಧಿಯಲ್ಲಿ ಕೇವಲ ಶೇ.7ರಷ್ಟು ಮಾತ್ರ ಕುಸಿದಿದೆ. ಇದು ರೂಪಾಯಿಯ ಗೋಲ್ಡನ್‌ ರನ್‌.
ಪಿಯೂಷ್‌ ಗೋಯಲ್‌, ರೈಲ್ವೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next