ಹೊಸದಿಲ್ಲಿ : ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ತನ್ನ ಮುಖ್ಯ ಬಡ್ಡಿ ದರಗಳನ್ನು ಏರಿಸಿದೆ. ಪರಿಣಾಮವಾಗಿ ಪಡೆದುಕೊಳ್ಳುವ ಸಾಲಗಳು ತುಟ್ಟಿಯಾಗಲಿವೆ; ಜತೆಗೆ ಸಾಲದ ಕಂತಿನ ಮೊತ್ತವೂ ಹೆಚ್ಚಲಿದೆ.
ಆರ್‌ಬಿಐ ರಿಪೋ ದರವನ್ನು ಶೇ.0.25ರಷ್ಟು ಏರಿಸಿ ಶೇ.6.25ಕ್ಕೆ ನಿಗದಿಸಿದೆ; ಹಾಗೆಯೇ ರಿವರ್ಸ್ ರಿಪೋ ದರವನ್ನು ಶೇ.0.25ರಷ್ಟು ಏರಿಸಿ ಶೇ.6ಕ್ಕೆ ನಿಗದಿಸಿದೆ. 2014ರ ಜನವರಿಯ ಬಳಿಕದಲ್ಲಿ ಆರ್‌ಬಿಐ ನಿಂದ ನಡೆದಿರುವ ಮೊದಲ ಬಡ್ಡಿ ದರ ಏರಿಕೆಯ ಕ್ರಮ ಇದಾಗಿದೆ.
ಆರ್‌ಬಿಐ ನ ಹಣಕಾಸು ನೀತಿ ರೂಪಣೆ ಸಮಿತಿಯ ಎಲ್ಲ ಆರು ಸದಸ್ಯರು ಪ್ರಮುಖ ಬಡ್ಡಿ ದರಗಳನ್ನು ಏರಿಸುವ ಸರ್ವಾನುಮತದ ನಿರ್ಧಾರವನ್ನು ಕೈಗೊಂಡರು. ದೇಶದ ಹಾಲಿ ಸ್ಥೂಲ ಆರ್ಥಿಕ ಸ್ಥಿತಿಗತಿಯನ್ನು ಅನುಲಕ್ಷಿಸಿ ಬಡ್ಡಿ ದರ ಏರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತೆಂದು ಆರ್‌ಬಿಐ ಹೇಳಿದೆ.
2018-19ರ ಸಾಲಿನಲ್ಲಿ ಎಪ್ರಿಲ್ ನಲ್ಲಿ ನಡೆದಿದ್ದ ಆರ್‌ಬಿಐ ಮೊದಲ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆಯ ಸಂದರ್ಭದಲ್ಲಿ ಈ ವರ್ಷದ ಮೊದಲರ್ಧದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ ಶೇ.4.7ರಿಂದ ಶೇ.5.1ರ ನಡುವೆ ಇರುವುದೆಂದು ಅಂದಾಜಿಸಲಾಗಿತ್ತು. ಆದೇ ರೀತಿಯ ವರ್ಷದ ದ್ವಿತೀಯಾರ್ಧದಲ್ಲಿ ಶೇ.4.4ರ ಹಣದುಬ್ಬರ ಇರುವುದೆಂದು ಅಂದಾಜಿಸಲಾಗಿತ್ತು.
ಎಪ್ರಿಲ್ ಹಣಕಾಸು ನೀತಿಯಲ್ಲಿ ಆರ್‌ಬಿಐ 2018-19ರಲ್ಲಿ ದೇಶವು ಶೇ.7.4ರ ಜಿಡಿಪಿಯನ್ನು ಉಳಿಸಿಕೊಳ್ಳುವುದೆಂದು ಹೇಳಿತ್ತು. ಆದರೆ ಇದೀಗ ಆರ್‌ಬಿಐ ಹಣದುಬ್ಬರ ಅಂದಾಜನ್ನು ಪರಿಷ್ಕರಿಸಿದ್ದು ಆ ಪ್ರಕಾರ ವರ್ಷದ ಮೊದಲರ್ಧದಲ್ಲಿ ಅದು ಶೇ.4.8ರಿಂದ ಶೇ.4.9ರಲ್ಲೂ ದ್ವಿತೀಯಾರ್ಧದಲ್ಲಿ ಶೇ.4.7ರ ಪ್ರಮಾಣದಲ್ಲಿ ಇರುವುದೆಂದೂ ಹೇಳಿದೆ.