ಹೊಸದಿಲ್ಲಿ: ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದಲ್ಲಿ ಇದುವರೆಗೆ 1 ಲಕ್ಷ ಠೇವಣಿದಾರರಿಗೆ ಅವರ 1,300 ಕೋಟಿ ರೂ. ಮೊತ್ತವನ್ನು ವಾಪಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಠೇವಣಿದಾರರ ವಿಮೆ ಮತ್ತು ಸಾಲ ಖಾತರಿ (ತಿದ್ದುಪಡಿ) (ಡಿಐಸಿಜಿಸಿ) ಮಸೂದೆ 2021ಕ್ಕೆ ಸಂಸತ್ತು ಆಗಸ್ಟ್ ನಲ್ಲಿ ಅನುಮೋದನೆ ನೀಡಿತ್ತು.
ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದವರಿಗೆ ಠೇವಣಿ ಮೇಲಿನ ವಿಮೆ ಯನ್ನು 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಅದನ್ನು ಬ್ಯಾಂಕ್ ವ್ಯವಹಾರ ನಿಷೇಧಗೊಂಡ ಬಳಿಕ 90 ದಿನಗಳ ಒಳಗೆ ಪಾವತಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ವಹಿವಾಟು ನಿಷೇಧಿತ ಬ್ಯಾಂಕ್‌ಗಳ 3 ಲಕ್ಷ ಗ್ರಾಹಕರಿಗೆ ಶೀಘ್ರದಲ್ಲೇ ಮೊತ್ತ ಪಾವತಿಯಾಗಲಿದೆ ಎಂದು ತಿಳಿಸಿದ್ದಾರೆ.
ವಹಿವಾಟು ನಿಷೇಧಕ್ಕೆ ಒಳಗಾದ ಬ್ಯಾಂಕ್‌ಗಳ ಮೂರು ಲಕ್ಷ ಮಂದಿ ಗ್ರಾಹಕರಿಗೆ ಶೀಘ್ರದಲ್ಲಿಯೇ ಅವರು ಹೊಂದಿದ್ದ ಮೊತ್ತ ಪಾವತಿಯಾಗಲಿದೆ. 76 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಉಳಿತಾಯವನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಇಂಥ ಠೇವಣಿ ಸುರಕ್ಷೆ ವ್ಯವಸ್ಥೆ ಇಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ.
ತಾನು ಗುಜರಾತ್ ಮುಖ್ಯಮಂತ್ರಿ ಯಾಗಿದ್ದ ವೇಳೆ ಬ್ಯಾಂಕೊಂದು ಸಂಕಷ್ಟಕ್ಕೆ ಈಡಾಗಿತ್ತು. ಆ ಸಂದರ್ಭದಲ್ಲಿಯೇ ತಾನು ಠೇವಣಿ ವಿಮೆ ಮೊತ್ತವನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಕೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆ ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡರು.
ಗ್ರಾಹಕರಿಗೆ ಅನುಕೂಲ ಹೇಗೆ?
01 ಹಿಂದಿನ ವ್ಯವಸ್ಥೆಯಲ್ಲಿ ಠೇವಣಿ ವಾಪಸ್‌ಗೆ 8-10 ವರ್ಷ ಕಾಯಬೇಕಾಗಿತ್ತು.
02 ಪಂಜಾಬ್ ಮತ್ತು ಮಹಾ ರಾಷ್ಟ್ರ ಸಹಕಾರ ಬ್ಯಾಂಕ್ ವಹಿವಾಟಿನ ಮೇಲೆ ಆರ್‌ಬಿಐ ನಿರ್ಬಂಧ ಹೇರಿದ ಬಳಿಕ ನಿಯಮಗಳಲ್ಲಿ ಬದಲು.
03 ನಿರ್ಬಂಧಕ್ಕೆ ಒಳಪಟ್ಟ ಬ್ಯಾಂಕ್‌ನ ಬಗ್ಗೆ ಮೊದಲ 45 ದಿನಗಳ ಅವಧಿಯಲ್ಲಿ ಡಿಐಸಿಜಿಸಿ ಮಾಹಿತಿ ಸಂಗ್ರಹಿಸುತ್ತದೆ.
04 ಉಳಿದ 45 ದಿನಗಳಲ್ಲಿ ಠೇವಣಿ ದಾರರಿಗೆ ಎಷ್ಟು ಮೊತ್ತ ನೀಡ ಬೇಕು ಎಂಬುದನ್ನು ನಿರ್ಧರಿಸಿ 90ನೇ ದಿನಕ್ಕೆ ಪಾವತಿ ಪೂರ್ಣ ಮಾಡುತ್ತದೆ.