Advertisement

ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ಸಂಭವ; ರೂಪಾಯಿ ಕುಸಿತ

03:44 PM Oct 31, 2018 | |

ಮುಂಬಯಿ : ಕೇಂದ್ರ ಸರಕಾರದೊಂದಿಗಿನ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದನ್ನು ಅನುಸರಿಸಿ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾದ್ಯತೆ ಇದೆ ಎಂದು ಟಿವಿ ಸುದ್ದಿ ವಾಹಿನಿಗಳು ಇಂದು ಬುಧವಾರ ವರದಿ ಮಾಡಿವೆ. 

Advertisement

ಇದರ ಪರಿಣಾಮವಾಗಿ ಕರೆನ್ಸಿ ಮಾರುಕಟ್ಟೆಯಲ್ಲಿ  ರೂಪಾಯಿ ಕುಸಿದಿದೆ ಮತ್ತು  ಸರಕಾರಿ ಬಾಂಡುಗಳ “ಭೀತಿಯ’ ಮಾರಾಟ ಜೋರಾಗಿ ಸಾಗಿದೆ.

ಸಿಎನ್‌ಬಿಸಿ-ಟಿವಿ 18 ಮತ್ತು ಇಟಿ ನೌ ವಾಣಿಜ್ಯ ಸುದ್ದಿ ವಾಹಿನಿಗಳು ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡಬಹುದೆಂದು ಮೂಲಗಳನ್ನು ಉಲ್ಲೇಖೀಸಿ ವರದಿ ಮಾಡಿವೆಯಾದರೂ ಖುದ್ದು ಆರ್‌ಬಿಐ ಮತ್ತು ಕೇಂದ್ರ ಹಣಕಾಸು ಸಚಿವಾಲಯ ಇವನ್ನು ಅಲ್ಲಗಳೆದಿವೆ. 

ಆರ್‌ಬಿಐ ಕಾಯಿದೆಯ ಸೆ.7ರಡಿ ಭಾರತ ಸರಕಾರಕ್ಕೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಮತ್ತು ರೂಪಾಯಿ ಸ್ಥಿರತೆ ಮತ್ತು ನಗದು ಲಭ್ಯತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಮೀಸಲು ನಿಧಿಯನ್ನು ಬಳಸುವುದಕ್ಕೆ ಆರ್‌ಬಿಐ ಗೆ ಸೂಚನೆ ನೀಡುವ ಅಧಿಕಾರ ಇದೆ.

ಡಾಲರ್‌ ಎದುರು ಹೊಸ ಹೊಸ ತಳಮಟ್ಟ ಕಾಣುತ್ತಿರುವ ರೂಪಾಯಿಯನ್ನು ಕರೆನ್ಸಿ ಮಾರುಕಟ್ಟೆಯಲ್ಲಿ ಆಧರಿಸಲು ಕೇಂದ್ರ ಸರಕಾರ ಆರ್‌ಬಿಐ ಕಾಯಿದೆಯ ಸೆ.7 ಪ್ರಯೋಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸರಕಾರ ಇದನ್ನು ಪ್ರಯೋಗಿಸಿದಲ್ಲಿ ಊರ್ಜಿತ್‌ ಪಟೇಲ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಟಿವಿ ವರದಿಗಳು ತಿಳಿಸಿವೆ. 

Advertisement

ಕೇಂದ್ರ ಸರಕಾರ ಈಚಿನ ವಾರಗಳಲ್ಲಿ ಆರ್‌ಬಿಐ ಗವರ್ನರ್‌ಗೆ ಪತ್ರ ಬರೆದು ಆರ್‌ಬಿಐ ಕಾಯಿದೆ ಸೆ.7ನ್ನು ಪ್ರಯೋಗಿಸುವ ಸೂಚನೆ ನೀಡಿದೆ ಎನ್ನಲಾಗಿದೆ. ತನ್ಮೂಲಕ ಬ್ಯಾಂಕೇತರ ಹಣಕಾಸು ಕಂಪೆನಿಗಳಿಗೆ (NBFC) ನಗದು ಲಭ್ಯತೆ, ದುರ್ಬಲ ಬ್ಯಾಂಕುಗಳಿಗೆ ಅಗತ್ಯ ಬಂಡವಾಳದ ಪೂರೈಕೆ ಮತ್ತು ಸಣ್ಣ ಹಾಗೂ ಮಧ್ಯಮ ಕಂಪೆನಿಗಳಿಗೆ ಸಾಲ ನೀಡುವಿಕೆಯ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಿದೆ ಎನ್ನಲಾಗಿದೆ. 

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕದಲ್ಲಿ ಈ ತನಕ ಕೇಂದ್ರ ಸರಕಾರ, ಆರ್‌ಬಿಐ ಕಾಯಿದೆಯ ಸೆ.7ನ್ನು ಪ್ರಯೋಗಿಸಿದ್ದೇ ಇಲ್ಲ ಎಂದು ಇಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. 

ಡಾಲರ್‌ ಎದುರು ರೂಪಾಯಿ ಅ.15ರಂದು 74.04 ರೂ. ಮಟ್ಟಕ್ಕೆ ಕುಸಿದ ತರುವಾಯ ನಿನ್ನೆ ಮಂಗಳವಾರ 73.99 ರೂ. ಮಟ್ಟಕ್ಕೆ ಜಾರಿದೆ. ಹತ್ತು ವರ್ಷದ ಸರಕಾರಿ ಬಾಂಡುಗಳು ಇಳುವರಿ ಶೇ.7.87ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next