ಮುಂಬಯಿ : ನಿರಂತರ ಎರಡನೇ ದಿನ ಏರಿಕೆ ಕಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 300ಕ್ಕೂ ಅಧಿಕ ಅಂಕಗಳ ಉತ್ತಮ ಜಿಗಿತವನ್ನು ದಾಖಲಿಸಿತು.
ನಿನ್ನೆ ಮಂಗಳವಾರ ಪಂಚರಾಜ್ಯ ಚುನಾವಣೆಯ ಮತ ಎಣಿಕೆ ನಡೆದು ಬಿಜೆಪಿ ಮೂರು ರಾಜ್ಯಗಳಲ್ಲಿ ಸೋತ ಹೊರತಾಗಿಯೂ ಮುಂಬಯಿ ಶೇರು ಪೇಟೆ 190 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ಊರ್ಜಿತ್ ಪಟೇಲ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೇಂದ್ರ ಸರಕಾರ ನಿನ್ನೆ ಮಂಗಳವಾರವೇ ಶಕ್ತಿಕಾಂತ ದಾಸ್ ಅವರನ್ನು ನೂತನ ಆರ್‌ಬಿಐ ಗವರ್ನರ್ ಆಗಿ ನೇಮಿಸಿರುವ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ಗರಿಗೆದರಿತು.
ಡಾಲರ್ ಎದುರು ರೂಪಾಯಿ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 32 ಪೈಸೆಗಳ ಕುಸಿತಕ್ಕೆ ಗುರಿಯಾಗಿ 72.17 ರೂ.ಗೆ ಇಳಿಯಿತು. ಆದರೆ ರೂಪಾಯಿಯ ಮುಂದುವರಿದ ಕುಸಿತ ಇಂದಿನ ಮಟ್ಟಿಗೆ ಶೇರು ಪೇಟೆಯ ಉತ್ಸಾಹವನ್ನು ಕುಗ್ಗಿಸಲಿಲ್ಲ.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 113.60 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,513.17 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 113.60 ಅಂಕಗಳ ಮುನ್ನಡೆಯೊಂದಿಗೆ 10,662.80 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ರಿಲಯನ್ಸ, ಕೋಟಕ್ ಮಹೀಂದ್ರ, ಸನ್ ಫಾರ್ಮಾ, ಹೀರೋ ಮೋಟೋ ಕಾರ್ಪ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.