Advertisement

ರೆಪೋ ದರ ಇಳಿಸಿದ ಆರ್‌ಬಿಐ

12:23 PM Apr 06, 2019 | mahesh |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೂ ಮುನ್ನ ಮಧ್ಯಮ ವರ್ಗಕ್ಕೆ ಖುಷಿಯ ಸಂಗತಿಯೊಂದು ಸಿಕ್ಕಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋ ದರವನ್ನು ಶೇ.0.25ರಷ್ಟು ಇಳಿಕೆ ಮಾಡಿದೆ. ಇದು ಕಳೆದ ಎರಡು ತಿಂಗಳಲ್ಲಿ ಎರಡನೇ ಇಳಿಕೆಯಾಗಿದೆ. ಇದರಿಂದಾಗಿ ಗೃಹ ಮತ್ತು ವಾಹನದ ಮೇಲಿನ ಇಎಂಐ ಕಡಿಮೆಯಾಗುವ ಸಾಧ್ಯತೆ ಇದೆ.

Advertisement

ಫೆಬ್ರವರಿಯಲ್ಲಿ ಇದು ಶೇ.6.25ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ ಶೇ. 0.25 ಇಳಿಕೆ ಮಾಡಿದ್ದರಿಂದಾಗಿ ರೆಪೋ ದರ ಶೇ. 6ಕ್ಕೆ ತಲುಪಿದೆ. ಹಿಂದೆ 2018ರ ಎಪ್ರಿಲ್‌ನಲ್ಲಿ ಶೇ. 6 ಇತ್ತು. ಹಣದುಬ್ಬರವನ್ನು ಶೇ. 4ರಲ್ಲಿ ಕಾಯ್ದು ಕೊಳ್ಳುವುದಕ್ಕಾಗಿ ಮಧ್ಯಮಾವಧಿ ಪ್ರಯತ್ನವಾಗಿ ದರ ಇಳಿಕೆ ಮಾಡಲಾಗಿದೆ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಬ್ಯಾಂಕ್‌ ಬಡ್ಡಿ ಕಡಿಮೆಯಾಗುತ್ತಾ?
ರೆಪೋ ದರ ಇಳಿಕೆ ಯಾಗುತ್ತಿದ್ದಂತೆಯೇ ಸಾಲ ಮತ್ತು ಠೇವಣಿ ಮೇಲಿನ ಬಡ್ಡಿ ದರವೂ ಸ್ವಲ್ಪ ದಿನಗಳಲ್ಲೇ ಇಳಿಕೆಯಾಗುತ್ತವೆ. ಫೆಬ್ರವರಿಯಲ್ಲಿ ಆರ್‌ಬಿಐ ರೆಪೋ ದರ ಇಳಿಕೆ ಮಾಡಿದ್ದಾಗ ಸಾಲದ ಮೇಲಿನ ಬಡ್ಡಿ ದರವನ್ನು ಸ್ವಲ್ಪವಷ್ಟೇ ಇಳಿಸಿದ್ದವು. ಬ್ಯಾಂಕ್‌ಗಳು ಈ ಅನುಕೂಲವನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಗವರ್ನರ್‌ ಹೇಳಿದ್ದಾರೆ.

ಜಿಡಿಪಿ ಶೇ. 7.2 ನಿರೀಕ್ಷೆ
ಪ್ರಸ್ತುತ ವಿತ್ತವರ್ಷದಲ್ಲಿ ಶೇ. 7.2ರಲ್ಲಿ ಜಿಡಿಪಿ ಇರಲಿದೆ ಎಂದು ಆರ್‌ಬಿಐ ನಿರೀಕ್ಷಿಸಿದೆ. ಈ ಹಿಂದೆ ಶೇ. 7.4 ಎಂದು ನಿರೀಕ್ಷಿಸಲಾಗಿತ್ತು. ಮಾನ್ಸೂನ್‌ ಮೇಲೆ ಎಲ್‌ನಿನೋ ಪರಿ ಣಾಮ ಉಂಟಾಗಬಹುದಾದ ಸಾಧ್ಯತೆ ಹಾಗೂ ಜಾಗತಿಕ ಆರ್ಥಿಕ ಅಸ್ಥಿರ ಸ್ಥಿತಿಯಿಂದಾಗಿ ನಿರೀಕ್ಷಿತ ಗತಿಯಲ್ಲಿ ದೇಶದ ಆರ್ಥಿಕತೆ ಪ್ರಗತಿ ಕಾಣಿಸದು ಎಂದು ಊಹಿಸಲಾಗಿದೆ. ಇದೇ ವೇಳೆ, ಚಿಲ್ಲರೆ ಹಣದುಬ್ಬರ ದರ ಶೇ. 2.9-3 ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಆರ್‌ಬಿಐ ದರ ಕಡಿತ ಮಾಡಿದ ಪರಿಣಾಮ ಡಾಲರ್‌ ಎದುರು ರೂಪಾಯಿ ಮೌಲ್ಯ 76 ಪೈಸೆ ಕುಸಿತ ಕಂಡಿದೆ. ಬುಧವಾರ ದಿನದ ಅಂತ್ಯಕ್ಕೆ 68.41 ರೂ.ಗೆ ಇಳಿದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next