Advertisement

10 ತಿಂಗಳ ಬಳಿಕ ಬಡ್ಡಿ ಕಡಿತ : ಶೇ.0.25 ಇಳಿಸಿದ RBI

05:20 AM Aug 03, 2017 | Team Udayavani |

ಮುಂಬಯಿ: ಬರೋಬ್ಬರಿ ಹತ್ತು ತಿಂಗಳ ಬಳಿಕ ಸಾಲಗಳ ಮೇಲಿನ ಬಡ್ಡಿ ಶೇ.0.25ರಷ್ಟು ಇಳಿಕೆಯಾಗಿದೆ. ಆರೂವರೆ ವರ್ಷಗಳಿಗೆ ಹೋಲಿಕೆ ಮಾಡಿದರೆ ರಿವರ್ಸ್‌ ರೆಪೋ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲ) ಶೇ.6ಕ್ಕೆ ತಗ್ಗಿದೆ. ಇದರಿಂದಾಗಿ ಗೃಹ, ವಾಹನ, ಶಿಕ್ಷಣ ಮತ್ತು ಕಾರ್ಪೊರೆಟ್‌ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ.

Advertisement

ಮುಂಬಯಿಯಲ್ಲಿ ನಡೆದ ಆರ್‌ಬಿಐನ ತ್ತೈಮಾಸಿಕ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಗಮನಾರ್ಹ ವಿಚಾರವೆಂದರೆ ಕೇಂದ್ರ ಸರಕಾರ ನೇಮಿಸಿದ ಹಣಕಾಸು ನೀತಿ  ಸಮಿತಿ (ಎಂಪಿಸಿ) ಅಸ್ತಿತ್ವಕ್ಕೆ ಬಂದ ಬಳಿಕದ ಮೊದಲ ಸಭೆಯೂ ಇದಾಗಿದೆ. ಹಾಲಿ ಆರ್‌ಬಿಐ ಗವರ್ನರ್‌ ಡಾ.ಊರ್ಜಿತ್‌ ಪಟೇಲ್‌ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಡ್ಡಿ ದರ ಇಳಿಕೆಯೂ ಇದಾಗಿದೆ.

ಬಡ್ಡಿ ದರ ಇಳಿಕೆ ನಿರೀಕ್ಷೆ: ಆರ್‌ಬಿಐ ನಿರ್ಧಾರದ ಬಳಿಕ ಗೃಹ, ವಾಹನ, ಶಿಕ್ಷಣ ಮತ್ತು ಕಾರ್ಪೊರೇಟ್‌ ವಲಯಕ್ಕೆ ನೀಡಲಾಗುವ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ. ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸಾಲಕ್ಕೆ ಎಷ್ಟು ಪ್ರಮಾಣದಲ್ಲಿ ಬಡ್ಡಿ ದರ ಇಳಿಕೆ ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿವೆ. ಮತ್ತೂಂದು ಗಮನಾರ್ಹ ವಿಚಾರವೆಂದರೆ ಆರ್‌ಬಿಐ ನಿರ್ಧಾರ ಕೈಗೊಂಡ ದಿನವೇ ಯಾವುದೇ ಬ್ಯಾಂಕ್‌ಗಳು ಬಡ್ಡಿ ದರ ಇಳಿಕೆ ಬಗ್ಗೆ ಘೋಷಣೆ ಮಾಡಿಲ್ಲ. ಇಂಥ ಬೆಳವಣಿಗೆ ಇದೇ ಮೊದಲು ಎಂದು ಹೇಳಲಾಗುತ್ತಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದಿದ್ದ ತ್ತೈಮಾಸಿಕ ಸಭೆಯಲ್ಲಿ ಬಡ್ಡಿ ದರ ಇಳಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಹಾಲಿ ಸಾಲಿನಲ್ಲಿ ಹಣದುಬ್ಬರ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿಯೇ ದರ ಇಳಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ ಊರ್ಜಿತ್‌ ಪಟೇಲ್‌. ಹಣದುಬ್ಬರ ಶೇ.4ರಷ್ಟಕ್ಕೆ ತಗ್ಗಿಸುವ ಗುರಿಯಲ್ಲಿಯೇ ಹಾಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸಾಲದ ಮೇಲಿನ ಬಡ್ಡಿ ದರ ಕಡಿತದ ಹೊರತಾಗಿಯೂ ಜಿಡಿಪಿ ಬೆಳವಣಿಗೆ ದರ ಶೇ.7.3ರ ಗುರಿ ಸಾಧನೆಯನ್ನು ಹಾಗೆಯೇ ಇರಿಸಿಕೊಳ್ಳಲಾಗಿದೆ. 

ನೆರವಾಯಿತು ಜಿಎಸ್‌ಟಿ: ಜು.1ರಿಂದ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ ಹಣದುಬ್ಬರ ದರದಲ್ಲಿ ಕುಸಿತ ಕಾಣಲು ನೆರವಾಯಿತು ಎಂದು ಹೇಳಿದ್ದಾರೆ ಊರ್ಜಿತ್‌ ಪಟೇಲ್‌.

Advertisement

4-2ರ ನಿರ್ಣಯ: ಕೇಂದ್ರ ಸರಕಾರ ನೇಮಿಸಿದ ಆರು ಮಂದಿ ಸದಸ್ಯರ ಎಂಪಿಸಿ ಸದಸ್ಯರ ಪೈಕಿ ಊರ್ಜಿತ್‌ ಪಟೇಲ್‌, ಡೆಪ್ಯುಟಿ ಗವರ್ನರ್‌ ವಿರಳ್‌ ವಿ.ಆಚಾರ್ಯ, ಚೇತನ್‌ ಘಾಟ್ಗೆ ಮತ್ತು ಪಮಿ ದುವಾ ನಿರ್ಣಯದ ಪರವಾಗಿ ಮತ ಹಾಕಿದರೆ, ಮತ್ತೂಬ್ಬ ಸದಸ್ಯ ರವೀಂದ್ರ ಎಚ್‌.ಧೊಲಾಕಿಯಾ ವಿರೋಧಿಸಿದ್ದರು. ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್‌ ದೇವವ್ರತ ಪಾತ್ರ ಯಥಾ ಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ್ದರು.

– ಸಾಲದ ಮೇಲಿನ ಬಡ್ಡಿ ದರ ಶೇ.6ಕ್ಕಿಳಿಕೆ
– ರಿವರ್ಸ್‌ ರೆಪೋ ದರ ಶೇ.0.25 ಕಡಿತ
– ಶೇ.7.3ರ ಜಿಡಿಪಿ ಅಂದಾಜು ಯಥಾಸ್ಥಿತಿ
– ಅ.3, 4ರಂದು ಎಂಪಿಸಿ ಮುಂದಿನ ಸಭೆ

ಕೃಷಿ ಸಾಲ ಮನ್ನಾದಿಂದ ಧಕ್ಕೆ
ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕೃಷಿ ಸಾಲ ಮನ್ನಾ ಮಾಡಿವೆ. ಇದರಿಂದ  ದೇಶದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ. ಇದರಿಂದ ಹಣದುಬ್ಬರಕ್ಕೂ ಕಾರಣವಾಗಬಹುದು. ಜತೆಗೆ ರಾಜ್ಯ ಸರಕಾರಗಳು ಸಾರ್ವಜನಿಕ ವೆಚ್ಚಗಳಿಗೆ ನಿಗದಿ ಮಾಡುವ ಮೊತ್ತದ ವಿನಿಯೋಗಕ್ಕೆ ನಿಯಂತ್ರಣ ಮಾಡುವ ಅನಿವಾರ್ಯತೆ ಉಂಟಾಗಬಹುದು ಎಂದು ಸೂಚ್ಯವಾಗಿ ತಿಳಿಸಿದೆ.

ಸಾಮಾನ್ಯವಾಗಿ ಆರ್‌ಬಿಐ ಸಭೆ ದಿನವೇ ಬ್ಯಾಂಕ್‌ಗಳು ಸಾಲ ಬಡ್ಡಿ ದರದಲ್ಲಿ ಇಳಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದವು.ಇದೇ ಮೊದಲ ಬಾರಿಗೆ ಅಂಥ  ನಿರ್ಧಾರ ಕೈಗೊಂಡದ್ದು ಕಾಣುತ್ತಿಲ್ಲ. ಈಗ ರಿಟರ್ನ್ಸ್ ಸಲ್ಲಿಕೆ ಸಮಯವಾದ್ದರಿಂದ ಅದರಿಂದ ಬರುವ ಮೊತ್ತಕ್ಕೂ ಬಡ್ಡಿದರ ಕಡಿಮೆಯಾಗುತ್ತದೆ. ಗ್ರಾಹಕರಿಂದ ಆಕ್ಷೇಪ ವ್ಯಕ್ತವಾಗಬಹುದೆಂಬ ಆತಂಕವೂ ಇದೆ. ಆದರೆ ಮುಂದಿನ ದಿನಗಳಲ್ಲಿ ನಿರ್ಧಾರ ಹೊರ ಬೀಳುವುದು ಖಚಿತ.
– ರಮಾನಂದ ಶರ್ಮಾ, ಬ್ಯಾಂಕಿಂಗ್‌ ಕ್ಷೇತ್ರದ ತಜ್ಞ

ಶೇ.0.25ರಷ್ಟು ಬಡ್ಡಿ ದರ ಇಳಿಕೆ ಮಾಡಿದ ಆರ್‌ಬಿಐ ಕ್ರಮವನ್ನು ಸ್ವಾಗತಿಸುತ್ತೇವೆ. ದೇಶದ ಹಣಕಾಸು ಕ್ಷೇತ್ರದ ಪರಿಸ್ಥಿತಿ ಅರಿಯುವಲ್ಲಿ ಇದು ನಿರ್ಣಾಯಕವಾಗಲಿದೆ. ಮಧ್ಯಮ ಗತಿಯಲ್ಲಿ ಹಣದುಬ್ಬರದ ಏರಿಕೆ, ಹಣಕಾಸು ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಇದು ನೆರವಾಗಲಿದೆ.
– ಸುಭಾಶ್ಚಂದ್ರ ಗರ್ಗ್‌, ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ

ಷೇರು ಪೇಟೆ ಆಂಶಿಕ ಕುಸಿತ
ಷೇರು ಪೇಟೆ ಆರ್‌ಬಿಐ ನಿರ್ಧಾರಕ್ಕೆ ಸ್ಪಂದಿಸಿಲ್ಲ. ಮಂಗಳವಾರದವರೆಗೆ ತೇಜಿಯಲ್ಲಿದ್ದ ಬಿಎಸ್‌ಇ ಮತ್ತು ನಿಫ್ಟಿ ಸೂಚ್ಯಂಕಗಳು ಬುಧವಾರ ಕುಸಿದಿವೆ. ಬುಧವಾರದ ವಹಿವಾಟು ಮುಕ್ತಾಯಕ್ಕೆ ಬಿಎಸ್‌ಇ ಸೂಚ್ಯಂಕ 98.43ರಲ್ಲಿ ಕುಸಿತ ವಾಗುವ ಮೂಲಕ 32,476.74 ರಲ್ಲಿ ಕೊನೆಗೊಂಡಿದೆ. ನಿಫ್ಟಿ 33.15 ಅಂಕ ಕುಸಿದು, 10,081.50ರಲ್ಲಿ ಮುಕ್ತಾಯವಾಗಿದೆ.

ಬ್ಯಾಂಕ್‌ಗಳಿಂದ ಇನ್ನೂ ಘೋಷಣೆ ಇಲ್ಲ

Advertisement

Udayavani is now on Telegram. Click here to join our channel and stay updated with the latest news.

Next