ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ 2019-20ರ ಹಣಕಾಸು ವರ್ಷದ ಮೊದಲ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಇಂದು ಪ್ರಕಟಿಸಿದ್ದು ಆ ಪ್ರಕಾರ ತನ್ನ ಪ್ರಮುಖ ಬಡ್ಡಿ ದರಗಳನ್ನು ಶೇ.0.25ರಷ್ಟು ಕಡಿತಗೊಳಿಸಿದೆ.
ಆರ್‌ಬಿಐ ಹಣಕಾಸು ಸಮಿತಿಯು ರಿಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿ ಶೇ.6ಕ್ಕೆ ನಿಗದಿಸಿದೆ. ಹಾಗದ್ದರೂ ತಟಸ್ಥ ಮಟ್ಟದಲ್ಲಿರುವ ತನ್ನ ಹಣಕಾಸು ನೀತಿ ನಿಲುವನ್ನು ಈ ಬಾರಿಯೂ ಅಂತೆಯೇ ಉಳಿಸಿಕೊಂಡಿದೆ.
2017-18ರ ಸಾಲಿಗೆ ಅಂದಾಜಿಸಲಾಗಿದ್ದ ಶೇ.6.6ರ ಜಿಡಿಪಿ ಬೆಳವಣಿಗೆಯನ್ನು ಆರ್‌ಬಿಐ ತನ್ನ ಹಣಕಾಸು ಪರಾಮರ್ಶೆ ವರದಿಯಲ್ಲಿ 2018-19ರ ಹಣಕಾಸು ವರ್ಷದಲ್ಲಿ ಶೇ.7.4ರ ಮಟ್ಟಕ್ಕೆ ಏರುವುದೆಂದು ಅಂದಾಜಿಸಿದೆ.
ಆರ್‌ಬಿಐ ತನ್ನ ಪ್ರಮುಖ ಬಡ್ಡಿ ದರವನ್ನು ನಿರಂತರ 2ನೇ ಬಾರಿಗೆ ಕಡಿತಗೊಳಿಸುತ್ತಿರುವುದು ಗಮನಾರ್ಹವಾಗಿದೆ. ಈ ಮೂಲಕ ಅದು ಕಳೆದ ಒಂದು ವರ್ಷದಲ್ಲಿ ತನ್ನ ಬಡ್ಡಿ ದರವನ್ನು ಕನಿಷ್ಠ ಮಟ್ಟಕ್ಕೆ ತಂದು ನಿಲ್ಲಿಸಿದೆ. ದೇಶದಲ್ಲಿನ ಹಣದುಬ್ಬರ ಮೃದುವಾಗುತ್ತಿರುವುದೇ ಇದಕ್ಕೆ ಕಾರಣವೆಂಬ ಸಮರ್ಥನೆಯನ್ನು ಅದು ನೀಡಿದೆ.
ಈ ವರ್ಷ ಫೆಬ್ರವರಿ 7ರಂದು 25 ಮೂಲಾಂಕದಷ್ಟು ಬಡ್ಡಿ ದರ ಕಡಿತ ಮಾಡಿದ್ದ ಆರ್‌ಬಿಐ, ಅದುವರೆಗೆ ಶೇ.6.50 ಇದ್ದ ಬಡ್ಡಿ ದರವನ್ನು ಶೇ.6.25ಕ್ಕೆ ಇಳಿಸಿತ್ತು.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಪ್ರಕಟವಾಗುತ್ತಿರುವ ಎರಡನೇ ಹಣಕಾಸು ಪರಾಮರ್ಶೆ ಇದಾಗಿದ್ದು ಬಡ್ಡಿ ದರ ಕಡಿತಕ್ಕೆ 4 : 2ರ ಅಂತರದಲ್ಲಿ ಸಮಿತಿಯ ಅನುಮೋದನೆ ಲಭಿಸಿದೆ.