ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ಪ್ರಕಟಿಸಿರುವ ಹಾಲಿ ಹಣಕಾಸು ವರ್ಷದಲ್ಲಿನ ತನ್ನ ಐದನೇ ದ್ವೆ„ಮಾಸಿಕ ನೀತಿಯಲ್ಲಿ ನಿರೀಕ್ಷೆಯಂತೆ ತನ್ನ ಪ್ರಮುಖ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಎಲ್ಲವನ್ನೂ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ.
ಶೇ.6.50 ರಿಪೋ ದರ ಮತ್ತು ಶೇ.6.25 ರಿವರ್ಸ್ ರಿಪೋ ದರವನ್ನು ಹಾಗೆಯೇ ಉಳಿಸಿಕೊಳ್ಳುವುದರ ಪರವಾಗಿ ಹಣಕಾಸು ನೀತಿ ಸಮಿತಿಯ ಆರು ಸದಸ್ಯರ ಪೈಕಿ ಐವರು ಸದಸ್ಯರು ಮತಹಾಕಿದರು.
ಕಳೆದ ಅಕ್ಟೋಬರ್ ತಿಂಗಳ ಹಣಕಾಸು ನೀತಿಯಲ್ಲಿ ಕೂಡ ಆರ್‌ಬಿಐ ತನ್ನ ಪ್ರಮುಖ ಬಡ್ಡಿದರಗಳನ್ನು ಯಥಾವತ್ ಉಳಿಸಿಕೊಂಡಿತ್ತು.
ಹಾಗಿದ್ದರೂ ದೇಶದ ಜಿಡಿಪಿ ಮತ್ತು ಹಣದುಬ್ಬರದ ಮೇಲೆ ಏರುತ್ತಿರುವ ಕಚ್ಚಾ ತೈಲ ಬೆಲೆ ಮತ್ತು ಬಿಗಿಗೊಳ್ಳುತ್ತಿರುವ ಜಾಗತಿಕ ಹಣಕಾಸು ಸ್ಥಿತಿಗತಿ ಪ್ರತಿಕೂಲ ಪರಿಣಾಮ ಬೀರಬಹುದೆಂಬ ಎಚ್ಚರಿಕೆಯನ್ನು ನೀಡಿತ್ತು. ಅಂತೆಯೇ ತನ್ನ ನೀತಿಯನ್ನು ತಟಸ್ಥತೆಯಿಂದ ತುಲನಾತ್ಮಕ ಬಿಗಿ ಮಟ್ಟಕ್ಕೆ ಬದಲಾಯಿಸಿತ್ತು.
ಕಳೆದ ಜೂನ್‌ನಿಂದ ಬಿಗಿ ಆವರ್ತನ ಕ್ರಮವನ್ನು ಆರಂಭಿಸಿದ್ದ ಆರ್‌ಬಿಐ ಆಗಸ್ಟ್‌ನಲ್ಲಿ ರಿಪೋ ದರವನ್ನು ಶೇ.0.50 ಪ್ರಮಾಣದಲ್ಲಿ ಏರಿಸಿ ಶೇ.6.50 ಮಟ್ಟಕ್ಕೆ ನಿಗದಿಸಿತ್ತು.