Advertisement

ಹಣದುಬ್ಬರ ಇಳಿಕೆಗೆ ಆರ್‌ಬಿಐ ಇನ್ನಷ್ಟು ಕ್ರಮ ವಹಿಸಲಿ

12:58 AM Jul 13, 2022 | Team Udayavani |

ಜೂನ್‌ ಮಾಹೆಯ ಹಣದುಬ್ಬರ ದರ ಪ್ರಕಟಗೊಂಡಿದ್ದು, ಶೇ.7.1ರಷ್ಟಕ್ಕೆ ಇಳಿಕೆಯಾಗಿದೆ. ಅಂದರೆ ಅದರ ಹಿಂದಿನ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.0.3ರಷ್ಟು ಇಳಿಕೆಯಾಗಿದೆ. ತರಕಾರಿ ಮತ್ತು ಬೇಳೆಕಾಳುಗಳ ದರದಲ್ಲಿ ಇಳಿಕೆಯಾದ ಕಾರಣದಿಂದಾಗಿ ಹಣದುಬ್ಬರದ ಪ್ರಮಾಣ ಇಳಿಕೆಯಾಗಿದೆ ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯ. ಹಣದುಬ್ಬರ ಇಳಿಕೆಯಿಂದ ಜನ ಕೂಡ ಅಲ್ಪ ಪ್ರಮಾಣದಲ್ಲಿ ನಿಟ್ಟುಸಿರು ಬಿಡುವಂತಾಗಿದೆ.

Advertisement

ಕೊರೊನಾ ಮತ್ತು ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದಿಂದಾಗಿ ಇಡೀ ಜಗತ್ತಿನ ಆರ್ಥಿಕತೆ ಮೇಲೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲ ಪೂರೈಕೆ ವ್ಯವಸ್ಥೆಯ ಮೇಲೂ ಅಡ್ಡಪರಿಣಾಮ ಬೀರಿದೆ. ಇದರಿಂದ ಅಗತ್ಯ ವಸ್ತುಗಳು, ತೈಲೋತ್ಪನ್ನ ವಸ್ತುಗಳು ಸೇರಿದಂತೆ ಬಹುತೇಕ ಪದಾರ್ಥಗಳ ಬೆಲೆ ಏರಿಕೆಯಾಗಿದ್ದು, ಜನರ ಬಹುಪಾಲು ಆದಾಯ ವಸ್ತುಗಳ ಖರೀದಿಯಲ್ಲೇ ಮುಗಿದುಹೋಗುವ ಸನ್ನಿವೇಶ ಎದುರಾಗಿದೆ. ನೆರೆಯ ಶ್ರೀಲಂಕಾದ ಆರ್ಥಿಕತೆಯನ್ನು ಗಮನಿಸಿದರೆ, ಕೊರೊನಾ ಅನಂತರ ಮತ್ತು ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ಯಾವ ಪ್ರಮಾಣ ದಲ್ಲಿ ಪರಿಣಾಮ ಬೀರಿದೆ ಎಂಬುದನ್ನು ನೋಡಬಹುದಾಗಿದೆ.

ಕಳೆದ ವರ್ಷದ ಜೂನ್‌ನಲ್ಲಿ ದೇಶದ ವಾರ್ಷಿಕ ಸಗಟು ಹಣದುಬ್ಬರ ಪ್ರಮಾಣ ಶೇ.6.26 ಇತ್ತು. ಕೊರೊನಾ ಪೆಟ್ಟು ಕೊಟ್ಟಿದ್ದರೂ ಹಣದುಬ್ಬರ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಯಶಸ್ವಿಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣವಂತೂ ಇಡೀ ಜಗತ್ತಿನ ಎಲ್ಲ ವ್ಯವಸ್ಥೆ  ಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದು ತೈಲೋತ್ಪನ್ನಗಳ ಪೂರೈಕೆ ಮೇಲೆ ಬಹಳಷ್ಟು ಪರಿಣಾಮ ಬೀರಿರುವುದರಿಂದ ಭಾರತವೂ ಸೇರಿದಂತೆ ಬಹುತೇಕ ಎಲ್ಲ ದೇಶಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳವಾಗಿ ಹಣದುಬ್ಬರ ಹೆಚ್ಚಾಗಿದೆ. ಇದಕ್ಕೆ ನೆರೆಯ ಪಾಕಿಸ್ಥಾನವೂ ಸಾಕ್ಷಿ.

ಹಣದುಬ್ಬರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ಒಟ್ಟಾರೆ ಮೂರು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಗೃಹ, ವಾಹನ ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗಿದೆ. ಹಾಗೆಯೇ ಉಳಿ  ತಾಯದ ಮೇಲಿನ ಬಡ್ಡಿದರ ಹೆಚ್ಚಾಗಿ, ಹೊಸ ವಸ್ತುಗಳ ಖರೀದಿಗಿಂತ ಉಳಿತಾಯದತ್ತ ಜನ ಮುಖಮಾಡುತ್ತಾರೆ ಎಂಬುದು ಆರ್‌ಬಿಐನ ಉದ್ದೇಶವಾಗಿತ್ತು. ಈಗಿನ ಹಣದುಬ್ಬರ ಪ್ರಮಾಣ ಗಮನಿಸಿದರೆ, ಆರ್‌ಬಿಐನ ಉದ್ದೇಶ ಸ್ವಲ್ಪ ಮಟ್ಟಿಗೆ ಈಡೇರಿದೆ ಎಂದೇ ಹೇಳಬಹುದು.

ಆದರೂ ಉಕ್ರೇನ್‌ ಮೇಲಿನ ರಷ್ಯಾ ಯುದ್ಧ ಇನ್ನಷ್ಟು ದಿನ ಮುಂದುವರಿದರೆ ಹಣದುಬ್ಬರ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಗಳು ಕಡಿಮೆ. ಅಲ್ಲದೆ, ಆರ್‌ಬಿಐ ಕೂಡ ಮುಂದಿನ ತನ್ನ ದ್ವೆ„ಮಾ ಸಿಕ ಸಭೆಗಳಲ್ಲಿ ರೆಪೋ ದರವನ್ನು ಇನ್ನಷ್ಟು ಏರಿಕೆ ಮಾಡುವ ಸಂಭವವೂ ಇದೆ. ಒಂದು ಲೆಕ್ಕಾಚಾರದಲ್ಲಿ ಈ ಕ್ರಮ ರಿಯಲ್‌ ಎಸ್ಟೇಟ್‌, ವಾಹನೋ ದ್ಯಮದ ಮೇಲೆ ಪೆಟ್ಟು ಬೀಳುವ ಸಾಧ್ಯತೆಯಂತೂ ಇದ್ದೇ ಇದೆ. ಇದರ ಜತೆಯಲ್ಲೇ ಈಗ ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳಲ್ಲಿ ವರುಣನ ಪ್ರಕೋಪ ಹೆಚ್ಚಾಗಿದ್ದು, ಬೆಳೆ ನಾಶವಾಗಿದೆ. ಕೃಷಿ ಉತ್ಪನ್ನಗಳ ಉತ್ಪಾದನೆ ಯೂ ಕಡಿಮೆಯಾಗುವ ಸಾಧ್ಯತೆ ಇದ್ದು, ತರಕಾರಿ ಸಹಿತ ವಿವಿಧ ಬೆಳೆಗಳ ದರ ಹೆಚ್ಚುವ ಸಂಭವವಿದೆ. ಈಗಿನಿಂದಲೇ ಕೇಂದ್ರ ಮತ್ತು ರಾಜ್ಯ ಸರಕಾರ ಗಳು ಇತ್ತ ಈ ನಿಟ್ಟಿನಲ್ಲಿ ಯೋಚಿಸಿ ಪರ್ಯಾಯ ವ್ಯವಸ್ಥೆ ಮಾಡುವ ಅಗತ್ಯತೆ ಇದೆ. ಒಟ್ಟಾರೆಯಾಗಿ ಯಾವುದೇ ಕಾರಣಕ್ಕೂ ಜನರ ಮೇಲೆ ಇನ್ನಷ್ಟು ಹೊರೆ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರಗಳದ್ದು.

Advertisement
Advertisement

Udayavani is now on Telegram. Click here to join our channel and stay updated with the latest news.

Next