Advertisement

ರಾಯಣ್ಣನ ಇತಿಹಾಸ ಯುವಕರಿಗೆ ಪರಿಚಯಿಸಬೇಕಿದೆ: ದೀಪಕ್

05:45 PM Sep 01, 2022 | Team Udayavani |

ಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ, ಕನ್ನಡ ನಾಡಿನ ಹೆಮ್ಮೆಯ ಪುತ್ರ ವೀರ
ಸಂಗೊಳ್ಳಿ ರಾಯಣ್ಣನವರ ನಿಜ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಸಂಶೋಧಕರ, ಸಾಹಿತಿಗಳ ಹಾಗೂ ಕನ್ನಡ ಹೋರಾಟಗಾರರ ಮೇಲಿದೆ ಎಂದು ಕರುನಾಡ ವಿಜಯ ಸೇನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಹ. ನೀ. ದೀಪಕ ಹೇಳಿದರು.

Advertisement

ನಗರದ ಮಹಾತ್ಮಾ ಗಾಂಧಿ ಭವನದಲ್ಲಿ ಕರುನಾಡ ವಿಜಯ ಸೇನೆಯ ವತಿಯಿಂದ ಹಮ್ಮಿಕೊಂಡಿದ್ದ ರಾಯಣ್ಣನ ಅದ್ದೂರಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ವೀರ ಪರಂಪರೆಯ ವಾರಸುದಾರರಾದ ನಾವೆಲ್ಲ ಕನ್ನಡಕ್ಕಾಗಿ ಕೈ ಎತ್ತಬೇಕು. ಕನ್ನಡ ಅನ್ನದ ಭಾಷೆಯಾಗಬೇಕು. ಹೊರ ರಾಜ್ಯದ ಕಂಪನಿಗಳು ನಮ್ಮ ನೆಲದಲ್ಲಿ ಘಟಕ ಸ್ಥಾಪಿಸಿದರೆ ಅಲ್ಲಿಯೂ ಕೂಡ ಕನ್ನಡಿಗರಿಗೆ ಉದ್ಯೋಗ ಕೊಡುವಂತಾಗಲು ಸೇನೆ ನಿರಂತರ ಹೋರಾಟ ಮಾಡುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ಕಾರಂಜಿ ಮಠದ ಶಿವಯೋಗಿ ದೇವರು ಮಾತನಾಡಿ, ಕನ್ನಡ ಪರಂಪರೆಯಲ್ಲಿ ರಾಯಣ್ಣ ಚಿರಸ್ಥಾಯಿಯಾಗಿದ್ದಾರೆ. ಅವನ ದಿಟ್ಟ ಹೋರಾಟ ಹೊಸ ಪೀಳಿಗೆಗೆ ಮಾದರಿಯಾಗಲಿ ಎಂದರು. ಸೇನೆಯ ಯುವ ರಾಜ್ಯಾಧ್ಯಕ್ಷ ಮಹೇಶ ಆರ್‌. ಎಸ್‌., ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ, ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನಕುಮಾರ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನೆ. ಲ. ಶಾಮಪ್ರಸಾದ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ
ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ಶಿವಪುತ್ರ ಗಾಣದಾಳ, ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷ ರವಿ ಭದ್ರಕಾಳಿ, ಜಿಲ್ಲಾಧ್ಯಕ್ಷ ಸುರೇಶ ಇಟಗಿ, ಉಪಾಧ್ಯಕ್ಷ ಮಂಜುನಾಥ ಹಲಗಾ, ಸೋಮಲಿಂಗೇಶ್ವರ ನೀಡುಮಾಮಿ ಸ್ವಾಮೀಜಿ, ಚೆನ್ನಮ್ಮಾ ವಂಶಸ್ಥರಾದ ಬಾಬಾಸಹೆಬ ಶಂಕರಗೌಡ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಸೇವೆಗೆ ಸದಾ ಕ್ರಿಯಾಶೀಲರಾಗಿರುವ ಐವತ್ತು ಕನ್ನಡ ಹೋರಾಟಗಾರರನ್ನು ಸೇನೆಯ ವತಿಯಿಂದ ಸತ್ಕರಿಸಲಾಯಿತು. ಇದಕ್ಕೂ ಮುನ್ನ ಕ್ಯಾಂಪ್‌ ಪ್ರದೇಶದ ಹನುಮಾನ ಮೂರ್ತಿಯಿಂದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next