ತಾವರಗೇರಾ: ಪಟ್ಟಣದ ಜೀವನಾಡಿಯಾಗಿರುವ ರಾಯನಕೆರೆಗೆ ಸಣ್ಣ ನೀರಾವರಿ ಇಲಾಖೆಯ ಸಂಜೀವಿನಿ ಯೋಜನೆಯಡಿಯಲ್ಲಿ 10 ಲಕ್ಷ ರೂ. ಮಂಜೂರಾಗಿದ್ದು ಸ್ಥಗಿತಗೊಂಡಿದ್ದ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಜೀವ ಕಳೆ ಬಂದಂತಾಗಿದೆ.
ಕೆರೆ ಹಿನ್ನೆಲೆ: ನೂರಾರು ವರ್ಷಗಳ ಹಿಂದೆ ಇಲ್ಲಿ ಸಮಾಂತ ಅರಸನಾಗಿದ್ದ ಅಂಕುಶ ಮಹಾರಾಜ ಕೆರೆ, ಕೋಟೆ, ಸ್ನಾನ ಕೊಳಗಳನ್ನು ಕಟ್ಟಿಸಿದ್ದೇನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ರಾಯನಕೆರೆಗೆ ನೀರು ಹರಿದು ಬರಲು ಹಳ್ಳದಿಂದ ಕಾಲುವೆಯನ್ನು ಆಗಿನ ಕಾಲದಲ್ಲಿ ನಿರ್ಮಿಸಲಾಗಿದೆ. ಆ ರಾಜನ ದೂರದೃಷ್ಟಿಯಿಂದ ತಾವರಗೇರಾ ಕೆರೆ ಎಂದೂ ಬತ್ತಿದ ಉದಾಹರಣೆ ಇಲ್ಲ. ಆದರೆ ಕಳೆದು 3-4 ವರ್ಷಗಳಿಂದ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಕ್ಷಾಮ ಉಂಟಾಗಿ ಕೆರೆಗೆ ನೀರು ಬರದಂತಾಗಿದೆ. ಇಲ್ಲಿನ ಜನರು ಹನಿ ನೀರಿಗಾಗಿ ಪರಿತಪಿಸುವಂತಾಗಿದೆ. ಕೆರೆಯ ನೀರಿನಿಂದ ಪಟ್ಟಣದ ವಿವಿಧ ಕಡೆ ಇರುವ 15ಕ್ಕೂ ಹೆಚ್ಚು ತೆರೆದ ಬಾವಿಯಲ್ಲಿ ನೀರು ತುಂಬಿರುತ್ತಿತ್ತು. ಕೊಳವೆಬಾವಿಯಲ್ಲೂ ಸಹ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಸಿಗುತ್ತಿತ್ತು. ಇದರಿಂದ ರೈತರಿಗೆ ವ್ಯವಸಾಯಕ್ಕೆ ಹಾಗೂ ಪಟ್ಟಣದ ಜನತೆಯ ದಾಹ ತಣಿಸುವ ಜಲಧಾರೆಯಾಗಿತ್ತು.
ವಿಸ್ತೀರ್ಣ: 42 ಎಕರೆ ವಿಸ್ತೀರ್ಣವಾದ ಈ ಕೆರೆಯಲ್ಲಿ ಸುಮಾರು 5-6 ಅಡಿ ಹೂಳು ತುಂಬಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಣೆ ಆಗುತ್ತಿರಲಿಲ್ಲ. ಅಷ್ಟಲ್ಲದೇ ಕೆರೆಯಲ್ಲಿ ಮುಳ್ಳುಕಂಟಿಗಳು ಬೆಳೆದು ನಿಂತ್ತು ಭಣಗುಡುತ್ತಿತ್ತು. ಇನ್ನೂ ಕೆರೆಯನ್ನು ಕೆಲ ಕಡೆ ಒತ್ತವರಿ ಮಾಡಲಾಗಿದ್ದನ್ನು ತೆರವುಗೊಳಿಸಿ ಕೆರೆಯ ಗಡಿ ರೇಖೆಯನ್ನು ಗುರುತಿಸಿ ಈಗಾಗಲೇ ಸುಮಾರು 20 ಎಕರೆ ವಿಸ್ತೀರ್ಣದಲ್ಲಿ 5 -6 ಅಡಿ ಆಳದ ಹೂಳನ್ನು ತೆಗೆಯಲಾಗಿದ್ದು, ದಿನಾಲು 3 ಹಿಟಾಚಿಗಳು, 42 ಟ್ರ್ಯಾಕ್ಟರ್‌ಗಳು ನಿರಂತರವಾಗಿ ಕೆಲಸ ಮಾಡುತ್ತಲಿವೆ. ಆದರೆ ಆರ್ಥಿಕ ತೊಂದರೆಯಿಂದ ಕಳೆದ ಒಂದು ವಾರದಿಂದ ಹೂಳೆತ್ತುವ ಕಾರ್ಯ ಸ್ಥಗಿತಗೊಂಡಿತ್ತು. ಸಣ್ಣ ನೀರಾವರಿ ಇಲಾಖೆಯ ಸಂಜೀವಿನಿ ಯೋಜನೆಯಡಿಯಲ್ಲಿ 10 ಲಕ್ಷ ರೂ ಮಂಜೂರಾಗಿದ್ದು ಇನ್ನೂ ಕೆಲವು ದಿನಗಳಲ್ಲಿ ಪುನಃ ಹೂಳೆತ್ತುವ ಕಾರ್ಯ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದರು.
•ಎನ್ ಶಾಮೀದ್ ತಾವರಗೇರಾ
Advertisement
ಸಾರ್ವಜನಿಕರ ಸಹಭಾಗಿತ್ವ ಪಟ್ಟಣದ ಕೆಲ ಸಮಾನ ಮನಸ್ಕರು ಹಾಗೂ ಪಿಎಸ್‌ಐ ಮಹಾಂತೇಶ ಸಜ್ಜನ್ ಅವರ ನೇತೃತ್ವದಲ್ಲಿ ತಾವರಗೇರಾ ಅಭಿವೃದ್ಧಿ ಸೇವಾ ಸಮಿತಿಯನ್ನು ರಚಿಸಿಕೊಂಡು ರಾಯನಕೆರೆಯ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾದರು. ಹಾಗಾಗಿ ಸಾರ್ವಜನಿಕರ ಸಭೆ ಕರೆದು ಸಾರ್ವಜನಿಕರ ಸಮ್ಮುಖದಲ್ಲಿ ಕೆಲ ನಿರ್ಣಗಳನ್ನು ತೆಗೆದುಕೊಂಡು ವಂತಿಗೆ ಹಣದಲ್ಲಿ ಕೆರೆ ಹೂಳೆತ್ತುವ ಕಾರ್ಯ ಆರಂಭಿಸಿದ್ದರು.