Advertisement
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್) ಹಾಗೂ ಯರಮರಸ್ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಸ್ಟೇಶನ್‌ಗಳು ಕಳೆದ ಕೆಲ ದಿನಗಳಿಂದ ಸಂಪೂರ್ಣ ಉತ್ಪಾದನೆ ನಿಲ್ಲಿಸಿವೆ. ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಎಲ್ಲೆಡೆ ಜಲ ಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಇದರಿಂದ ಜಲ ವಿದ್ಯುತ್ ಎಂದಿಗಿಂತ ಹೆಚ್ಚು ಉತ್ಪಾದನೆಯಾಗುತ್ತಿದೆ. ಅದರ ಜತೆಗೆ ಪವನ ಶಕ್ತಿ ಕೂಡ ಹೆಚ್ಚಾಗಿ ಬರುತ್ತಿದ್ದು, ಶಾಖೋತ್ಪನ್ನ ಕೇಂದ್ರಗಳ ಮೇಲೆ ನೇರ ಪರಿಣಾಮ ಬೀರಿದೆ. ಆರ್‌ಟಿಪಿಎಸ್‌ನ ಎಂಟು ಘಟಕಗಳಿಂದ 1720 ಮೆಗಾವ್ಯಾಟ್ ಹಾಗೂ ವೈಟಿಪಿಎಸ್‌ನ ಎರಡು ಘಟಕಗಳಿಂದ 1600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಈಗ ಎರಡು ಕೇಂದ್ರಗಳ ಎಲ್ಲ ಘಟಕಗಳು ಸ್ಥಗಿತಗೊಂಡಿದ್ದು, ಒಂದೇ ಒಂದು ಮೆಗಾವ್ಯಾಟ್ ಉತ್ಪಾದನೆ ಮಾಡುತ್ತಿಲ್ಲ. ಈ ಎರಡು ಕೇಂದ್ರಗಳು ಹೊರತಾಗಿಯೂ ರಾಜ್ಯದಲ್ಲಿ 1642 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅದರ ಜತೆಗೆ ಸೋಲಾರ್ ಯೂನಿಟ್‌ಗಳಿಂದಲೂ ವಿದ್ಯುತ್ ಸಿಗುತ್ತಿದೆ.
Related Articles
Advertisement
ಬಳ್ಳಾರಿ ಥರ್ಮಲ್ ಪವರ್ ಸ್ಟೇಶನ್ ಕೂಡ ಕೆಲ ದಿನಗಳಿಂದ ಸ್ಥಗಿತಗೊಳಿಸಲಾಗಿತ್ತು. ಅಲ್ಲಿಯೂ ಮೂರು ಘಟಕಗಳಿಂದ 1750 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜಲಶಕ್ತಿ ಉತ್ಪಾದನೆ ಹಂತ ಹಂತವಾಗಿ ಕಡಿಮೆಯಾಗುತ್ತಿದ್ದು, ಮಂಗಳವಾರದಿಂದ ಎರಡು ಘಟಕಗಳನ್ನು ಪುನಾರಂಭಿಸಲಾಗಿದೆ.
ರಾಜ್ಯದಲ್ಲಿ ಜಲಶಕ್ತಿಯಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದು, ಶಾಖೋತ್ಪನ್ನ ಕೇಂದ್ರಗಳಿಗೆ ಬೇಡಿಕೆ ಕುಗ್ಗಿದೆ. ಹೀಗಾಗಿ ಎಲ್ಲ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಟಿಪಿಎಸ್‌ನಲ್ಲಿ ವಿದ್ಯುತ್ ಆರಂಭಿಸಿದ್ದು, ಶೀಘ್ರದಲ್ಲೇ ಆರ್‌ಟಿಪಿಎಸ್ ವೈಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗುವುದು. ಕಲ್ಲಿದ್ದಿಲು ಕೊರತೆಯಾಗಿಲ್ಲ. –ಹೆಸರು ಹೇಳಲಿಚ್ಛಿಸದ ಅಧಿಕಾರಿ