ಕವಿತಾಳ: ಸಂಸದ ಬಿ.ವಿ. ನಾಯಕ ಐದು ವರ್ಷದ ಆಡಳಿತದಲ್ಲಿ ಒಮ್ಮೆಯೂ ಹಳ್ಳಿ ಕಡೆ ಬಂದಿಲ್ಲ. ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಹೀಗಾಗಿ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಈ ಹಿಂದೆ ಸಿಲಿಂಡರ್ ಪಡೆಯಲು ಕೂಪನ್‌ಗಾಗಿ ಲೋಕಸಭೆ ಸದಸ್ಯರ ಪತ್ರಕ್ಕಾಗಿ ಅವರ ಮರ್ಜಿ ಕಾಯುವ ಪರಿಸ್ಥಿತಿ ದೇಶದಲ್ಲಿತ್ತು. ಆದರೆ ಮೋದಿ
ಪ್ರಧಾನಿಯಾದ ನಂತರ ದೇಶದ ಮೂಲೆ ಮೂಲೆಗಳಲ್ಲಿ ಪ್ರತಿ ಹಳ್ಳಿ ಮತ್ತು ಪ್ರತಿ ಮನೆಗೂ ಗ್ಯಾಸ್ ಸಿಲೆಂಡರ್ ತಲುಪಿಸಿದರು. 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ಸಿಗರಿಗೆ ಇದು ಏಕೆ ಸಾಧ್ಯವಾಗಿರಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ 10 ವರ್ಷಗಳ ಆಡಳಿತ ವ್ಯವಸ್ಥೆಗೆ ಮತ್ತು ಹಿಂದಿನ 5 ವರ್ಷಗಳ ಆಡಳಿತ ವ್ಯವಸ್ಥೆಗೆ ತುಲನೆ ಮಾಡಿ ನೋಡುವ ಮೂಲಕ ದೇಶದ ಅಭಿವೃದ್ಧಿ ಬಗ್ಗೆ ಮತ್ತು ಏಕತೆ ಬಗ್ಗೆ ಕಾಳಜಿ ವಹಿಸುವ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ದೇಶದಲ್ಲಿ ಮೋದಿ ಅಲೆ ಸೃಷ್ಟಿಯಾಗಿದೆ. ಅದನ್ನು ಎದುರಿಸುವ ತಾಕತ್ತೂ ಯಾವ ಪಕ್ಷದ ಮುಖಂಡರಿಗೂ ಇಲ್ಲ ಎಂದರು.
ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ 20 ವರ್ಷಗಳ ಕಾಲ ಸಂಸದರಾಗಿ ಅಧಿಕಾರ ನಡೆಸಿದ ವೆಂಕಟೇಶ ನಾಯಕ ಮತ್ತು ಬಿ.ವಿ.ನಾಯಕ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು. ಕ್ಷೇತ್ರ ವ್ಯಾಪ್ತಿಯ ಯಾವುದೇ ಹಳ್ಳಿಯಲ್ಲಿ ಒಂದೇ ಒಂದು ನೆನಪಿನಲ್ಲಿರುವಂತ ಕೆಲಸ ಮಾಡಿಲ್ಲ. ಚುನಾವಣೆ ನಂತರ ಹಳ್ಳಿಗಳ ಕಡೆ ಮುಖ ಮಾಡದ ಬಿ.ವಿ.ನಾಯಕರನ್ನು ನೋಡಬೇಕೆಂದರೆ ಹಳ್ಳಿಗಳಲ್ಲಿ ಕೋಳಿ, ಬಿರಿಯಾನಿ ಮಾಡಿ ಕರೆಸಿಕೊಳ್ಳಬೇಕು ಎಂದು ಟೀಕಿಸಿದರು.
ಮಾಜಿ ಶಾಸಕ ಗಂಗಾಧರ ನಾಯಕ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಶರಣಪ್ಪಗೌಡ ಮಾತನಾಡಿದರು. ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ,
ಮಾಜಿ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಮುಖಂಡರಾದ ವಿಶ್ವನಾಥ ಪಾಟೀಲ, ತಿಮ್ಮಾರೆಡ್ಡಿ, ಭೀಮನಗೌಡ ವಂದ್ಲಿ, ಭಾಸ್ಕರರಾವ್ ವರಲಕ್ಷ್ಮೀ, ಮಲ್ಲಿಕಾರ್ಜುನ ಜಕ್ಕಲದಿನ್ನಿ ಇತರರು ಇದ್ದರು.