ರಾಯಚೂರು: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದ ಗುರುವಾರ ನಾಮಪತ್ರ ಸಲ್ಲಿಕೆ ಭರಾಟೆ ಭರ್ಜರಿಯಾಗಿತ್ತು. ಕಣದಲ್ಲಿ ಪಕ್ಷೇತರರು ಸೇರಿ ಅಂತಿಮವಾಗಿ ಎಂಟು ಜನರಿಂದ 16 ನಾಮಪತ್ರ ಸಲ್ಲಿಕೆಯಾಗಿವೆ.
ಜಿಲ್ಲಾಧಿಕಾರಿ ಸಭಾಂಗಣಕ್ಕೆ ಸೂಚಕರೊಂದಿಗೆ ಆಗಮಿಸಿದ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಎಸ್‌ಯುಸಿಐ ಅಭ್ಯರ್ಥಿಗಳು ಮತ್ತೂಮ್ಮೆ ನಾಮಪತ್ರ ಸಲ್ಲಿಸಿದರು. ಮಾ.28ರಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ಬಿ.ವಿ.ನಾಯಕ ಅದ್ಧೂರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ್ದರೆ, ಗುರುವಾರ ಪುನಃ ಸಾಂಕೇತಿಕವಾಗಿ ಆದಾಯ ವಿವರದೊಂದಿಗೆ ಮೂರು ಉಮೇದುವಾರಿಕೆ ಸಲ್ಲಿಸಿದರು. ಇನ್ನು ಏ.1ರಂದು ಸರಳವಾಗಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಹುರಿಯಾಳು ರಾಜಾ ಅಮರೇಶ್ವರ ನಾಯಕ ಇಂದು ಭರ್ಜರಿ ಜನಬೆಂಬಲ ಹಾಗೂ ಪಕ್ಷದ ಮುಖಂಡರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಮೂರು ನಾಮಪತ್ರ ಸಲ್ಲಿಸಿದರು.
ಏ.2ರಂದು ಉಮೇದುವಾರಿಕೆ ಸಲ್ಲಿಸಿದ್ದ ಎಸ್‌ಯುಸಿಐ(ಸಿ) ಅಭ್ಯರ್ಥಿ ಕೆ.ಸೋಮಶೇಖರ ನಾಯಕ ಇಂದು ಕೂಡ ಮತ್ತೂಂದು ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಗಳಾಗಿ ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಎರಡು ನಾಮಪತ್ರ ಸಲ್ಲಿಸಿದರು. ಬಿಎಸ್ಪಿಯಿಂದ ವೆಂಕನಗೌಡ, ಸಿಪಿಐಎಂಎಲ್ ರೆಡ್‌ಸ್ಟಾರ್ ಪಕ್ಷದಿಂದ ಅಮರೇಶ ನಾಯಕ, ಪಕ್ಷೇತರರಾಗಿ ಮುದುಕಪ್ಪ ನಾಯಕ ಅವರು ಉಮೇದುವಾರಿಕೆ ಸಲ್ಲಿಸಿದರು. ಏ.3ರಂದು ಉತ್ತಮ ಪ್ರಜಾಕೀಯ ಪಾರ್ಟಿಯಿಂದ ನಿರಂಜನ್ ನಾಯಕ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ಮೆರವಣಿಗೆ: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಪಕ್ಷದಿಂದ ಭರ್ಜರಿ ಮೆರವಣಿಗೆ ನಡೆಸಲಾಯಿತು. ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದ ಬಿಜೆಪಿ ತನ್ನ ಶಕ್ತಿ ಪ್ರದರ್ಶಿಸಿತು. ನಗರದ ಗಂಜ್ ಕಲ್ಯಾಣ ಮಂಟಪದಿಂದ ಶುರುವಾದ ಮೆರವಣಿಗೆ ಚಂದ್ರಮೌಳೇಶ್ವರ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ತಲುಪಿತು. ಮಿನಿ ಲಾರಿ ಹತ್ತಿದ್ದ ಬಿಜೆಪಿ ಹುರಿಯಾಳು ರಾಜಾ ಅಮರೇಶ್ವರ ನಾಯಕ ಅವರ ಜೊತೆಗೆ ಮುಖಂಡರಾದ ಬಿ. ಶ್ರೀರಾಮುಲು, ಬಾಬುರಾವ್ ಚಿಂಚನಸೂರು, ಎ.ಬಿ.ಮಾಲಕರೆಡ್ಡಿ, ಹಾಲಪ್ಪ ಆಚಾರ್, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ, ಕೆ.ಶಿವನಗೌಡ ನಾಯಕ, ಡಾ| ಶಿವರಾಜ ಪಾಟೀಲ ಸೇರಿ ಅನೇಕ ಕಾರ್ಯಕರ್ತರು ಬೆಂಬಲಿಗರು ಪಾಲ್ಗೊಂಡಿದ್ದರು.
ಇನ್ನು ಪಕ್ಷೇತರ ಅಭ್ಯರ್ಥಿ ರಾಜಾ ರಂಗಪ್ಪ ನಾಯಕ ಕೂಡ ನಾಮಪತ್ರ ಸಲ್ಲಿಕೆಗೂ ಮುನ್ನ ಸ್ಟೇಷನ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅನೇಕ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.