Advertisement

ಚುನಾವಣೆಗೆ ಎಚ್ಡಿಕೆ ಸರ್ಕಾರದ ಹಣ ಬಳಕೆ

03:30 PM Apr 19, 2019 | Naveen |

ಮಸ್ಕಿ: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೈತ್ರಿ ಪಕ್ಷಗಳು ಸರ್ಕಾರದ ಹಣ, ಅಧಿಕಾರ ಬಳಸಿಕೊಳ್ಳಲು ಹೊರಟಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

Advertisement

ಪಟ್ಟಣದ ತೇರ್‌ ಬಜಾರ ಹತ್ತಿರ ಬುಧವಾರ ನಡೆದ  ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ತಮ್ಮ ಮಗನನ್ನು ಗೆಲ್ಲಿಸಲು ನೈತಿಕವಾಗಿ ಚುನಾವಣೆ ಎದುರಿಸದೇ 150 ಕೋಟಿ ಹಣ ಚೆಲ್ಲಿ ಗೆಲ್ಲಲು ಹೊರಟಿರುವುದು ಚೇತನಗೌಡ ಹಾಗೂ ರಮೇಶ ಎಂಬ ಜೆಡಿಎಸ್‌ ಮುಖಂಡರು ನಡೆಸಿರುವ ದೂರವಾಣಿಯಲ್ಲಿ ಬಹಿರಂಗವಾಗಿದೆ ಎಂದು ಅವರು ಆರೋಪಿಸಿದರು.

ಹೊಟ್ಟೆಗೆ ಹಿಟ್ಟಿಲ್ಲದ ಯುವಕರು ದೇಶದ ಸೇನೆ ಸೇರುತ್ತಾರೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರ
ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದರು.

ದೇಶದ ಎಲ್ಲ ನದಿಗಳ ಜೋಡಣೆ ಮಾಡಿ ನೀರಿನ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಈ ಭಾಗದ ಕೃಷ್ಣ ಬಲದಂಡೆ 5ಎ ನಾಲಾ ಯೋಜನೆ ಹಾಗೂ ಕನಕನಾಲಾ ಯೋಜನೆಗಳ ಜಾರಿಗೆ ಆದ್ಯತೆ ನೀಡಲಾಗುವುದು. 60 ವರ್ಷದ ರೈತರಿಗೆ ಪೆನ್ಷನ್‌ ಯೋಜನೆ ಜಾರಿಗೊಳಿಸಲಾಗುವುದು. ರೈತರ ಖಾತೆಗಳಿಗೆ ಪ್ರತಿ ವರ್ಷ 6 ಸಾವಿರ ರೂ. ಹಾಕಲಾಗುವುದು. ಶೇ 33 ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲಾಗುವುದು. ದೇಶದಲ್ಲಿನ ಎಲ್ಲರಿಗೂ ಸೂರು ಒದಗಿಸಲಾಗುವುದು ಎಂದರು.

ಲೋಕಸಭೆ ಚುನಾವಣೆಯಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದ ಅವರು ಮೋದಿ ಮತ್ತೇ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೋದಿ ಅವರನ್ನು ಪ್ರಧಾನಿ ಮಾಡಲು ಸರಳ ಸಜ್ಜನಿಕೆಯ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರನ್ನು ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೋಳ್ಳುವಂತೆ ಮನವಿ ಮಾಡಿದರು.

Advertisement

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಗಣ್ಣ ಕರಡಿ ಮಾತನಾಡಿ, ಪುಲ್ವಾಮಾ ಉಗ್ರರ ದಾಳಿಯಲ್ಲಿ 44 ಸೈನಿಕರು ಹತರಾಗಿದ್ದಕ್ಕೆ ಪ್ರತೀಕಾರವಾಗಿ ದೇಶದ ಸೇನೆ ಪಾಕಿಸ್ತಾನದ ಬಾಲಾಕೋಟ್‌ ಉಗ್ರರ ತಾಣದ ಮೇಲೆ ದಾಳಿ ಮಾಡಿ 250ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿದೆ. ಆದರೆ ಉಗ್ರರು ಸತ್ತ ದೃಶ್ಯವನ್ನು ಮಾಧ್ಯಮದಲ್ಲಿ ತೋರಿಸಿಲ್ಲ ಎಂದು ಹೇಳಿರುವ ಶಾಸಕ ಬಸವರಾಜ ಹಿಟ್ನಾಳ್‌ ಅವರ ಮನಸ್ಥಿತಿ ಎಂಥದ್ದು ಎಂಬುದು ಇದರಿಂದ ಗೋತ್ತಾಗುತ್ತದೆ ಎಂದು ಟೀಕಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದ ಜನತೆ ತಮಗೆ 13 ಸಾವಿರಕ್ಕೂ ಅಧಿಕ ಮತಗಳ ಲೀಡ್‌ ನೀಡಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ವಿನಂತಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌.ಬಸನಗೌಡ ತುರ್ವಿಹಾಳ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಬಸನಗೌಡ ಬ್ಯಾಗವಾಟ್‌, ಮಲ್ಲಪ್ಪ ಅಂಕುಶದೊಡ್ಡಿ ಮಾತನಾಡಿದರು.

ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ಸಿದ್ಧನಗೌಡ ಮಾಟೂರು, ಕೆ.ವೀರನಗೌಡ, ಜಿಪಂ ಮಾಜಿ ಸದಸ್ಯ ವಿಶ್ವನಾಥರೆಡ್ಡಿ ತೋರಣದಿನ್ನಿ, ದಯಾನಂದ ಪಾಟೀಲ ಹುಲ್ಲೂರು, ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅಮೀನಗಡ, ನಗರ ಅಧ್ಯಕ್ಷ ಅಪ್ಪಾಜಿಗೌಡ, ಸಿದ್ದಣ್ಣ ಹೂವಿನಬಾವಿ, ವಿರುಪಾಪುರ ಅಮರೇಗೌಡ, ಯುವ
ಮೋರ್ಚಾ ಅಧ್ಯಕ್ಷ ಶರಣಯ್ಯಸ್ವಾಮಿ ಗುಡದೂರು, ನಗರ ಮಹಿಳಾ ಘಟಕ ಅಧ್ಯಕ್ಷೆ ಲತಾ, ಕಿರಣ ಸಾನಬಾಳ, ಶಂಕ್ರಪ್ಪ ಹಳ್ಳಿ, ಮಸ್ಕಿ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕ ಅಧ್ಯಕ್ಷೆ ಶಾರದಾ ರಾಠೊಡ ಸೇರಿ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಂತಾಪ: ಇದೇ ವೇಳೆ ಬಸಾಪುರದ ವೀರ ಯೋಧ ವೀರಭದ್ರಪ್ಪ ಮಟ್ಟೂರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಬಿಎಸ್‌ವೈ ತರಾತುರಿ: ಬಾಗಲಕೋಟೆಯಲ್ಲಿ ಶುಕ್ರವಾರ ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗಿಯಾಗಬೇಕಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ವೇದಿಕೆಗೆ ಆಗಮಿಸುತ್ತಲೇ ಕಾರ್ಯಕ್ರಮ ಉದ್ಘಾಟನೆಗೆ ಮುಂದಾದರು. ಸಮಾವೇಶದುದ್ದಕ್ಕೂ ಅವಸರಿಸಿದ ದೃಶ್ಯ ಕಂಡುಬಂತು. ಹೀಗಾಗಿ ಸಮಾವೇಶ ತರಾತುರಿಯಲ್ಲಿ ನಡೆಯಿತು.

ಅಕ್ರಮ ಹಣ ಇಟ್ಟುಕೊಂಡಿರುವವರ ಮೇಲೆ ಐಟಿ ದಾಳಿ ಮಾಡುತ್ತದೆ. ಆದರೆ ಇದನ್ನು ವಿರೋಧಿಸಿ ಐಟಿ ಇಲಾಖೆ ಮುಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವರು, ಕಾಂಗ್ರೆಸ್‌-ಜೆಡಿಎಸ್‌ ಮುಖಂಡರೊಂದಿಗೆ ಧರಣಿ ನಡೆಸಿರುವುದು ಇವರ
ನಿಜಬಣ್ಣವನ್ನು ಬಯಲು ಮಾಡಿದೆ.
ಯಡಿಯೂರಪ್ಪ,
ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next