Advertisement

ಜನರ ಕೈಗೆ ಅಧಿಕಾರ ನೀಡುವ ಉದ್ದೇ ಶದಿಂದ ಸ್ಪರ್ಧೆ

12:08 PM Apr 15, 2019 | Naveen |

ರಾಯಚೂರು: ಜನರಿಂದ ಆಯ್ಕೆಯಾಗುವ ನಾಯಕರು ಜನಸೇವೆ ಮಾಡಬೇಕೇ ವಿನಃ ರಾಜಾಡಳಿತ ಮಾಡಬಾರದು. ಇದೇ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪ್ರಜಾಕೀಯ ಆರಂಭಿಸಿ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿದಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ವ್ಯವಸ್ಥೆ ಎನ್ನುವುದು ಜನರಿಗಾಗಿ ಇರುವಂಥದ್ದು. ಅವರಿಗೆ ಅಧಿಕಾರ ಸಿಗಬೇಕೆ ವಿನಃ ಬೇರೆ ಯಾರೋ ಅನುಭವಿಸುವುದಲ್ಲ. ಜನರ ಕೈಗೆ ಅಧಿ ಕಾರ ಕೊಡುವ ಉದ್ದೇಶದಿಂದಲೇ ನಾವು ಸ್ಪರ್ಧೆಗಿಳಿದಿದ್ದೇವೆ. ರಾಜ್ಯದ 27 ಕ್ಷೇತ್ರಗಳಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಳ್ಳಾರಿಯಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸ್ಪರ್ಧೆ ಮಾಡಿಲ್ಲ. ರಾಯಚೂರು ಕ್ಷೇತ್ರದಿಂದ ವಕೀಲ ವೃತ್ತಿ ಅಭ್ಯಾಸ ಮಾಡುತ್ತಿರುವ ನಿರಂಜನ ನಾಯಕರನ್ನು ಕಣಕ್ಕಿಳಿಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನದೇ ವಿಶಿಷ್ಟ ಚಿಂತನೆಗಳನ್ನು ವಿವರಿಸಿದ್ದು, ನಮ್ಮ ಪಕ್ಷದ
ಸಿದ್ಧಾಂತಗಳಿಗೆ ಬದ್ಧರಾಗಿಯೇ ಪಕ್ಷ ಸೇರಿದ್ದಾರೆ ಎಂದು ವಿವರಿಸಿದರು.

ಪ್ರಣಾಳಿಕೆಗಳು ಕೇವಲ ಆಶ್ವಾಸನೆಗಳಾಗಬಾರದು. ಅವರು ನೀಡುವ ಭರವಸೆಗಳನ್ನು ನ್ಯಾಯಾಲಯದಿಂದ ಅಧಿಕೃತಗೊಳಿಸಬೇಕು. ಒಂದು ವೇಳೆ ಅವರು ಹೇಳಿದ ಬೇಡಿಕೆ ಈಡೇರಿಸದಿದ್ದಲ್ಲಿ ಅವರನ್ನು ಕೈಬಿಡುವ ವ್ಯವಸ್ಥೆ ಬರಬೇಕು. ಆ ದಿಸೆಯಲ್ಲಿ ಸಂವಿಧಾನದಲ್ಲಿ ಬದಲಾವಣೆ ಬರಬೇಕು ಎಂದರು.

ಬದಲಾವಣೆ ಎನ್ನುವುದು ಜನರ ಮನಸಿನಿಂದಲೇ ಬರಬೇಕು. ಪ್ರತಿ ವ್ಯಕ್ತಿಯ ಆಂತರ್ಯದಲ್ಲಿ ಕ್ರಾಂತಿ ಆದಾಗ ಮಾತ್ರ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಾಗಲಿದೆ. ಈಗ ನಡೆಯುತ್ತಿರುವ ಚುನಾವಣೆಗಳು ಪ್ರಜಾಪ್ರಭುತ್ವದ ಆಶಯದ ವಿರುದ್ಧ ದಿಕ್ಕಿನಲ್ಲಿವೆ. ಜನರಿಗಾಗಿ ದುಡಿಯಬೇಕಾದ ವ್ಯಕ್ತಿ ರಾಜನಂತೆ ಮೆರೆಯುತ್ತಿದ್ದಾರೆ. ಅದಕ್ಕೆ ಜನರೂ ಕಾರಣರಾಗಿದ್ದಾರೆ. ದೊಡ್ಡ ದೊಡ್ಡ ರೋಡ್‌
ಶೋಗಳು, ರ್ಯಾಲಿಗಳು, ಸಮಾವೇಶಗಳನ್ನು ನಡೆಸಿ ದುಂದು
ವೆಚ್ಚ ಮಾಡಿ ಚುನಾವಣೆ ನಡೆಸುವ ವ್ಯವಸ್ಥೆ ಬದಲಾಗಬೇಕು ಎಂದರು.

ನಾನು ಯಾವುದೇ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಅವರನ್ನು ಬೆಂಬಲಿಸುವುದಿಲ್ಲ. ಜನಾಭಿಪ್ರಾಯ ಪಡೆದು ಅವರ ಬೇಡಿಕೆಗಳಿಗೆ ಸಮ್ಮತಿಸುವ ಪಕ್ಷಗಳ ಜತೆಯೇ ಕೈ ಜೋಡಿಸುತ್ತೇವೆ. ಇಲ್ಲಿ ಜನರೇ ಅಂತಿಮ. ಇದು ಅಪ್ಪಟ ಜನರ ಪಕ್ಷವಾಗಿದ್ದು, ಜನರ ಬೇಡಿಕೆಗಳ ಅನುಸಾರವಾಗಿಯೇ ಕೆಲಸ ಮಾಡಲಿದೆ ಎಂದರು. ಯಾವುದೇ ಕ್ಷೇತ್ರದಲ್ಲಿ ಗುರಿ ಮುಟ್ಟಬೇಕಾದರೆ ಯೋಗ್ಯತೆ ಬಹಳ ಮುಖ್ಯ. ಕುಟುಂಬ ರಾಜಕಾರಣ ಮಾಡಿದರೂ ಮಗನಿಗೆ ಯೋಗ್ಯತೆ ಇದ್ದರೆ ಜನ ಬೆಂಬಲಿಸುತ್ತಾರೆ.

Advertisement

ಇಲ್ಲವಾದರೆ ಸೋಲಿಸುತ್ತಾರೆ. ಎಲ್ಲರೂ ಭ್ರಷ್ಟರೇ ಎಂದು ಜರಿಯುವುದಕ್ಕಿಂತ ನಾನೊಬ್ಬನಾದರೂ ಪ್ರಾಮಾಣಿಕ ಎಂಬ ಭಾವನೆ ಬಂದಾಗಲೇ ಬದಲಾವಣೆ ಸಾಧ್ಯ. ಅದು ನನ್ನಿಂದಲೇ ಆರಂಭವಾಗಬೇಕು ಎಂದು ತಿಳಿಸಿದರು. ಪಕ್ಷದ ಅಭ್ಯರ್ಥಿ ನಿರಂಜನ ನಾಯಕ ಇದ್ದರು.

ಚುನಾವಣೆ ಎಂದರೆ ಯುದ್ಧ ಎನ್ನುವಂತೆ ಬಿಂಬಿಸಲಾಗಿದೆ. ಹಣವಂತರು, ಬಲಾಡ್ಯರು ಮಾತ್ರ ಇಲ್ಲಿ ಜಯಿಸಬಲ್ಲರು. ಸಾಮಾನ್ಯರಿಗೆ ಅದು ಅಸಾಧ್ಯ ಎನ್ನುವಂಥ ಸ್ಥಿತಿ ನಿರ್ಮಿಸಿದ್ದೇವೆ. ಆದರೆ, ಈ ವ್ಯವಸ್ಥೆಯಲ್ಲಿ ಸಾಮಾನ್ಯರು ಕೂಡ ಸ್ಪರ್ಧಿಸಬಹುದು ಎಂಬ ತತ್ವದಡಿ ನಾವು ಮುನ್ನಡೆದಿದ್ದೇವೆ.
ಉಪೇಂದ್ರ,
ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next