Advertisement

ಮಂಡ್ಯಕ್ಕೆ ಮೀಸಲಾದ ಮೈತ್ರಿ ವರಿಷ್ಠರು

01:16 PM Apr 14, 2019 | Naveen |

ರಾಯಚೂರು: ಚುನಾವಣೆಗೆ ಕೇವಲ 9 ದಿನ ಮಾತ್ರ ಬಾಕಿ ಇದ್ದು, ಈ ಭಾಗದ ಕಡೆ ಮೈತ್ರಿ ಪಕ್ಷದ ಹಿರಿಯ ನಾಯಕರು ತಲೆ ಹಾಕದಿರುವುದು ಅಭ್ಯರ್ಥಿಗಳಿಗೆ
ಸಂಕಷ್ಟ ತಂದೊಡ್ಡಿದೆ. ಮೈತ್ರಿ ಹೆಸರಲ್ಲಿ ಕಣಕ್ಕಿಳಿದರೂ ಅವರದ್ದು ಕಾಂಗ್ರೆಸ್‌ ಅಭ್ಯರ್ಥಿಗಳದ್ದು ಒಂಟಿ ಹೋರಾಟ ಎನ್ನುವಂತಾಗಿದೆ.

Advertisement

ಜೆಡಿಎಸ್‌ ವರಿಷ್ಠರು ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡಿದ್ದು, ಬೇರೆ ಜಿಲ್ಲೆಗಳ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ
ಎನ್ನುತ್ತಿವೆ ಪಕ್ಷದ ಮೂಲಗಳು. ಚುನಾವಣೆಗೆ ಇನ್ನೂ ಕೇವಲ 9 ದಿನವಷ್ಟೇ ಬಾಕಿ ಇದ್ದು, ಈವರೆಗೆ ಯಾವುದೇ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕೆ
ಬಂದ ನಿದರ್ಶನ ಕಡಿಮೆ. ಇದರಿಂದ ಕಾಂಗ್ರೆಸ್‌ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಮೈತ್ರಿ ನೆಪಮಾತ್ರಕ್ಕೆ ಎನ್ನುವ ಸಂದೇಶ ಕಾರ್ಯಕರ್ತರಿಗೆ ರವಾನೆಯಾಗುತ್ತಿದೆ.

ವಿಪರ್ಯಾಸ ಎಂದರೆ ಜಿಲ್ಲೆಯ ಮಾನ್ವಿ ಕ್ಷೇತ್ರದ ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಕೂಡ ಮಂಡ್ಯದಲ್ಲಿ ನಿಖೀಲ್‌ ಕುಮಾರಸ್ವಾಮಿ ಪರ ಪ್ರಚಾರಕ್ಕೆ ತೆರಳಿದ್ದರು. ಆದರೆ, ಜಿಲ್ಲೆಯಲ್ಲಿ ಮೈತ್ರಿ ನಾಯಕರು
ಹೆಚ್ಚು ಪ್ರಚಾರ ಮಾಡಿಲ್ಲ. ಇನ್ನೂ ಸಚಿವ ಸ್ಥಾನ ಪಡೆದಿರುವ ವೆಂಕಟರಾವ್‌ ನಾಡಗೌಡ ಅವರು ಕಾಂಗ್ರೆಸ್‌ ಜತೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ
ಬಳಿಕ ಮತ್ತೆ ಬಹಿರಂಗವಾಗಿ ಕಂಡು ಬಂದಿಲ್ಲ. ಅವರ ಕ್ಷೇತ್ರ ಸಿಂಧನೂರು ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಒಳಪಡುತ್ತಿದೆಯಾದರೂ ನಾಡಗೌಡರು
ರಾಯಚೂರು ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ಪ್ರಭಾವಿ ಸ್ಥಾನದಲ್ಲಿರುವ ಅವರು ಕಾಂಗ್ರೆಸ್‌ ಪರ ಜೋರು ಪ್ರಚಾರಕ್ಕೆ ಮುಂದಾಗುತ್ತಿಲ್ಲ. ಸ್ಥಳೀಯ
ಮಟ್ಟದ ಒಳಮುನಿಸಿನಿಂದ ಅವರು ಪ್ರಚಾರದಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತಗೊಂಡ ಜೆಡಿಎಸ್‌ ಅಭ್ಯರ್ಥಿಗಳ ಜತೆ ಹೊಂದಾಣಿಕೆ ಸಮಸ್ಯೆ ಏರ್ಪಟ್ಟಿದ್ದು, ಅವರು ಕೂಡ
ಮನಸ್ಸಿಲ್ಲದ ಮನಸ್ಸಿನಿಂದ ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಅಂಶಗಳು ಮೈತ್ರಿಗೆ ವಿರುದ್ಧ ನಡೆಯನ್ನು ಪ್ರದರ್ಶಿಸುತ್ತಿವೆ. ಜೆಡಿಎಸ್‌ ಮಾತ್ರವಲ್ಲ ಕಾಂಗ್ರೆಸ್‌ನ ರಾಜ್ಯಮಟ್ಟದ ನಾಯಕರು ಕೂಡ ಜಿಲ್ಲೆಯತ್ತ ಸುಳಿಯುತ್ತಿಲ್ಲ. ಪಕ್ಕದ ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರವಿದ್ದರೆ ಜಿಲ್ಲೆಯಲ್ಲಿ ಮಾತ್ರ ಸ್ಥಳೀಯ ನಾಯಕರೇ ಮತಬೇಟೆಯಲ್ಲಿ ತೊಡಗಿದ್ದಾರೆ.

ವರಿಷ್ಠರು ಬರದಿದ್ದರೆ ಕಷ್ಟ: ಮೈತ್ರಿ ಪಕ್ಷದ ವರಿಷ್ಠ ನಾಯಕರು ಬಂದು ಪ್ರಚಾರ ಮಾಡದಿದ್ದಲ್ಲಿ ಜಂಟಿ ಹೋರಾಟ ಸಫಲವಾಗುವುದಿಲ್ಲ ಎಂದೇ
ವಿಶ್ಲೇಷಿಸಲಾಗುತ್ತಿದೆ. ತಮ್ಮ ನೆಚ್ಚಿನ ನಾಯಕರು ಬಂದು ಪ್ರಚಾರ ಮಾಡಿದಲ್ಲಿ ತಳ ಮಟ್ಟದ ಕಾರ್ಯಕರ್ತರು ಹೆಚ್ಚು ಸಕ್ರಿಯರಾಗಬಹುದು. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಬಿಜೆಪಿ ಸಮಬಲದ ಹೋರಾಟ ಕಂಡು ಬರುತ್ತಿದ್ದು,
ಸಮರ್ಪಕ ಪ್ರಚಾರ ನಡೆಸದಿದ್ದಲ್ಲಿ ಕಷ್ಟವಾಗಬಹುದು ಎಂದೇ ಹೇಳಲಾಗುತ್ತಿದೆ.

Advertisement

ಸ್ಟಾರ್‌ ಪ್ರಚಾರಕರ ನಿರೀಕ್ಷೆ
ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್‌-ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದು, ಉಭಯ ಪಕ್ಷಗಳ ಅಭ್ಯರ್ಥಿಗಳು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಎಡತಾಕುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮೊದಲಿನಿಂದಲೇ ಸಂಘಟನೆಯಲ್ಲಿ ತೊಡಗಿದರೆ, ಬಿಜೆಪಿ ಅಭ್ಯರ್ಥಿ ಘೋಷಣೆ ವಿಳಂಬವಾದ ಕಾರಣ ಈಗ ಪ್ರಚಾರದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ಜಿಲ್ಲೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ , ಸ್ಮೃತಿ ಇರಾನಿ, ಪವನ ಕಲ್ಯಾಣ್‌ ಸೇರಿ ಕೆಲ ಸ್ಟಾರ್‌ ಪ್ರಚಾರಕರು ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಏ.14ರಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಆಗಮಿಸುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next