Advertisement

ಮಹಾನ್‌ ಮಾನವತಾವಾದಿಗೆ ನಮನ

12:17 PM Apr 15, 2019 | Team Udayavani |

ರಾಯಚೂರು: ವಿಶ್ವ ಕಂಡ ಮೇಧಾವಿ, ಮಹಾನ್‌ ಮಾನವತಾವಾದಿ, ಸಂವಿಧಾನಶಿಲ್ಪಿ, ದೀನ ದಲಿತರ ಆಶಾಕಿರಣ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 128ನೇ ಜಯಂತಿಯನ್ನು ನಗರ ಸೇರಿ ಜಿಲ್ಲಾದ್ಯಂತ ರವಿವಾರ ಸಂಭ್ರಮದಿಂದ ಆಚರಿಸಲಾಯಿತು.

Advertisement

ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಿಲ್ಲಾಡಳಿತ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿತ್ತು. ಆದರೆ, ಕಾರ್ಯಕ್ರಮಕ್ಕೆ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಅದ್ಧೂರಿತನ ಕಂಡು ಬಂತು. ರವಿವಾರ ಬೆಳಗ್ಗೆ ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿನ ಪ್ರತಿಮೆಗೆ ಜಿಲ್ಲಾಧಿಕಾರಿ ಶರತ್‌ ಬಿ. ಮಾಲಾರ್ಪಣೆ ಮಾಡಿ ಬಳಿಕ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿದರು.

ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಲ್ಲಿಂದ ವಿವಿಧ ವಾದ್ಯಮೇಳಗಳು, ನೂರಾರು ಜನರ ನೇತೃತ್ವದಲ್ಲಿ ಸಾರೋಟಿನಲ್ಲಿ ರಂಗಮಂದಿರದವರೆಗೆ ಡಾ| ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ನೆರವೇರಿಸಲಾಯಿತು.

ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಹಾಗೂ ದಲಿತ ಸಾಂಸ್ಕೃತಿಕ ಚಿಂತಕ ಪ್ರೊ| ಎನ್‌.ಚಿನ್ನಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಡಾ| ಬಿ.ಆರ್‌. ಅಂಬೇಡ್ಕರ್‌ ಅಸ್ಪೃಶ್ಯತೆಯನ್ನು ಹೊಡೆದೋಡಿಸಿ ಹಿಂದುಳಿದವರನ್ನು ಬಂಧಮುಕ್ತಗೊಳಿಸಲು ಶ್ರಮಿಸಿದರು. ಈ ಕಾರಣಕ್ಕೆ ಅವರನ್ನು ದಲಿತರ ಸೂರ್ಯ ಎಂದೇ ಬಣ್ಣಿಸಲಾಗುತ್ತಿದೆ ಎಂದರು.

ಪ್ರಗತಿಪರ ಸಾಮಾಜಿಕ ಚಿಂತನೆಗಳು ಗಟ್ಟಿಗೊಳ್ಳಲು ಡಾ|ಅಂಬೇಡ್ಕರ್‌ರ ತತ್ವ ಸಿದ್ಧಾಂತಗಳು ಅಗತ್ಯ. ಅಂಬೇಡ್ಕರ್‌ರು ಜನಿಸಿ
128 ವರ್ಷಗಳು ಗತಿಸಿವೆ. ಅವರ ಬದುಕಿನ 56 ವರ್ಷಗಳಲ್ಲಿ ಅನೇಕ
ಪ್ರಶ್ನೆಗಳನ್ನು ತಮ್ಮಲ್ಲಿಯೇ ಹುಟ್ಟು ಹಾಕಿಕೊಂಡು ಅದಕ್ಕೆ ಸಂವಿಧಾನದ ಮೂಲಕ ಉತ್ತರ ನೀಡಿದ್ದಾರೆ. ಸಾಮಾಜಿಕ ಚಿಂತನೆಯಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಬೇಕೆಂಬುದೇ ಅವರ ಪ್ರಮುಖ ಧ್ಯೇಯವಾಗಿತ್ತು ಎಂದರು.

Advertisement

ಬ್ರಿಟೀಷರ ಆಳ್ವಿಕೆಯಲ್ಲಿ ಭಾರತದ ಸಂವಿಧಾನ ರಚನೆಗೆ ಯಾರೂ ಮುಂದೆ ಬರಲಿಲ್ಲ. ಅಂಬೇಡ್ಕರ್‌ ಮುಂದೆ ಬರಬೇಕಾಯಿತು. ಇವರು ಬರೆದ ಸಂವಿಧಾನ ಪ್ರಜೆಗಳು, ಪ್ರಜೆಗಳಿಂದ, ಪ್ರಜೆಗಳಿಗೊಸ್ಕರ ರಚನೆಗೊಂಡಿದೆ. ಬಾಬಾಸಾಹೇಬರು ಬಳುಸುತ್ತಿದ್ದ ಪದಗಳೆಲ್ಲವೂ ಕ್ರಾಂತಿಕಾರವಾಗಿದ್ದವು. ಅದಕ್ಕಾಗಿ ಕೆಲವರು ಅವರನ್ನು ವಿರೋಧಿಸಿದರು. ಬಾಬಾಸಾಹೇಬರ ಚಿತ್ರ ಪ್ರತಿಯೊಬ್ಬರ ಮನೆಯಲ್ಲಿ ಅಳವಡಿಸುವುದಲ್ಲ ಮನದಲ್ಲಿ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಭಾರತದಲ್ಲಿ ಇಂದಿಗೂ ಅಮಾನವೀಯ ಆಚರಣೆಗಳು ಜೀವಂತವಾಗಿದ್ದು, ಅವುಗಳ ನಿರ್ಮೂಲನೆಗಾಗಿ ನಾವು ಬಾಬಾಸಾಹೇಬರ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಪ್ರಬುದ್ಧ ರಾಷ್ಟ್ರವನ್ನು ಕಟ್ಟಬೇಕಿದೆ. ಆದ್ದರಿಂದ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಏಕಮುಖವಾದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಿ ಅಂಬೇಡ್ಕರ್‌ರ ಕನಸು ನನಸು ಮಾಡಲು ಸಾಧ್ಯ ಎಂದರು.

ಬೀದರ್‌ ಜಿಲ್ಲೆಯ ಯಾಕತ್‌ಪುರ ಬುದ್ಧ ವಿಹಾರದ ದಮ್ಮದೀಪ ಬಂತೇಜಿ, ಜಿಪಂ ಸಿಇಒ ನಲಿನ್‌ ಅತುಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ನಗರಸಭೆ ಪೌರಾಯುಕ್ತ ರಮೇಶ ನಾಯಕ, ಸಹಾಯಕ ಆಯಕ್ತೆ ಶಿಲ್ಪಾ ಶರ್ಮಾ, ಸಮಾಜ ಕಲ್ಯಾಣ ಇಲಾಖೆ ಅ ಧಿಕಾರಿ ಪ್ರಶಾಂತ ಇತರರು ಉಪಸ್ಥಿತರಿದ್ದರು.

ಜಯಂತಿಗೆ ಹೊಸ ಕಟ್ಟೆ: ನಗರದ ಡಾ| ಅಂಬೇಡ್ಕರ್‌ ವೃತ್ತದಲ್ಲಿನ ಪ್ರತಿಮೆ ಸುತ್ತಲಿನ ಕಟ್ಟೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸುವ ಮೂಲಕ ಜಯಂತಿ ವೇಳೆಗೆ ಲೋಕಾರ್ಪಣೆ ಮಾಡಲಾಯಿತು. ಪ್ರತಿಮೆಯನ್ನು ಬಿಟ್ಟು ಸುತ್ತಲಿನ ಚೌಕಟ್ಟು, ಕಟ್ಟೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಅಲ್ಲದೇ, ಪ್ರತಿಮೆ ಕಟ್ಟೆಗೆ ಮಾರ್ಬಲ್‌ ಹಾಕಿಸುವ ಮೂಲಕ ಹೊಸ ಕಳೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next