Advertisement
ರಾಯಬಾಗ: ಕೃಷ್ಣಾ ನದಿ ಪ್ರವಾಹ ಇಳಿಮುಖವಾದಂತೆ ಪರಿಹಾರ ಕೇಂದ್ರ ಮತ್ತು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದ ನೆರೆ ಸಂತ್ರಸ್ತರು ಮರಳಿ ತಮ್ಮ ಮನೆಗಳತ್ತ ಹೆಜ್ಜೆಇಟ್ಟು, ನೀರು, ಕೆಸರುಗಳಿಂದ ತುಂಬಿದ್ದ ಮನೆಗಳ ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ.
Related Articles
Advertisement
ಪ್ರವಾಹ ಪೀಡಿತ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಮತ್ತು ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಪ್ರವಾಹಕ್ಕೆ ಒಳಗಾದ ಗ್ರಾಮಗಳಿಗೆಎಲ್ಲ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಪ್ರವಾಹದಿಂದ ನದಿ ನೀರು ಜಮೀನುಗಳಲ್ಲಿ ಹೊಕ್ಕಿದ್ದರಿಂದ ಬೆಳೆ ಸಂಪೂರ್ಣ ನಾಶಗೊಂಡಿದ್ದು, ಬೆಳೆಗಳು ನೀರು ಪಾಲಾಗಿದೆ. ಇದರಿಂದ ದನಕರುಗಳಿಗೆ ಮೇವಿನ ಸಮಸ್ಯೆಉಂಟಾಗಿದೆ. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ನೀರು ನುಗ್ಗಿದ್ದರಿಂದ ವಿದ್ಯಾರ್ಥಿಗಳ ಪುಸ್ತಕಗಳು ಮತ್ತು ರೈತರ ದಾಖಲೆ, ಕಾಗದ ಪತ್ರಗಳು ನೀರು ಪಾಲಾಗಿ ಹಾಳಾಗಿವೆ. ಪಠ್ಯ, ಪುಸ್ತಕಗಳನ್ನು ಹಾಗೂ ದಾಖಲೆಗಳನ್ನು ಬಿಸಿಲಿಗೆ ಇಟ್ಟು ಒಣಗಿಸಲಾಗುತ್ತಿದೆ.
ಖೆಮಲಾಪುರ ಮತ್ತು ಶಿರಗೂರ ಗ್ರಾಮದ ಇನ್ನು ಕೆಲ ನಿರಾಶ್ರಿತರು ಪರಿಹಾರ ಕೇಂದ್ರಗಳಲ್ಲಿ ನೆಲೆಸಿದ್ದಾರೆ. ಕೆಲ ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದರೆ, ಇನ್ನು ಕೆಲ ಮನೆಗಳು ಶಿಥಿಲಗೊಂಡಿವೆ. ಇದರಿಂದ ಜನರು ಮನೆಗಳಲ್ಲಿ ಬಂದು ನೆಲೆಸಲು ಹಿಂಜರಿಯುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕೆಂದು ನಿರಾಶ್ರಿತರು ಆಗ್ರಹಿಸಿದ್ದಾರೆ.
ಜಾನುವಾರುಗಳು ರೋಗದಿಂದ ಬಳಲುತ್ತಿದ್ದು, ಪಶು ವೈದ್ಯರು ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ಶಾಲೆಗಳು ಕೆಸರುಗದ್ದೆಯಾಗಿದ್ದು, ದುರ್ನಾತ ಬೀರುತ್ತಿವೆ. ಅವುಗಳನ್ನು ಸ್ವಚ್ಛಗೊಳಿಸಬೇಕು. ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ನೆರೆ ಪೀಡಿತ ಗ್ರಾಮಗಳಲ್ಲಿ ಶೀಘ್ರ ಮನೆಗಳ ಸರ್ವೇ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.