Advertisement

ರಾವಲ್ಪಿಂಡಿ: ಅಂತಿಮ ದಿನದಾಟದಲ್ಲಿ 3 ಶತಕ

10:03 AM Dec 16, 2019 | sudhir |

ರಾವಲ್ಪಿಂಡಿ: ಮೊದಲ 4 ದಿನ ಮಳೆಯಿಂದ ನೀರಸವಾಗಿದ್ದ ರಾವಲ್ಪಿಂಡಿ ಟೆಸ್ಟ್‌ ಪಂದ್ಯ ಅಂತಿಮ ದಿನವಾದ ರವಿವಾರ 3 ಶತಕಗಳೊಂದಿಗೆ ಕಾವೇರಿಸಿಕೊಂಡಿತು. ನಿರೀಕ್ಷೆಯಂತೆ ಡ್ರಾದಲ್ಲಿ ಅಂತ್ಯ ಕಂಡಿತು.

Advertisement

ಮೊದಲು ಶ್ರೀಲಂಕಾದ ಧನಂಜಯ ಡಿ ಸಿಲ್ವ, ಬಳಿಕ ಆತಿಥೇಯ ತಂಡದ ಅಬಿದ್‌ ಅಲಿ ಮತ್ತು ಬಾಬರ್‌ ಆಜಂ ಶತಕ ಬಾರಿಸಿ ರಂಜಿಸಿದರು. ಲಂಕಾ 6 ವಿಕೆಟಿಗೆ 308 ರನ್‌ ಮಾಡಿ ಡಿಕ್ಲೇರ್‌ ಮಾಡಿದರೆ, ಪಾಕ್‌ 2 ವಿಕೆಟಿಗೆ 252 ರನ್‌ ಪೇರಿಸಿತು.

4 ದಿನಗಳಿಂದ ನಾಟೌಟ್‌ ಆಗಿ ಉಳಿದಿದ್ದ ಧನಂಜಯ ಡಿ ಸಿಲ್ವ ಅಜೇಯ 102 ರನ್‌ ಬಾರಿಸಿದರು (166 ಎಸೆತ, 15 ಬೌಂಡರಿ). ಇವರ ಶತಕ ಪೂರ್ತಿಗೊಂಡ ಬಳಿಕ ಲಂಕಾ ಕಪ್ತಾನ ಕರುಣರತ್ನೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರು.

ಪದಾರ್ಪಣೆಯಲ್ಲೇ ಶತಕ
ಬ್ಯಾಟಿಂಗ್‌ ಆರಂಭಿಸಿದ ಪಾಕ್‌ ಶಾನ್‌ ಮಸೂದ್‌ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಆದರೆ ಚೊಚ್ಚಲ ಟೆಸ್ಟ್‌ ಆಡುತ್ತಿದ್ದ ಮತ್ತೋರ್ವ ಆರಂಭಕಾರ ಅಬಿದ್‌ ಅಲಿ ಅಜೇಯ 109 ಬಾರಿಸಿ ಮಿಂಚಿದರು (201 ಎಸೆತ, 11 ಬೌಂಡರಿ). ಅಲಿ ಪದಾರ್ಪಣ ಟೆಸ್ಟ್‌ ಹಾಗೂ ಏಕದಿನ ಪಂದ್ಯಗಳೆರಡರಲ್ಲೂ ಶತಕ ಹೊಡೆದ ವಿಶ್ವದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾದರು.

ಆಸ್ಟ್ರೇಲಿಯ ವಿರುದ್ಧ ಇದೇ ವರ್ಷ ದುಬಾೖಯಲ್ಲಿ ಆಡಿದ ತಮ್ಮ ಮೊದಲ ಏಕದಿನ ಪಂದ್ಯದಲ್ಲೂ ಅಬಿದ್‌ ಅಲಿ ಶತಕ ಬಾರಿಸಿದ್ದರು. ಅವರು ಚೊಚ್ಚಲ ಟೆಸ್ಟ್‌ನಲ್ಲೇ ಮೂರಂಕೆಯ ಸ್ಕೋರ್‌ ದಾಖಲಿಸಿದ ಪಾಕಿಸ್ಥಾನದ 11ನೇ ಕ್ರಿಕೆಟಿಗ.
ಬಾಬರ್‌ ಆಜಂ ಗಳಿಕೆ ಅಜೇಯ 102 ರನ್‌ (128 ಎಸೆತ, 14 ಬೌಂಡರಿ). ಅಬಿದ್‌-ಆಜಂ ಮುರಿಯದ 3ನೇ ವಿಕೆಟಿಗೆ 162 ರನ್‌ ಪೇರಿಸಿದರು. ನಾಯಕ ಅಜರ್‌ ಅಲಿ 36 ರನ್‌ ಮಾಡಿ ಔಟಾದರು.

Advertisement

ಅಂತಿಮ ದಿನ ಉಚಿತ ವೀಕ್ಷಣೆಗೆ ಅವಕಾಶ ನೀಡಿದ್ದರಿಂದ 12 ಸಾವಿರ ವೀಕ್ಷಕರು ಸ್ಟೇಡಿಯಂನಲ್ಲಿ ನೆರೆದಿದ್ದರು. 2ನೇ ಹಾಗೂ ಅಂತಿಮ ಟೆಸ್ಟ್‌ ಡಿ. 19ರಿಂದ ಕರಾಚಿಯಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ-6 ವಿಕೆಟಿಗೆ 308 ಡಿಕ್ಲೇರ್‌. ಪಾಕಿಸ್ಥಾನ-2 ವಿಕೆಟಿಗೆ 252.

ಪಂದ್ಯಶ್ರೇಷ್ಠ: ಅಬಿದ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next