ಕಾಪು: ಕಾಪು ಮೆಸ್ಕಾಂ ಸಮೀಪದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಕಳೆದ ಕೆಲವು ಸಮಯಗಳಿಂದ ಮರಣ ಗುಂಡಿಯೊಂದು ಜೀವ ಬಲಿಗಾಗಿ ಬಾಯ್ದೆರೆದು ಕುಳಿತುಕೊಂಡಿದ್ದು, ಹೆದ್ದಾರಿ ಸಂಚಾರಿಗಳಲ್ಲಿ ಭೀತಿ ಮೂಡಿಸಿದೆ.
ಕಾಪು ಪೇಟೆಯ ಡ್ರೈನೇಜ್ ನೀರು ಹರಿಯಲೆಂದು ರಾಷ್ಟ್ರೀಯ ಹೆದ್ದಾರಿ 66ರ ಮೆಸ್ಕಾಂ ಮತ್ತು ಬೀಡುಬದಿ ಬಳಿಯಲ್ಲಿ ಪೊಲೀಸ್ ಸ್ಟೇಷನ್‌ನ ಮುಂಭಾಗದಿಂದ ನೇರವಾಗಿ ಎಡಬದಿಗೆ (ಬೀಡು ಬದಿಗೆ) ಸಂಪರ್ಕಿಸಲು ನಿರ್ಮಿಸಲಾಗಿರುವ ಚರಂಡಿಗೆ ಅಳವಡಿಸಲಾಗಿರುವ ದಂಡೆಗಳು ವಾಹನ ಸವಾರರ ಪ್ರತಾಪಕ್ಕೆ ಸಿಲುಕಿ ಕುಸಿದು ಹೋಗಿದ್ದು, ಇದರಿಂದಾಗಿ ಹೆದ್ದಾರಿ ಪಕ್ಕದಲ್ಲೇ ಮರಣ ಗುಂಡಿ ನಿರ್ಮಾಣವಾಗಿ ಬಿಟ್ಟಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್ಸುಗಳು ಮತ್ತು ಕಾಪು ಪೇಟೆಯಿಂದ ಹೊಸ ಮಾರಿಗುಡಿ ಮುಂಭಾಗದಿಂದ ಹೆದ್ದಾರಿ ಪ್ರವೇಶಿಸುವ ವಾಹನಗಳು ಸಂಚರಿಸುವ ಮುಖ್ಯ ಸರ್ವಿಸ್ ರಸ್ತೆ ಇದಾಗಿದ್ದು, ವಾಹನ ಸವಾರರು ಕೊಂಚ ಯಾಮಾರಿದರೂ ಮರಣ ಗುಂಡಿಗೆ ಬೀಳುವುದು ನಿಶ್ಚಿತ ಎಂಬಂತಿದೆ.
ಈ ಮರಣ ಗುಂಡಿಯ ಪಕ್ಕದಲ್ಲೇ ಕಾಪು ಮೆಸ್ಕಾಂ ಕಚೇರಿಯೂ ಇದ್ದು, ಮೆಸ್ಕಾಂಗೆ ಬರುವವರಿಗೂ ಇಲ್ಲಿನ ಮಾರಣಾಂತಿಕ ಸ್ಪಾಟ್ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿನ ಸಮಸ್ಯೆ ಮತ್ತು ಅಪಾಯದ ಪ್ರದೇಶವನ್ನು ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲರೂ ಪ್ರತಿನಿತ್ಯ ಕಾಣುತ್ತಿದ್ದರೂ ಈ ಬಗ್ಗೆ ಯಾರೂ ಚಕಾರವೆತ್ತದೇ ಇರುವುದು ಹಾಸ್ಯಾಸ್ಪದವಾಗಿದೆ.
ಸರ್ವಿಸ್ ರಸ್ತೆಯ ಮೂಲಕ ಸಂಚರಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಹೆದ್ದಾರಿ ಗುತ್ತಿಗೆದಾರರೂ ಸೇರಿದಂತೆ ಎಲ್ಲರೂ ಕೂಡಾ ಇಲ್ಲಿನ ಮರಣ ಗುಂಡಿಯ ಬಗ್ಗೆ ಕೂಡಾ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಪ್ರಾಣ ಹಿಂಡುವ ಗಂಭೀರ ಅವಘಡವೊಂದು ಸಂಭವಿಸಿ, ಜೀವ ಬಲಿ ನೀಡುವ ಮುನ್ನ ಇಲ್ಲಿನ ಮುರಿದು ಹೋದ ಚರಂಡಿ ಸೇತುವೆಯ ತಡೆಗೋಡೆಯನ್ನು ಪುನರ್ ನಿರ್ಮಿಸಿದಲ್ಲಿ ಒಳಿತು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.