Advertisement

ತಂಪು ವನದ ಠಾಗೋರರು

04:33 PM Jun 03, 2017 | |

ಬೆಂಗಳೂರಿಗೆ ರವೀಂದ್ರನಾಥ ಠಾಗೋರರು ಬಂದಿದ್ದಾರೆ. ಇನ್ನು ಮುಂದೆ ಅವರು ನೆಲೆ ಊರುವುದೂ ಇಲ್ಲಿಯೇ! ಠಾಗೋರರನ್ನು ನೋಡಬೇಕು, ಮಾತನಾಡಿಸಬೇಕು, ಅವರ ಗಡ್ಡವನ್ನು ಹತ್ತಿರದಿಂದ ವೀಕ್ಷಿಸಬೇಕು ಅಂತ ನಿಮಗನ್ನಿಸಿದರೆ, ಸೀದಾ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಬೇಕು!

Advertisement

ಅಲ್ಲಿನ ಶಿಲ್ಪವನದಲ್ಲಿ ಠಾಗೋರರು ನಗುತ್ತಾ, ನಿಮಗೆ ದರುಶನ ಕೊಡುತ್ತಾರೆ. ರವೀಂದ್ರ ಕಲಾಕ್ಷೇತ್ರದ ಸುವರ್ಣ ಸಂಭ್ರಮದ ನೆನಪಿಗಾಗಿ ಶಿಲ್ಪ ಹಾಗೂ ಚಿತ್ರ ಕಲಾವಿದರೆಲ್ಲ ಸೇರಿ, ಠಾಗೋರರ ಬೃಹತ್‌ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಠಾಗೋರರ ಪ್ರತಿಮೆಯ ಸೌಂದರ್ಯದ ಜತೆಗೆ ಪ್ರಕೃತಿಯ ತಂಪಾದ ವಾತಾವರಣದ ಅನುಭವವೂ ನಿಮಗೆ ಇಲ್ಲಿ ಉಚಿತ. ಜುಲೈ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಠಾಗೋರರ ಪ್ರತಿಮೆಯನ್ನು ಅಧಿಕೃತವಾಗಿ ಅನಾವರಣಗೊಳಿಸಲಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡೆಮಿಗೆ 25 ವರ್ಷ ತುಂಬಿದ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಆರ್‌.ಎಂ. ಹಡಪದ್‌ ಅವರು ಶಿಲ್ಪವನ ನಿರ್ಮಾಣಕ್ಕೆ ಚಾಲನೆ ನೀಡಿದರು. ನಂತರ ಶಿಲ್ಪವನದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಸಮೂಹ ಶಿಲ್ಪ ರಚನೆ ಮಾಡಲಾಯಿತು.

ಕಲಾವಿದರ ಪರಿಕಲ್ಪನೆ 

ಹಿರಿಯ ಕಲಾವಿದ ವೆಂಕಟಾಚಲಪತಿಯವರ ಮಾರ್ಗದರ್ಶನದಲ್ಲಿ ರವೀಂದ್ರನಾಥ ಠ್ಯಾಗೋರರ ಬೃಹದಾಕಾರದ ಫೈಬರ್‌ ವಿಗ್ರಹ ನಿರ್ಮಾಣಗೊಂಡಿದೆ. ಶಿಲ್ಪವನದ ಆವರಣದಲ್ಲಿ ಪ್ರತಿ ತಿಂಗಳು  ಸಂಗೀತ, ನಾಟಕ ಇತ್ಯಾದಿ ಕಲಾ ಚಟುವಟಿಕೆಯನ್ನು ಮಾಡಿಕೊಂಡು ಬರುತ್ತಿರುವ ಶಿಲ್ಪ ಮತ್ತು ಚಿತ್ರಕಲಾವಿದರು, ರವೀಂದ್ರನಾಥ ಠಾಗೋರರ ನೆನಪನ್ನು ಶಾಶ್ವತವಾಗಿ ಉಳಿಸಲು ಮತ್ತು ಸಾರ್ವಜನಕರಿಗೆ ಅವರ ಮುಖದರ್ಶನ ಮಾಡಿಸಲು ಪ್ರತಿಮೆಯನ್ನು ನಿರ್ಮಿಸಿದ್ದಾರೆ.

Advertisement

ಆರ್ಟ್‌ ಪಾರ್ಕ್‌
ಶಿಲ್ಪವನದಲ್ಲಿ ಬೇರೆ ಬೇರೆ ಕಲಾಪ್ರಕಾರದ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದೆ. ಪ್ರತಿ ತಿಂಗಳ ಮೊದಲ ಭಾನುವಾರ ಶಿಲ್ಪವನವು ಆರ್ಟ್‌ ಪಾರ್ಕ್‌ನ ರೂಪ ಪಡೆಯಲಿದೆ. ಕಲಾವಿದರ ಮತ್ತು ಸಾರ್ವಜನಿಕರ ಸಮಾಗಮ ಇಲ್ಲಾಗಲಿದೆ. ಅಲ್ಲದೆ, ಇಲ್ಲಿ ಕಲಾಕೃತಿಗಳ ಪ್ರದರ್ಶನ, ಮಾರಾಟ ಮತ್ತು ಸ್ಥಳದಲ್ಲಿಯೇ ಕಲಾಕೃತಿಯ ರಚನೆ ಕೂಡ ನಡೆಯಲಿದೆ.

ಹಸಿರಾದ ನೆಲದಲ್ಲಿ
ಶಿಲ್ಪವನದಲ್ಲಿ ಎರಡು ವರ್ಷದ ಹಿಂದೆ ಹಸಿರೇ ಇರಲಿಲ್ಲ. ಬಿದಿರು ಹಾಗೂ ಬೃಹದಾಕಾರದ ಐದಾರು ಮರಗಳನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ಅಲ್ಲಲ್ಲಿ ಶಿಲ್ಪದ ಕೆತ್ತನೆ ಮಾಡಲಾಗಿತ್ತಾದರೂ, ಹುಲ್ಲಿನ ಹಾಸಿಗೆ ಇರಲಿಲ್ಲ. ಹೊಸದಾಗಿ ಹುಲ್ಲನ್ನು ಬೆಳೆಸಿ, ಸೌಂದರ್ಯಕ್ಕೆ ತಕ್ಕಂತೆ ಅದನ್ನು ಕತ್ತರಿಸಿ, ಶಿಲ್ಪವನಕ್ಕೆ ಹೊಸ ರೂಪ ನೀಡಲಾಗಿದೆ. ಕತ್ತಲಲ್ಲೂ ಶಿಲ್ಪಕಲೆಗಳು ರಾರಾಜಿಸುತ್ತಿರಬೇಕು ಎಂಬ ಉದ್ದೇಶದಿಂದ ಎಲ್ಲಾ ಶಿಲ್ಪಕ್ಕೂ ಗ್ರೀನ್‌, ಬ್ಲೂ, ರೆಡ್‌ ಹೀಗೆ ವರ್ಣಮಯವಾದ ಲೈಟ್‌ ಜೋಡಿಸಲಾಗಿದೆ. 

ಶಿಲ್ಪವನದಲ್ಲಿ ಇನ್ನೂ ಏನೇನಿದೆ?
ಕಿತ್ತೂರು ಚೆನ್ನಮ್ಮನವರ ಆಕರ್ಷಕ ಪ್ರತಿಮೆ ಇದೆ. ಹಸಿರು ಹುಲ್ಲು ಹಾಸಿನಲ್ಲಿ ಹಲವು ಬಗೆಯ ಶಿಲ್ಪಗಳು ಮೂಡಿವೆ. ಹಳ್ಳಿಗಾಡಿನ ಸ್ತ್ರೀ ಬದುಕು, ಭತ್ತ ಕುಟ್ಟುವ ಮಹಿಳೆಯರು, ಮಕ್ಕಳನ್ನು ಪೋಷಿಸುವ ತಾಯಂದಿರ ಶಿಲ್ಪಕಾವ್ಯ ಇಲ್ಲಿದೆ. ಕಾಮ, ಕ್ರೋದ, ಲೋಭ, ಮೋಹ, ಮದ, ಮತ್ಸರ ಭಾವಗಳನ್ನು ಬಿಂಬಿಸುವ ಒಂದೇ ಕಲಾಕೃತಿ, ಅದರ ಕಣ್ಣಿನಲ್ಲಿ ಭಾರತದ ರೂಪಾಯಿ, ಅಮೆರಿಕಾದ ಡಾಲರ್‌ ನೀಡುವ ಸಂದೇಶ, ಮೀನು, ಮಗು, ಶಂಕರಾಚಾರ್ಯರ ಪ್ರತಿಮೆ- ಹೀಗೆ ನಾನಾ ಬಗೆಯ ಶಿಲ್ಪ ಅಲ್ಲಿದೆ.

ಕಲೆಯನ್ನು ಪೋಷಿಸುವುದಕ್ಕಾಗಿ ಇಲ್ಲಿ ರವೀಂದ್ರನಾಥ ಠಾಗೋರರ ಪ್ರತಿಮೆ ನಿರ್ಮಿಸಿದ್ದೇವೆ. ಉಳಿದಂತೆ, ಕನ್ನಡ ಭವನದ ಎದುರು ಸ್ವಾಮಿ ವಿವೇಕಾನಂದ ಪ್ರತಿಮೆ, ವಿಜ್ಞಾನ ಮತ್ತು ತಂತ್ರಜ್ಞಾನದ ಕೆಲವು ಶಿಲ್ಪಕಲಾಕೃತಿ ಒಳಗೊಂಡ ಮಿನಿ ಶಿಲ್ಪವನವನ್ನೂ ನಿರ್ಮಿಸಿದ್ದೇವೆ.
– ಎಂ.ಎಸ್‌. ಅರ್ಚನಾ, ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 

ಯಾವಾಗ ತೆರೆದಿರುತ್ತೆ?
ಶಿಲ್ಪವನವನ್ನು ನಿತ್ಯವೂ ಸಾರ್ವಜನಿಕರು ವೀಕ್ಷಿಸಬಹುದು. ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯ ತನಕ ತೆರೆದಿರುತ್ತದೆ.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next