ಹೊಸದಿಲ್ಲಿ: ಐಸಿಸಿ ಟೆಸ್ಟ್ ರಾಂಕಿಂಗ್ ಪ್ರಕಟಿಸಿದ್ದು ಭಾರತದ ಸ್ಪಿನ್ನರ್‌ಗಳಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ಬೌಲಿಂಗ್‌ನಲ್ಲಿ ಜಂಟಿಯಾಗಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಸರಣಿಯ 2 ನೇ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ 2 ನೇ ಸ್ಥಾನದಲ್ಲಿದ್ದ ಜಡೇಜಾ 1 ಸ್ಥಾನ ಜಿಗಿದರು. ಈ ಮೊದಲು ಅಶ್ವಿನ್ ಮೊದಲ ಸ್ಥಾನದಲ್ಲಿದ್ದರು. ಮುಂದಿನ ಟೆಸ್ಟ್ ಇವರಿಬ್ಬರ ಪಾಲಿಗೆ ನಂಬರ್ 1 ಸ್ಥಾನ ಉಳಿಸಿಕೊಳ್ಳುವಲ್ಲಿ ಪೈಪೋಟಿಯ ಕಣವಾಗಬಹುದು.
ಬ್ಯಾಟಿಂಗ್‌ನಲ್ಲಿ ಆಸೀಸ್ ವಿರುದ್ಧ ಕಳಪೆ ನಿರ್ವಹಣೆ ತೋರಿದ ನಾಯಕ ವಿರಾಟ್ ಕೊಹ್ಲಿ 1 ಸ್ಥಾನ ಕುಸಿದು 3 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್ 2 ನೇ ಸ್ಥಾನದಲ್ಲಿದ್ದರೆ, ಆಸೀಸ್ ಕಪ್ತಾನ ಸ್ಮಿತ್ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಭಾರತದ ಇನ್ನೋರ್ವ ಬ್ಯಾಟ್ಸ್‌ಮನ್ ಚೇತೆಶ್ವರ ಪೂಜಾರ 6 ನೇ ಸ್ಥಾನದಲ್ಲಿದ್ದರೆ, ಆಂಜಿಕ್ಯ ರೆಹಾನೆ 15 ನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದ ಅಶ್ವಿನ್ 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಾಂಗ್ಲಾ ಆಲ್‌ರೌಂಡರ್ ಶಕೀಬ್ ಅಲ್ ಹಸನ್ 1 ನೇ ಸ್ಥಾನ ಪಡೆದಿದ್ದಾರೆ.
ಐಸಿಸಿ ಪ್ರಕಟಿಸಿರುವ ಎಪ್ರಿಲ್ 1 ರ ವರೆಗೆ ಅನ್ವಯವಾಗುವ ರಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ನಿರ್ಣಾಯಕ ಟೆಸ್ಟ್ ಪಂದ್ಯ ಗೆದ್ದ ಭಾರತವೇ ನಂಬರ್ 1 ಸ್ಥಾನದಲ್ಲಿದ್ದು , ಐಸಿಸಿ ಯಿಂದ 10 ಲಕ್ಷ ಡಾಲರ್ ಬಹುಮಾನ ತಂಡಕ್ಕೆ ದೊರೆಯಲಿದೆ.