ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿ ಜಿಲ್ಲಾದ್ಯಂತ ನಗರ ಪ್ರದೇಶದಲ್ಲಿ ಅರಣ್ಯ ಅತಿಕ್ರಮಣದಾರರ 11,202 ಅರ್ಜಿಗಳನ್ನು ಅತಿ ಶೀಘ್ರದಲ್ಲಿ ಮಂಜೂರಿಗೆ ಒಳಪಡಿಸಿ ಹಕ್ಕನ್ನು ಒದಿಗಿಸಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಅವರು ರವಿವಾರ ಸ್ಥಳೀಯ ಸಹ್ಯಾದ್ರಿ ತಗ್ಗು ಪ್ರದೇಶದ ಅತಿಕ್ರಮಣದಾರ ನಿವಾಸಗಳಿಗೆ ಭೇಟಿಕೊಟ್ಟು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಪುನರ್ ಪರಿಶೀಲನೆ ಮಾಡುವಾಗ ಅನುಸರಿಸಬೇಕಾದ ಮಾರ್ಗಸೂಚಿ ಅನ್ವಯ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳನ್ನು ಸಹ ತಕ್ಷಣ ವಿಲೇವಾರಿ ಮಾಡಲು ಸೂಚಿಸಿರುವ ಹಿನ್ನೆಲೆಯಲ್ಲಿ ನಗರ ಪ್ರದೇಶದ ಅತಿಕ್ರಮಣದಾರರ ಅರ್ಜಿಗಳು ಮಂಜೂರಿ ಪ್ರಕ್ರಿಯೆಗೆ ಅಳವಡಿಸಬೇಕಾಗಿದೆ ಎಂದು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ನಿಯಮಾವಳಿಗಳೂ ಜಾರಿಗೆ ಬಂದು 10 ವರ್ಷವಾದರೂ ನಗರ ಪ್ರದೇಶಕ್ಕೆ ಸಂಬಂಧಿಸಿ ಅರಣ್ಯ ಅತಿಕ್ರಮಣದಾರರ ಮಂಜೂರಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು ಪೂರ್ಣ ಪ್ರಮಾಣದ ಕಾನೂನಾತ್ಮಕ ಮಾಹಿತಿಯನ್ನು ವಾರ್ಡ್ ಅರಣ್ಯ ಹಕ್ಕು ಸಮಿತಿಗಳಿಗೆ ನೀಡುವಲ್ಲಿ ವಿಫಲವಾಗಿದ್ದು ನೋಡಲ್ ಏಜೆನ್ಸಿಯಾದ ಸಮಾಜ ಕಲ್ಯಾಣ ಇಲಾಖೆಯಿಂದ ಮೋಜಣಿಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ಹೋಗಿದ್ದಾಗ್ಯೂ ಮೋಜಣಿ ಮಾಡಲು ಅರಣ್ಯಾಧಿಕಾರಿಗಳು ನಿರಾಸಕ್ತಿ ತೋರಿದ್ದು, ದಾಖಲೆಗಳ ಸಂಗ್ರಹದಲ್ಲಿ ಸೂಕ್ತ ಮಾಹಿತಿ ಕೊರತೆ, ನಗರ ಅತಿಕ್ರಮಣದಾರರು ಅರಣ್ಯ ಹಕ್ಕು ಕಾಯಿದೆ ವ್ಯಾಪ್ತಿಯಲ್ಲಿ ಬರಲಾರದೆಂಬ ಕಾನೂನಾತ್ಮಕ ತೊಡಕು ಇನ್ನಿತರ ಸಮಸ್ಯೆಗಳಿಂದ ನಗರ ಅರಣ್ಯ ಅತಿಕ್ರಮಣದಾರರ ಅರ್ಜಿ ವಿಲೆವಾರಿಗೆ ಗ್ರಹಣ ಹಿಡಿದಿದೆ ಎಂದು ಆಪಾದಿಸಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯವು ತಿರಸ್ಕೃತ ಮತ್ತು ವಿಲೇವಾರಿ ಬಾಕಿ ಇರುವ ಅರ್ಜಿಗಳ ಮಂಜೂರಿ ಪಡಿಸಲು ಹಾಗೂ ಪುನರ್ ಪರಿಶೀಲಿಸಲು ಜೂ.30 ಕಾಲಮಾನದಂಡ ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ನಗರ ಅರಣ್ಯಭೂಮಿ ಅತಿಕ್ರಮಣದಾರರು ಮಂಜೂರಿ ಕುರಿತು ಕಾಲ ಮಿತಿಯೊಳಗೆ ಜರುಗಿಸಿ ಮಂಜೂರಿಗೆ ಸಂಬಂಧಿಸಿದ ಪ್ರಗತಿಯ ಪ್ರಮಾಣಪತ್ರ ಜು.24 ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರವು ಸಲ್ಲಿಸಬೇಕಾಗಿದೆ. ಕಾಲಮಿತಿಯಲ್ಲಿ ನಗರ ಅತಿಕ್ರಮಣದಾರರು ಅರ್ಜಿಯ ಪುನರ್ ಪರಿಶೀಲನೆ ಕಾರ್ಯವು ಜರುಗಿಸುವುದು ಅತೀ ಅವಶ್ಯ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.