Advertisement

ಬಿಜೆಪಿಯಿಂದ ಸದಸ್ಯತ್ವ ಅಭಿಯಾನ ರವಿಕುಮಾರ್‌ ರಾಜ್ಯ ಉಸ್ತುವಾರಿ

11:16 PM Jun 16, 2019 | Team Udayavani |

ಬೆಂಗಳೂರು: ಬಿಜೆಪಿ ರಾಷ್ಟ್ರಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸಿದ್ದು, ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನದ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹಾಗೂ ಸಹ ಉಸ್ತುವಾರಿಯಾಗಿ ರಾಜ್ಯ ಕಾರ್ಯದರ್ಶಿ ಜಗದೀಶ್‌ ಹಿರೇಮನಿ ಅವರನ್ನು ನೇಮಕ ಮಾಡಲಾಗಿದೆ.

Advertisement

ಬಿಜೆಪಿ ರಾಷ್ಟ್ರೀಯ ಸದಸ್ಯತ್ವ ಅಭಿಯಾನದ ಉಸ್ತುವಾರಿಯಾದ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರು ಈ ಸಂಬಂಧ ನೇಮಕ ಆದೇಶ ಹೊರಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಂಘಟನಾ ಪರ್ವವನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಅದಕ್ಕೆ ಪೂರಕವಾಗಿ ನೇಮಕ ಪ್ರಕ್ರಿಯೆ ನಡೆದಿದೆ.

ದೆಹಲಿಯಲ್ಲಿ ಸೋಮವಾರ ನಡೆಯಲಿರುವ ಎಲ್ಲ ರಾಜ್ಯಗಳ ಸದಸ್ಯತ್ವ ಉಸ್ತುವಾರಿಗಳು ಹಾಗೂ ಸಹ ಉಸ್ತುವಾರಿಗಳ ಸಭೆಯಲ್ಲಿ ರವಿಕುಮಾರ್‌ ಹಾಗೂ ಜಗದೀಶ್‌ ಹಿರೇಮನಿ ಪಾಲ್ಗೊಳ್ಳಲಿದ್ದಾರೆ. ಸದಸ್ಯತ್ವ ಅಭಿಯಾನದ ರೂಪುರೇಷೆ, ಸಂಘಟನಾ ಶೈಲಿ, ಸದಸ್ಯತ್ವ ವಿಧಾನ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

20 ಲಕ್ಷ ಸದಸ್ಯತ್ವ ಗುರಿ: ದೇಶಾದ್ಯಂತ ಪಕ್ಷದ ಸದಸ್ಯತ್ವ ಅಭಿಯಾನಕ್ಕಾಗಿ ರಾಜ್ಯ ಉಸ್ತುವಾರಿಗಳನ್ನು ನೇಮಿಸಿದ್ದು, ಅದರಂತೆ ಕರ್ನಾಟಕದ ಅಭಿಯಾನದ ಉಸ್ತುವಾರಿಯನ್ನಾಗಿ ನನ್ನನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಸದ್ಯ 80 ಲಕ್ಷ ಸದಸ್ಯರಿದ್ದು, ಈ ಬಾರಿ 20 ಲಕ್ಷ ಸದಸ್ಯತ್ವದ ಮೂಲಕ ಒಂದು ಕೋಟಿ ತಲುಪುವ ಗುರಿ ಹೊಂದಲಾಗಿದೆ.

ಪಕ್ಷದ ವಿಚಾರವನ್ನು ಒಪ್ಪಿ ಬರುವವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು. ಆ ಮೂಲಕ ಬಿಜೆಪಿಯನ್ನು ಸರ್ವವ್ಯಾಪ್ತಿ, ಸರ್ವಸ್ಪರ್ಶಿ ಪಕ್ಷವನ್ನಾಗಿ ಮಾಡುವ ಸಂಕಲ್ಪ ನಮ್ಮದು ಎಂದು ರವಿಕುಮಾರ್‌ “ಉದಯವಾಣಿ’ಗೆ ತಿಳಿಸಿದರು.

Advertisement

ಜುಲೈ 9ರಂದು ಅಭಿಯಾನಕ್ಕೆ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಸೋಮವಾರದ ಸಭೆಯಲ್ಲಿ ಅಂತಿಮವಾಗುವ ನಿರೀಕ್ಷೆ ಇದೆ. ಮುಂದೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಂಚಾಲಕರ ನೇಮಕವಾಗಲಿದೆ.

ರಾಜ್ಯಮಟ್ಟದಲ್ಲಿ ಕಾರ್ಯಾಗಾರ ನಡೆಸುವುದರ ಜತೆಗೆ ಜಿಲ್ಲಾಮಟ್ಟದಲ್ಲೂ ಕಾರ್ಯಾಗಾರ ನಡೆಸಲಾಗುವುದು. ವರಿಷ್ಠರು ಎಲ್ಲೆಡೆ ಶೇ.20ರಷ್ಟು ಸದಸ್ಯತ್ವ ಹೆಚ್ಚಳದ ಗುರಿ ನೀಡಿದ್ದರೂ ರಾಜ್ಯದಲ್ಲಿ ಶೇ.25ರಷ್ಟು ಸದಸ್ಯತ್ವ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next