ವಿಧಾನಪರಿಷತ್ತು: ಮೇಲ್ಮನೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಬಿಜೆಪಿಯ ರವಿಕುಮಾರ್ ಸದನದ ಪ್ರಶಂಸೆಗೆ ಪಾತ್ರರಾದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾಷಣಕ್ಕೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಬಂದಿದ್ದರು.
ಸಭಾಪತಿ ಪೀಠದಲ್ಲಿದ್ದ ಕೆ.ಬಿ. ಶಾಣಪ್ಪ ಇದು ನಿಮ್ಮ ಚೊಚ್ಚಲ ಭಾಷಣ ಮುಕ್ತವಾಗಿ ಮಾತನಾಡಿ, ಆದರೆ ಸಮಯದ ಮಿತಿ ಹಾಕಿಕೊಳ್ಳಿ ಎನ್ನುತ್ತ, ಅವರ ಮಾತಿಗೆ ಯಾರೂ ಅಡ್ಡಿಪಡಿಸಬೇಡಿ ಎಂದು ಉಳಿದ ಸದಸ್ಯರಿಗೆ ಹೇಳಿದರು.
ಮಾತು ಆರಂಭಿಸಿದ ರವಿಕುಮಾರ್, ಹಿಂದಿನ ಸರ್ಕಾರದ ಕೆರೆ ತುಂಬಿಸುವ ಯೋಜನೆ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಸರ್ಕಾರಿ ಹಾಸ್ಟೆಲ್‌ಗಳ ದುಸ್ಥಿತಿ, ಕೃಷಿ ಬಿಕ್ಕಟ್ಟು, ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರದ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹಿಂದಿನ ಸರ್ಕಾರ ರೈತರ ಬದುಕಿನ ಜೊತೆಗೆ ಚೆಲ್ಲಾಟ ಆಡಿದೆ. ಶಿಕ್ಷಣವೇ ಶಕ್ತಿ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ.
ಆದರೆ, ಮಕ್ಕಳಿಗೆ ಬಿಸಿಯೂಟ ಸಿಗುತ್ತಿಲ್ಲ. ಶಿಕ್ಷಕರ ನೇಮಕಾತಿ ಆಗಿಲ್ಲ. 300ಕ್ಕೂ ಹೆಚ್ಚು ಸರ್ಕಾರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಿಲ್ಲ. ಕೃಷಿಯಲ್ಲಿ ಇಸ್ರೆಲ್ ಮಾದರಿ ಅಳವಡಿಸಿಕೊಳ್ಳಲಾಗುವುದು ಎಂದು ಹೇಳುವ ಸರ್ಕಾರ ಕರ್ನಾಟಕದ ಕೃಷಿ ಮಾದರಿ ಏನಾಗಿದೆ ಎಂದು ಹೇಳಬೇಕು. ಸರ್ಕಾರಿ ಹಾಸ್ಟೆಲ್‌ಗಳ ಸ್ಥಿತಿ ನರಕ ಸದೃಶವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್‌ನ ಭೋಜೇಗೌಡ, ಬಿಜೆಪಿಯ ಆಯನೂರು ಮಂಜುನಾಥ, ತೇಜಸ್ವಿನಿಗೌಡ ಸಹ ಸದನದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದರು. ಆದರೆ, ಆಯನೂರು ಮಂಜುನಾಥ, ತೇಜಸ್ವಿನಿಗೌಡ ಈ ಹಿಂದೆ ಲೋಕಸಭೆ ಸದಸ್ಯರಾಗಿದ್ದರಿಂದ ಸದನದಲ್ಲಿ ಅವರಿಗೆ ಭಾಷಣದ ಅನುಭವವಿದೆ.
ಆದರೆ, ವಿಧಾನಪರಿಷತ್ತಿನಲ್ಲಿ ಮೊದಲ ಬಾರಿಗೆ ಮಾತನಾಡಿದರು. ಅದೇ ರೀತಿ ಭೋಜೇಗೌಡ ಅವರು ಇದೇ ಮೊದಲ ಬಾರಿಗೆ ಶಾಸನ ಸಭೆ ಪ್ರವೇಶಿಸಿದ್ದು, ಅವರ ಮೊದಲ ಭಾಷಣ ಇದಾಗಿತ್ತು. ಮೊದಲ ಬಾರಿಗೆ ಮಾತನಾಡಿದ ನಾಲ್ವರೂ ಸಹ ವಿಷಯಕ್ಕೆ ನ್ಯಾಯ ಒದಗಿಸಿದರು.