“ರವಿಕೆ ಪ್ರಸಂಗ’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೊಂದು ಕಂಟೆಂಟ್ ಆಧರಿತ ಸಿನಿಮಾವಾಗಿದ್ದು, ಹೊಸ ವರ್ಷದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಜನವರಿಯಲ್ಲಿ ತೆರೆಕಾಣಬಹುದು. ಮೊದಲ ಹಂತವಾಗಿ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ.
“ಮನಸಲಿ ಜೋರು ಕಲರವ.. ನಡೆ ನುಡಿ ತೀರಾ ಸರಳವ… ‘ ಎಂಬ ಹಾಡು ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಕಿರಣ್ ಕಾವೇರಪ್ಪ ಸಾಹಿತ್ಯ, ವಿನಯ್ ಶರ್ಮಾ ಸಂಗೀತದ ಈ ಹಾಡಿಗೆ ಮಾನಸ ಹೊಳ್ಳ ಧ್ವನಿಯಾಗಿದ್ದಾರೆ.
ಇನ್ನು, “ದೃಷ್ಟಿ ಮೀಡಿಯಾ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರವಿಕೆ ಪ್ರಸಂಗ’ ಸಿನಿಮಾಕ್ಕೆ ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
“ಈಗಾಗಲೇ ಈ ಸಿನಿಮಾದ ಬಹುತೇಕ ಎಲ್ಲ ಕೆಲಸಗಳು ಪೂರ್ಣ ಗೊಂಡಿದ್ದು, ಸಿನಿಮಾ ಬಿಡುಗಡೆಗೆ ರೆಡಿ ಯಾಗಿದೆ’ ಎಂಬುದು ನಿರ್ದೇಶಕ ಸಂತೋಷ್ ಮಾತು.
ಸಾಮಾ ನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರೂ ರೂಪಾಯಿ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆ ಟೇಲರ್ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ “ರವಿಕೆ ಪ್ರಸಂಗ’.
ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು. ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ.
“ರವಿಕೆ ಪ್ರಸಂಗ’ ಸಿನಿಮಾದಲ್ಲಿ ಗೀತಾ ಭಾರತಿ ಭಟ್‌ರೊಂದಿಗೆ ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗ ನಾಥ್, ಪದ್ಮಜಾ ರಾವ್, ರಘು ಪಾಂಡೇಶ್ವರ್, ಕೃಷ್ಣಮೂರ್ತಿ ಕವತ್ತಾರ್, ಮೀನಾ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.