Advertisement

ರವಿಕಾಂತ-ನಡಹಳ್ಳಿ ಪತ್ನಿಗೆ ಒಲಿಯದ ಕಮಲ

04:56 PM Apr 17, 2018 | |

ವಿಜಯಪುರ: ರಾಜ್ಯ ವಿಧಾಸನಸಭೆ ಚುನಾವಣೆಗಾಗಿ ಬಿಜೆಪಿ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲಿ ಮತ್ತೆ ಎರಡು ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದ್ದು, ಮಾಜಿ ಶಾಸಕ ರವಿಕಾಂತ ಪಾಟೀಲ ಹಾಗೂ ಶಾಸಕ ನಡಹಳ್ಳಿ ಪತ್ನಿ ಮಹಾದೇವಿ ಅವರಿಗೆ ಕಮಲದ ಟಿಕೆಟ್‌ ಕೈ ತಪ್ಪಿದೆ.

Advertisement

ಬಿಜೆಪಿ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲಿ ಇಂಡಿ ಕ್ಷೇತ್ರದಿಂದ ಕಿಸಾನ್‌ ಮೋರ್ಚಾ ಜಿಲ್ಲಾಧ್ಯಕ್ಷ ದಯಾಸಾಗರ ಪಾಟೀಲ ಅವರಿಗೆ ಮಣೆ ಹಾಕಿದ್ದು, ದೇವರಹಿಪ್ಪರಗಿ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಅವರ ಹೆಸರುಗಳನ್ನು ಪ್ರಟಿಸಲಾಗಿದೆ. 

ಇದರಿಂದ ಇಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸತತ ಮೂರು ಬಾರಿ ಪಕ್ಷೇತರರಾಗಿ ಗೆದ್ದಿದ್ದ ಮಾಜಿ ಶಾಸಕ ರವಿಕಾಂತ ಪಾಟೀಲ ಟಿಕೆಟ್‌ ಕೈ ತಪ್ಪಿರುವುದು ನಿರಾಸೆಗೆ ದೂಡಿದೆ. ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿದ್ದ ರವಿಕಾಂತ ಪಾಟೀಲ ಈ ಬಾರಿ ಯಡಿಯೂರಪ್ಪ ಅವರು ತಮಗೆ ಟಿಕೆಟ್‌ ಕೊಡಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದರು. ಇಂಡಿ ಪಟ್ಟಣದಲ್ಲಿ ನಡೆದ ಪಕ್ಷದ ಸಮಾರಂಭದಲ್ಲಿ ರವಿಕಾಂತ ಪಾಟೀಲ ಹಾಗೂ ವಿರೋಧಿ ಬಣ ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳುವ ಮೂಲಕ ಪ್ರತಿಷ್ಠೆಗೆ ಬಿದ್ದಿದ್ದವು. ಆದರೆ ಪಕ್ಷ ಕಟ್ಟಿರುವ ಆಕಾಂಕ್ಷಿಗಳಲ್ಲೇ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ಕೊಡಬೇಕು.

ಹೊರಗಿನಿಂದ ಬಂದಿರುವ ರವಿಕಾಂತ ಪಾಟೀಲ ಅವರಿಗೆ ಟಿಕೆಟ್‌ ನೀಡಿದಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿರುವ ಎಲ್ಲರೂ ಸೇರಿ ಒಮ್ಮತದಿಂದ ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಪ್ರಕಟಿಸಿದ್ದರು. ಇದರ ಬೆನ್ನ ಹಿಂದೆಯೇ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಬೆಂಬಲಿಗ ದಯಾಸಾಗರ ಅವರಿಗೆ ಕಮಲ ಒಲಿದಿದೆ. ಹೀಗಾಗಿ ಪ್ರಬಲ ಟಿಕೆಟ್‌ ಆಕಾಂಕ್ಷಿ ಮಾಜಿ ಶಾಸಕ ರವಿಕಾಂತ ಪಾಟೀಲ ನಡೆ ಕುತೂಹಲ ಮೂಡಿಸಿದೆ. 

ರೌಡಿಶೀಟ್‌ ಓಪನ್‌?: ಈ ಮಧ್ಯೆ ಇಂಡಿ ಕ್ಷೇತ್ರದಿಂದ ಕಾಂಗ್ರೆಸ್‌ ಬಂಡಾಯ ಸ್ಪರ್ಧೆ ಘೋಷಿಸಿದ್ದ ಮಹಾದೇವ ಭೈರಗೊಂಡ ವಿರುದ್ಧ ರೌಡಿಶೀಟರ್‌ ಓಪನ್‌ ಮಾಡಿ ಬಂಧಿಸಲಾಗಿದೆ. ಮರಳು ಮಾಫೀಯಾ ಮೂಲಕ ಅಕ್ರಮ ಹಣ ಸಂಪಾದಿಸಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಐಜಿಪಿ ಅಲೋಕಕುಮಾರ ಹೇಳಿದ್ದರು. ಇದರ ಬೆನ್ನ ಹಿಂದೆಯೇ ಮರಳು ಮಾಫಿಯಾ ವಿಷಯವಾಗಿಯೇ ವ್ಯಕ್ತಿಯೊಬ್ಬರ ವಿರುದ್ಧ ಕೊಲೆಯತ್ನದ ಆರೋಪದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರ ಬಂದಿರುವ ರವಿಕಾಂತ ಪಾಟೀಲ ವಿರುದ್ಧವೂ ಪೊಲೀಸರು ರೌಡಿಶೀಟರ್‌ ತೆರೆದಿದ್ದಾರೆ. ಬಿಜೆಪಿ ಟಿಕೆಟ್‌ ವಂಚಿತ ರವಿಕಾಂತ ಪಾಟೀಲ ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾದರೆ ಅವರ ಬಂಧನಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿರುವ ಸುದ್ದಿ ಹರಡಿದೆ. ಇದೇ ಕಾರಣಕ್ಕೆ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದು ಒಂದೊಮ್ಮೆ ಪಕ್ಷೇತರ ಸ್ಪರ್ಧೆಗೆ ಮುಂದಾದಲ್ಲಿ ರವಿಕಾಂತ ಅವರನ್ನು ಪೊಲೀಸರು ಬೆನ್ನು ಬೀಳುವ ಸಾಧ್ಯತೆ ಇಲ್ಲದಿಲ್ಲ. ನಡಹಳ್ಳಿ ಪತ್ನಿಗಿಲ್ಲ ಟಿಕೆಟ್‌: ಇತ್ತ ನಿರೀಕ್ಷೆಯಂತೆ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ಬಿಜೆಪಿ ಮತ್ತೂಂದು ಅವಕಾಶ ಕಲ್ಪಿಸಿದೆ.

Advertisement

ಇದರೊಂದಿಗೆ ತಮ್ಮ ಪತ್ನಿ ಮಹಾದೇವಿ ಅವರಿಗೆ ಟಿಕೆಟ್‌ ಕೊಡದ ಕಾರಣ ಬಿಜೆಪಿ ಸಹ ಶಾಸಕ ನಡಹಳ್ಳಿಗೆ ಅವರಿಗೆ ನಿರಾಶೆ ಮೂಡಿಸಿದೆ. ಕಾಂಗ್ರೆಸ್‌ ಉಚ್ಚಾಟಿತ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮುದ್ದೇಬಿಹಾಳ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಘೋಷಿಸಿದ್ದರೂ ತಮ್ಮ ಪತ್ನಿಗೆ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದರು. ಇದೀಗ ಬಿಜೆಪಿಯಲ್ಲೂ ಅವರ ಪತ್ನಿಗೆ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಟಿಕೆಟ್‌ ಕೈ ತಪ್ಪಿ ಮತ್ತದೇ ಹಿನ್ನಡೆ ಆಗಿದೆ. ಹೀಗಾಗಿ ನಡಹಳ್ಳಿ ನಡೆ ಈಗ ಹೇಗಿರುತ್ತದೆ ಎಂದು ಕುತೂಹಲ ಮೂಡಿಸಿದೆ.

ಇತ್ತ ವಿಜಯಪುರ ನಗರ ಕ್ಷೇತ್ರದಿಂದ ಮೊದಲ ಪಟ್ಟಿಯಲ್ಲಿ ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಟಿಕೆಟ್‌ ನೀಡಿದ್ದು, ಬಿಜೆಪಿ ಟಿಕೆಟ್‌ ವಂಚಿತರಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅತೃಪ್ತಿ ಹೊರ ಹಾಕಿದ್ದಾರೆ. ಈಗಾಗಲೇ
ಬೆಂಬಲಿಗರ ಸಭೆ ನಡೆಸಿರುವ ಅವರು, ಎರಡನೇ ಪಟ್ಟಿ ಬಿಡುಗಡೆ ಬಳಿಕ ನಿರ್ಧಾರ ಪ್ರಕಟಿಸುವ ಹೇಳಿಕೆ ನೀಡಿದ್ದರು. ಇದೀಗ ಅವರ ನಿರೀಕ್ಷೆ ಹುಸಿಯಾಗಿದ್ದು ಪಟ್ಟಣಶೆಟ್ಟಿ ಬಂಡಾಯದ ಬಾವುಟ ಹಾರಿಸುವುದು ಖಚಿತವಾಗಿದೆ.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next