ಮೊದಲ ಚಿತ್ರದ ಮೂಲಕ ಹೀರೋ ಆಗುತ್ತಿದ್ದೇನೆ ಅಂದಮೇಲೆ ಸಹಜವಾಗಿಯೇ ಆ ಖುಷಿ ಹೆಚ್ಚು. ವಿಕ್ರಮ್ ರವಿಚಂದ್ರನ್ ಅವರಿಗೂ ಆ ಸಂಭ್ರಮ ದುಪ್ಪಟ್ಟಾಗಿದೆ. ‘ತ್ರಿವಿಕ್ರಮ’ ಚಿತ್ರದ ಮೂಲಕ ವಿಕ್ರಮ್ ಹೀರೋ ಆಗಿದ್ದಾರೆ. ಇತ್ತೀಚೆಗೆ ನಡೆದ ಚಿತ್ರದ ಫಸ್ಟ್‌ಲುಕ್ ಮತ್ತು ಟೀಸರ್ ಬಿಡುಗಡೆ ವೇಳೆ ವಿಕ್ರಮ್ ಸಂತಸಕ್ಕೆ ಪಾರವೇ ಇರಲಿಲ್ಲ. ಅಂದು ವೇದಿಕೆ ಏರಿದ ವಿಕ್ರಮ್, ತಮ್ಮ ಮೊದಲ ಚಿತ್ರದ ಬಗ್ಗೆ, ತಯಾರಿ ಮಾಡಿಕೊಂಡ ಪರಿ, ಅಪ್ಪನ ಸಲಹೆ, ಸೂಚನೆ ಇತ್ಯಾದಿ ಕುರಿತು ಹೇಳಿದ್ದಿಷ್ಟು.
‘ನನ್ನ ಅಪ್ಪನಿಗೆ ಗೊತ್ತಿತ್ತು. ನಾನು ಹೀರೋನೇ ಆಗ್ತೀನಿ ಅಂತ. ಸೋ, ಈಗ ಹೀರೋ ಆಗಿದ್ದೇನೆ. ನಿಜಕ್ಕೂ ನಾನೀಗ ಏನನ್ನೂ ಮಾತಾಡೋಕೆ ಆಗುತ್ತಿಲ್ಲ. ಇಂಥದ್ದೊಂದು ಅದ್ಭುತ ಅವಕಾಶ ಕಲ್ಪಿಸಿಕೊಟ್ಟ ಎಲ್ಲರಿಗೂ ಥ್ಯಾಂಕ್ಸ್ ಹೇಳ್ತೀನಿ. ಫಸ್ಟ್‌ಲುಕ್ ನೋಡಿದ ಎಲ್ಲರೂ, ‘ಪ್ರೇಮಲೋಕ’ ‘ರಣಧೀರ’ ಚಿತ್ರಗಳು ನೆನಪಾಗುತ್ತವೆ. ಆ ಬೈಕು, ಅದರ ಮೇಲೆ ಸ್ಟೈಲ್ ಆಗಿ ಕುಳಿತು, ಕೈಯೊಂದನ್ನು ಮೇಲೆತ್ತಿ ಒಂದೇ ಬೆರಳು ತೋರಿಸುವ ರೀತಿ ನೋಡಿದರೆ, ನಂಬರ್ ಒನ್ ಎಂಬುದನ್ನು ಸೂಚಿಸುತ್ತದೆಯಲ್ಲಾ ಎಂಬ ಪ್ರಶ್ನೆಗಳನ್ನು ಮುಂದಿಡುತ್ತಾರೆ. ರವಿಚಂದ್ರನ್ ಮಗ ಅಂದಾಕ್ಷಣ, ನಂಬರ್ ಒನ್ ಆಲ್ವಾ?’ ಎನ್ನುವ ವಿಕ್ರಮ್, ‘ಡ್ಯಾಡಿ ಅವರ ಸಿಗ್ನೇಚರ್ ಬಳಸಬೇಕಿತ್ತು. ಅದು ಬ್ಲಿಡ್‌ನಲ್ಲೇ ಇದೆ. ಅದೊಂದು ಪ್ರಯತ್ನವಾಗಿದೆಯಷ್ಟೇ. ಡ್ಯಾಡಿ ಯಾವತ್ತೂ ಒಂದು ಮಾತು ಹೇಳ್ಳೋರು. ‘ನಿನಗೆ ಅಂತ ಒಂದು ಸ್ಟೈಲ್ ಇರಬೇಕು’ ಅಂತ. ಅದಿಲ್ಲಿ ಸಿಂಕ್ ಆಗಿದೆ. ಪ್ರಯತ್ನ ಮಾಡಿದ್ದು ವರ್ಕೌಟ್ ಆಗಿದೆಯಷ್ಟೆ. ಇನ್ನು, ನನ್ನ ಸಹೋದರ ಮನೋರಂಜನ್ ನನಗೆ ಬೆನ್ನೆಲುಬು ಇದ್ದಂತೆ. ನನ್ನ ಶಕ್ತಿ ಕೂಡ ಅವರೇ. ಪ್ರತಿ ಹೆಜ್ಜೆಯಲ್ಲಿ ಅಣ್ಣನ ಸಹಕಾರ, ಪ್ರೋತ್ಸಾಹವಿದೆ’ ಎಂದರು ವಿಕ್ರಮ್.
ಇನ್ನು, ‘ತ್ರಿವಿಕ್ರಮ’ ಚಿತ್ರದ ಮೂಲಕ ವಿಕ್ರಮ್ ರವಿಚಂದ್ರನ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ನಿರ್ದೇಶಕ ಸಹನಾಮೂರ್ತಿ ಅವರಿಗೂ ಅಂದು ಖುಷಿಗೆ ಪಾರವಿರಲಿಲ್ಲ. ಚಿತ್ರದ ಬಗ್ಗೆ ಹೇಳಿಕೊಂಡ ಸಹನಾಮೂರ್ತಿ, ‘ನಾನು ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ. ಕನಸುಗಾರನ ಜೊತೆ ಸಿನಿಮಾ ಮಾಡಲು ಆಗಿಲ್ಲ. ಆದರೆ, ಕನಸುಗಾರನ ಕನಸು ಮಗನ ಜೊತೆ ಮಾಡುತ್ತಿದ್ದೇನೆ ಎಂಬ ಖುಷಿ ಇದೆ. ಈಗಾಗಲೇ ಟೀಸರ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇವತ್ತು ಕನ್ನಡದಲ್ಲಿ ಯಾವುದೇ ಲವ್‌ಸ್ಟೋರಿ ಚಿತ್ರವಾದರೂ ರವಿಚಂದ್ರನ್ ಸ್ಫೂರ್ತಿಯಾಗುತ್ತಾರೆ. ನಾನು ಮೊದಲು ಕಥೆ ಮಾಡಬೇಕಾದರೆ, ಇವರೇ ಹೀರೋ ಅಂತ ಪ್ಲಾನ್ ಮಾಡಿರಲಿಲ್ಲ. ಕಥೆ ಆದ ಮೇಲೆ ಒಂದು ಫೀಲ್ ಇತ್ತು. ಹೊಸಬರನ್ನು ಹುಡುಕುತ್ತಲೇ, ವಿಕ್ರಮ್ ಅವರನ್ನು ಗಮನಿಸುತ್ತಿದ್ದೆ. ಅವರ ಕೆಲ ವಿಡಿಯೋ ತುಣುಕು ನೋಡಿದ್ದೆ. ನಮ್ಮ ಕಥೆ, ಪಾತ್ರಕ್ಕೆ ಸರಿಹೊಂದುತ್ತಾರೆ ಎಂಬ ನಂಬಿಕೆ ಇತ್ತು. ಭೇಟಿ ಮಾಡಿ, ಕಥೆ ಹೇಳಿದೆ. ಎಲ್ಲವೂ ಓಕೆ ಆಯ್ತು. ಇನ್ನು, ‘ತ್ರಿವಿಕ್ರಮ’ ಶೀರ್ಷಿಕೆಯೇ ಯಾಕೆ ಅಂದರೆ, ಸೋಲು ಇಲ್ಲದವನು ತ್ರಿವಿಕ್ರಮ ಎಂದರ್ಥ. ನಮ್ಮ ಚಿತ್ರದ ಹೀರೋ ಕೂಡ ಇಲ್ಲಿ ಸೋಲಿಲ್ಲದವನು. ಹಾಗಾಗಿ ಆ ಶೀರ್ಷಿಕೆ ಇಡಲಾಗಿದೆ. ಇದೊಂದು ಹೈ ವೋಲೆrೕಜ್ ಲವ್‌ಸ್ಟೋರಿ. ಎಲ್ಲೋ ಒಂದು ಕಡೆ ರವಿಸರ್‌ಗೆ ಭಯ ಇರಬಹುದು. ಹೇಗೆ ಮಗನನ್ನು ತೋರಿಸುತ್ತಾರೋ ಎಂಬ ಕುತೂಹಲವಿರಬಹುದು. ನಾನು ಒಳ್ಳೆಯ ಚಿತ್ರ ಮಾಡಿ ರವಿಸರ್ ಕಡೆಯಿಂದ ನಾನು ಫಸ್ಟ್‌ರ್‍ಯಾಂಕ್ ತಗೋತ್ತೀನಿ’ ಎಂದರು ಸಹನಾಮೂರ್ತಿ.
ಅಂದು ನಿರ್ಮಾಪಕದ್ವಯರಾದ ಸೋಮಣ್ಣ, ಸುರೇಶ್, ಮನೋರಂಜನ್, ರವಿಚಂದ್ರನ್ ಪತ್ನಿ ಸುಮತಿ, ಪುತ್ರಿ ಅಂಜು ಮತ್ತು ಅಳಿಯ ಸೇರಿದಂತೆ ಅನೇಕರಿದ್ದರು. ನಾಯಕಿ ಆಕಾಂಕ್ಷಾ , ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಇತರರು ಇದ್ದರು.