ಚೆನ್ನೈ: ಮಂಗಳವಾರ ರಾತ್ರಿ ರವಿ ಶಾಸ್ತ್ರಿ ಅವರನ್ನು ಟೀಮ್ ಇಂಡಿಯಾದ ನೂತನ ಕೋಚ್ ಆಗಿ ನೇಮಿಸಿದ ಜತೆಯಲ್ಲೇ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿಯೂ, ರಾಹುಲ್ ದ್ರಾವಿಡ್ ಅವರನ್ನು ಆಯ್ದ ವಿದೇಶಿ ಸರಣಿಗಳಿಗೆ ಬ್ಯಾಟಿಂಗ್ ಸಲಹೆಗಾರನನ್ನಾಗಿಯೂ ನೇಮಿಸಲಾಗಿತ್ತು. ಆದರೆ ಇವರಿಬ್ಬರ ನೇಮಕಾತಿ ಸದ್ಯ ತಡೆಹಿಡಿಯಲ್ಪಟ್ಟಿದೆ. ಕಾರಣ, ಭರತ್ ಅರುಣ್ ಅವರೇ ಬೌಲಿಂಗ್ ಕೋಚ್ ಆಗಬೇಕೆಂದು ಶಾಸ್ತ್ರಿ ಅಪೇಕ್ಷಿಸಿದ್ದು.
ರವಿ ಶಾಸ್ತ್ರಿ ಬಯಕೆಗೆ ಸೊಪ್ಪು ಹಾಕಿದ ಬಿಸಿಸಿಐ, ಕೂಡಲೇ ಹೇಳಿಕೆಯೊಂದನ್ನು ನೀಡಿ, ಜಹೀರ್ ಖಾನ್ ಪೂರ್ಣ ಪ್ರಮಾಣದ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿಭಾಯಿಸುವುದಿಲ್ಲವೆಂದೂ, ಮಂಡಳಿ ಬಯಸಿದಾಗಲಷ್ಟೇ ಈ ಜವಾಬ್ದಾರಿ ನೋಡಿಕೊಳ್ಳುತ್ತಾರೆಂದೂ ತಿಳಿಸಿತು. ಇದರ ಬೆನ್ನಲ್ಲೇ, ಬಿ. ಆರುಣ್ ಭಾರತ ತಂಡದ ನೂತನ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆಂಬ ವರದಿಗಳೂ ಹರಿದಾಡತೊಡಗಿದವು.
ಆದರೆ ಸೋಮವಾರದ ಬೆಳವಣಿಗೆ ಇನ್ನೊಂದು ತಿರುವು ಪಡೆದುಕೊಂಡಿದೆ. ಬಿ. ಅರುಣ್ “ತಮಿಳುನಾಡು ಪ್ರೀಮಿಯರ್ ಲೀಗ್’ ನಲ್ಲಿ (ಟಿಎನ್‌ಪಿಎಲ್) ವಿಬಿ ತಿರುವಳ್ಳೂರ್ ವೀರನ್ಸ್ ತಂಡದ ಪ್ರಧಾನ ಕೋಚ್ ಆಗಿ ನೇಮಿಸಲ್ಪಟ್ಟಿದ್ದಾರೆ. ಹಾಗಾದರೆ ಆವರು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ನೇಮಕ ವಾಗಿಲ್ಲವೇ? ಇದು ಎಲ್ಲರನ್ನೂ ಕಾಡುವ ಪ್ರಶ್ನೆ.
ಬಿಸಿಸಿಐನಿಂದ ಆಹ್ವಾನ ಬಂದಿಲ್ಲ
ನಿಯಮ ಪ್ರಕಾರ, ಭಾರತ ತಂಡದ ಕೋಚ್ ಅಥವಾ ಇನ್ನಿತರ ಹುದ್ದೆಗೆ ಆಯ್ಕೆಯಾದವರು ಐಪಿಎಲ್, ಸ್ಥಳೀಯ ರಾಜ್ಯ ಕ್ರಿಕೆಟ್ ಲೀಗ್ ಜತೆಗಿನ ಎಲ್ಲ ನಂಟನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದು ಬಿ. ಅರುಣ್‌ಗೂ ಅನ್ವಯಿಸುತ್ತದೆ. ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರುಣ್, “ನನಗೆ ಬಿಸಿಸಿಐನಿಂದ ಈವರೆಗೆ ಯಾವುದೇ ಹುದ್ದೆಯ ಆಹ್ವಾನ ಬಂದಿಲ್ಲ. ಅಕಸ್ಮಾತ್ ಬಂದರೆ ನಾನು ಟಿಎನ್‌ಪಿಎಲ್ ಹಾಗೂ ಐಪಿಎಲ್ ಜವಾಬ್ದಾರಿಗಳೆರಡನ್ನೂ ತೊರೆಯುತ್ತೇನೆ’ ಎಂಬುದಾಗಿ ಹೇಳಿದ್ದಾರೆ.
ಈ ಎಲ್ಲ ಗೊಂದಲಗಳಿಗೆ ಮಂಗಳವಾರ ಸಂಜೆ ವೇಳೆ ತೆರೆ ಬೀಳುವ ಸಾಧ್ಯತೆ ಇದೆ. ಮಧ್ಯಾಹ್ನ 2 ಗಂಟೆಗೆ ಕೋಚ್ ರವಿ ಶಾಸ್ತ್ರಿ ಅವರು ಆಡಳಿತಾಧಿಕಾರಿಗಳ ಸಮಿತಿಯನ್ನು (ಸಿಒಎ) ಭೇಟಿಯಾಗಲಿದ್ದು, ಅಲ್ಲಿ ತಮ್ಮ ಅಪೇಕ್ಷೆಯನ್ನು ಮಂಡಿಸಲಿದ್ದಾರೆ. ಬಳಿಕ ಜಹೀರ್ ಖಾನ್, ಬಿ. ಅರುಣ್, ರಾಹುಲ್ ದ್ರಾವಿಡ್ ಅವರ “ಕೋಚಿಂಗ್ ಭವಿಷ್ಯ’ ನಿರ್ಧಾರವಾಗಲಿದೆ.