Advertisement

ರಾಜ್ಯಕ್ಕೆ ಕರೆತಂದ ಕೂಡಲೇ ರವಿ ಪೂಜಾರಿ ಸಿಸಿಬಿ ವಶಕ್ಕೆ

06:35 AM Feb 04, 2019 | Team Udayavani |

ಬೆಂಗಳೂರು: ಪಶ್ಚಿಮ ಆಫ್ರಿಕಾದ ಸೆನೆಗಲ್‌ ರಾಷ್ಟ್ರದ ಪೊಲೀಸರ ಬಲೆಗೆ ಬಿದ್ದಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆತಂದ ಕೂಡಲೇ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

Advertisement

ಈಗಾಗಲೇ ಬೆಂಗಳೂರು ನಗರಾದ್ಯಂತ ರವಿ ಪೂಜಾರಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಮಾಹಿತಿ ಕಲೆ ಹಾಕುವಂತೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸಿಸಿಬಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಸಿಸಿಬಿಯಲ್ಲೇ ರವಿ ವಿರುದ್ಧ ಸುಮಾರು 46 ಪ್ರಕರಣಗಳಿದ್ದು, ಈ ಕುರಿತು ದಾಖಲೆಗಳನ್ನು ಸಂಗ್ರಹಿಸುವಂತೆ ಆದೇಶಿಸಿದ್ದಾರೆ.

ಬೆಂಗಳೂರಿನಲ್ಲಿ ರವಿ ವಿರುದ್ಧ ಹಫ್ತಾ ವಸೂಲಿ, ಕೊಲೆ, ಕೊಲೆ ಯತ್ನ, ಪ್ರಾಣ ಬೆದರಿಕೆ ಸೇರಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ರವಿ ಪೂಜಾರಿಯನ್ನು ಭಾರತಕ್ಕೆ ಕರೆತಂದ ಕೂಡಲೇ ಮೊದಲು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ನಂತರವಷ್ಟೇ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಗೆ ಬಹಳಷ್ಟು ದಿನಗಳು ಬೇಕಾಗುತ್ತದೆ ಎಂದು ಪೊಲೀಸರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌, ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಸಿಸಿಬಿಯಲ್ಲಿ 46 ಪ್ರಕರಣಗಳು ದಾಖಲಾಗಿವೆ. ಆ ಹಿನ್ನೆಲೆಯಲ್ಲಿ ಆತನನ್ನು ಕರ್ನಾಟಕ್ಕೆ ಕರೆತಂದ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಆದರೆ, ಆತನ ಹಸ್ತಾಂತರ ಯಾವಾಗ ಆಗಲಿದೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next