Advertisement

ಪಾತಕಿ ರವಿ ಪೂಜಾರಿ ಸೆನೆಗಲ್‌ ಜೈಲಿನಿಂದ ಪರಾರಿ?

09:39 AM Jun 09, 2019 | keerthan |

ಮಂಗಳೂರು: ನಕಲಿ ಪಾಸ್‌ಪೋರ್ಟ್‌ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನಗಲ್‌ನಲ್ಲಿ ನಾಲ್ಕು ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ಪಾತಕಿ ರವಿ ಪೂಜಾರಿ ಅಲ್ಲಿನ ಜೈಲಿನಿಂದ ಬಿಡುಗಡೆಗೊಂಡು ಮತ್ತೆ ಭೂಗತ ನಾಗಿದ್ದಾನೆಂಬ ಮಾಹಿತಿ ಲಭಿಸಿದೆ.

Advertisement

ಇದರಿಂದ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಪಾತಕಿಯನ್ನು ಗಡೀಪಾರು ಮಾಡಿಸಿಕೊಳ್ಳುವ ಭಾರತೀಯ ಪೊಲೀಸರ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.

ರವಿ ಪೂಜಾರಿಯನ್ನು ಭಾರತಕ್ಕೆ ಕರೆ ತರಲು ಕಾನೂನಾತ್ಮಕ ಹೋರಾಟ ನಡೆಸುವಲ್ಲಿ ಮುಂಬಯಿ ಹಾಗೂ ಬೆಂಗಳೂರು ಪೊಲೀಸರು ಮೂರು ತಿಂಗಳಿಂದ ಸೆನೆಗಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಸತತ ಪ್ರಯತ್ನ ನಡೆಸಿದ್ದರು. ಆತನ ವಿರುದ್ಧ ದಾಖಲಾದ 25ಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಫ್ರೆಂಚ್‌ ಭಾಷೆಗೆ ತರ್ಜುಮೆಗೊಳಿಸಿ ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಗಡೀಪಾರು ಸಾಧ್ಯತೆ ಇದ್ದಾಗಲೇ ಸ್ಥಳೀಯ ಪೊಲೀಸರ ನೆರವಿನಿಂದ ಬಿಡುಗಡೆಗೊಂಡು ಭೂಗತ ನಾಗಿದ್ದಾನೆ ಎನ್ನಲಾಗುತ್ತಿದೆ.

“ಉದಯವಾಣಿ’ಗೆ ಉನ್ನತ ಮೂಲಗಳು ನೀಡಿದ ಮಾಹಿತಿಯಂತೆ, ರವಿ ಪೂಜಾರಿ ಜಾಮೀನು ಪಡೆದು ಶುಕ್ರವಾರ ಬಿಡುಗಡೆಗೊಂಡಿದ್ದಾನೆ. ಅಲ್ಲಿನ ಸ್ಥಳೀಯ ಪತ್ರಿಕೆಗಳೂ ಈ ಕುರಿತು ವರದಿ ಪ್ರಕಟಿಸಿದ್ದವು ಎನ್ನಲಾಗುತ್ತಿದೆ. ಮುಂಬಯಿ, ಬೆಂಗಳೂರು ಪೊಲೀಸರು ಇದನ್ನು ನಿರಾಕರಿಸಿದ್ದರು. ಈ ಮಧ್ಯೆ ರವಿ ಪೂಜಾರಿ ನ್ಯಾಯಾಲಯದಿಂದ ಜಾಮೀನು ಪಡೆದು ತಲೆ ಮರೆಸಿಕೊಂಡಿದ್ದಾನೆಯೇ ಅಥವಾ ಜೈಲಿನಿಂದಲೇ ಪೊಲೀಸರ ನೆರವು ಪಡೆದು ಪರಾರಿಯಾಗಿದ್ದಾನೆಯೇ ಎಂಬ ಗೊಂದಲ ಮುಂದುವರಿದಿದೆ. ಪೊಲೀಸರಷ್ಟೇ ಇದನ್ನು ಖಚಿತಪಡಿ ಸಬೇಕಿದೆ. ಈ ಬಗ್ಗೆ ಗೃಹ ಸಚಿವ ಎಂ.ಬಿ. ಪಾಟೀಲ್‌ ಅವರನ್ನು ಸಂಪರ್ಕಿಸಲಾಯಿತಾದರೂ ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಪೊಲೀಸರಿಗೆ ಭಾರೀ ಹಿನ್ನಡೆ
ಎರಡೂವರೆ ದಶಕದಿಂದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಹಲವೆಡೆ ಉದ್ಯಮಿಗಳು-ಶ್ರೀಮಂತರಿಗೆೆ ದುಃಸ್ವಪ್ನವಾಗಿದ್ದ ರವಿ ಪೂಜಾರಿಯ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿನ ಪೊಲೀಸರ ಪ್ರಯತ್ನ ಕೊನೆ ಕ್ಷಣದಲ್ಲಿ ವಿಫ‌ಲವಾಗಿದೆ. ಹೀಗಾಗಿ ಈ ಹಿಂದೆ ಭೂಗತ ಪಾತಕಿಗಳಾದ ಛೋಟಾ ರಾಜನ್‌, ಬನ್ನಂಜೆ ರಾಜಾ ಸೇರಿದಂತೆ ಹಲವರನ್ನು ವಿದೇಶಗಳಿಂದ ಭಾರತಕ್ಕೆ ಗಡೀಪಾರು ಮಾಡಿಸಿಕೊಂಡಂತೆಯೇ ಈತನನ್ನೂ ಕರೆತರುವ ಲೆಕ್ಕಾಚಾರ ಬುಡಮೇಲಾಗಿದೆ.

Advertisement

ರವಿ ಪೂಜಾರಿ ವಿರುದ್ಧದ ಪ್ರಕರಣದ ವಿಚಾರಣೆ ಸೆನಗಲ್‌ ನ್ಯಾಯಾಲಯದಲ್ಲಿ ಮೇ 15ಕ್ಕೆ ನಡೆದಿತ್ತು. ಆ ವೇಳೆ ಮುಂಬಯಿನಿಂದ ಉನ್ನತ ಪೊಲೀಸ್‌ ಅಧಿಕಾರಿಗಳ ತಂಡ ಸೆನೆಗಲ್‌ಗೆ ತೆರಳಿ ಭಾರತಕ್ಕೆ ಕರೆತರಲು ತಯಾರಿ ನಡೆಸಿತ್ತು.

ಮುಂಬಯಿ ಭೂಗತ ಲೋಕಕ್ಕೆ ಮೊದಲು ಪ್ರವೇಶ ಪಡೆದಿದ್ದ ರವಿ ಪೂಜಾರಿ ಅಲ್ಲಿಂದ ತಂಡ ಕಟ್ಟಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಮುಂಬಯಿ, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಆತನ ಮೇಲೆ ಕೊಲೆ ಸುಪಾರಿ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳಿವೆ. ಪಶ್ಚಿಮ ಆಫ್ರಿಕಾದ ಕೆಲವು ದೇಶಗಳಲ್ಲಿ ನೆಲೆ ನಿಂತಿದ್ದ ಆತನನ್ನು ನಕಲಿ ಪಾಸ್‌ಪೋರ್ಟ್‌ ಆರೋಪದ ಮೇಲೆ ಜನವರಿ 21ರಂದು ಸೆನೆಗಲ್‌ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next