ಬೆಂಗಳೂರು: ಕಳೆದ 15 ವರ್ಷಗಳಿಂದಲೂ ಆಸ್ಟ್ರೇಲಿಯಾ, ಮಲೇಷ್ಯಾ, ದುಬೈ, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಭೂಗತಪಾತಕಿ ರವಿಪೂಜಾರಿ ವಿರುದ್ಧ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಕಡೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ಮೂಲದ ರವಿ ಪೂಜಾರಿ ಆರಂಭದಲ್ಲಿ ಮುಂಬೈನಲ್ಲಿ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಿ ಗ್ಯಾಂಗ್‌ಸ್ಟರ್‌ಗಳ ಪಡೆ ಸೇರಿಕೊಂಡಿದ್ದ. 2005ರಲ್ಲಿ ಬೆಂಗಳೂರಿನಲ್ಲಿ ನಡೆದ ಶೂಟೌಟ್ ಕೇಸ್‌ನಲ್ಲಿ ಮೊದಲ ಬಾರಿಗೆ ಪೂಜಾರಿ ಹೆಸರು ಕೇಳಿಬಂದಿತ್ತು.
2009ರಲ್ಲಿ ಮಂಗಳೂರಿನಲ್ಲಿ ನಡೆದ ವಕೀಲ ನೌಶಾದ್ ಕೊಲೆ ಕೇಸ್‌ನಲ್ಲಿಯೂ ಪೂಜಾರಿ ಆರೋಪಿಯಾಗಿದ್ದಾನೆ. ಈ ಕೇಸ್‌ನಲ್ಲಿ ಪೂಜಾರಿಯನ್ನು ಆರೋಪಿಯನ್ನಾಗಿ ಪರಿಗಣಿಸಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ನೌಶಾದ್‌ನನ್ನು ಶೂಟ್ ಮಾಡಿದ ಆರೋಪಿಗಳು ರವಿ ಪೂಜಾರಿ ಸೂಚನೆ ಮೇರೆಗೆ ಹತ್ಯೆಗೈದಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದರು.
ರಾಜ್ಯದ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳು ವಿದೇಶಗಳಿಂದ ಕರೆ ಮಾಡಿ ಜೀವ ಬೆದರಿಕೆ ಹಾಗೂ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಸ್‌ಗಳು ಕೂಡ ಪೂಜಾರಿ ವಿರುದ್ಧ ದಾಖಲಾಗಿವೆ. ರಾಜ್ಯದಲ್ಲಿ ರವಿಪೂಜಾರಿ ಹೆಸರು ಹೇಳಿಕೊಂಡು ಜೀವಬೆದರಿಕೆ ಹಾಕಿದ ಕೇಸ್‌ಗಳೂ ತನಿಖೆಯಲ್ಲಿವೆ. ಈ ಎಲ್ಲ ಕೇಸ್‌ಗಳ ಸಂಬಂಧ ಬಾಡಿವಾರೆಂಟ್ ಮೂಲಕ ರಾಜ್ಯ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ಆರು ತಿಂಗಳಿನಿಂದ ರವಿಪೂಜಾರಿ ತಂಗಿರುವ ದೇಶದ ಬಗ್ಗೆ ಇಂಟರ್‌ಪೋಲ್ ಹಾಗೂ ಕೇಂದ್ರ ತನಿಖಾ ತಂಡಗಳ ರಾಜ್ಯ ಪೊಲೀಸರ ಕೆಲವು ಅಧಿಕಾರಿಗಳು ಕೂಡ ಸಂಪರ್ಕದಲ್ಲಿದ್ದು, ಆತ ದಕ್ಷಿಣ ಆಫ್ರಿಕಾದ ಸೆನೆಗಲ್‌ನಲ್ಲಿರುವುದನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದರು.