Advertisement

ರವಿ ಪೂಜಾರಿ ಬಂಧನ: ಕರಾವಳಿಯಲ್ಲಿ ಮಸುಕಾದ ಭೂಗತ ಚಟುವಟಿಕೆ

01:37 AM Mar 05, 2020 | mahesh |

ಮಂಗಳೂರು: ಸುಮಾರು ಎರಡು ದಶಕದಿಂದ ಭೂಗತ ಲೋಕದಲ್ಲಿ ಮೆರೆದಾಡಿದ್ದ ರವಿ ಪೂಜಾರಿಯ ಬಂಧನದ ಬಳಿಕ ಕರಾವಳಿಯ ಡಾನ್‌ಗಳ ಜಾಲ ಕ್ಷೀಣಿಸಲಾರಂಭಿಸಿದೆ. ಈ ಹಿಂದೆ ಪಾತಕಿಗಳು ಉದ್ಯಮಿಗಳ ಸಹಿತ ಶ್ರೀಮಂತರನ್ನು ಟಾರ್ಗೆಟ್‌ ಮಾಡಿಕೊಂಡು ಕೊಲೆ ಬೆದರಿಕೆ ಮೂಲಕ ಹಫ್ತಾ ವಸೂಲಿ ಮಾಡುತ್ತಿದ್ದರು. ಅಲ್ಲದೆ ಮುಂಬಯಿ ಡಾನ್‌ಗಳಿಗೆ ಸಾಥ್‌ ಕೊಡುತ್ತಿದ್ದರು. ಕ್ರಮೇಣ ಪಾತಕಿಗಳು ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದರೆ ಮತ್ತೆ ಕೆಲವರು ವಿರೋಧಿ ಬಣಗಳಿಂದಲೇ ಹತ್ಯೆಯಾಗಿದ್ದಾರೆ. ಹೀಗಾಗಿ ಭೂಗತ ಜಗತ್ತಿನೊಂದಿಗಿನ ಕರಾವಳಿ ಭಾಗದ ಕರಿನೆರಳು ದೂರವಾಗುತ್ತ ಬಂತು.

Advertisement

ಕರಾವಳಿಯಲ್ಲಿ ಮುಂಬಯಿ ಭೂಗತ ಜಗತ್ತಿನ ಜಾಲಕ್ಕೆ ಸುಮಾರು 60 ವರ್ಷ ಮಿಕ್ಕಿದ ಇತಿಹಾಸವಿದೆ. 1960ರ ದಶಕದಲ್ಲಿ ಮುಂಬಯಿ ಭೂಗತ ಜಗತ್ತಿನ ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಿದ್ದ ಹಾಜಿ ಮಸ್ತಾನ್‌ ಕಾಲದಲ್ಲಿ ಕರಾವಳಿಯಲ್ಲಿ ಮುಂಬಯಿ ಭೂಗತ ಲೋಕದ ಜಾಲ ವಿಸ್ತರಿಸಿಕೊಂಡಿತ್ತು. ಸಾಹಸಿಗರು ಮತ್ತು ನಂಬಿಗಸ್ಥರು ಎಂಬ ಹೆಸರು ಗಳಿಸಿದ್ದ ಕರಾವಳಿಗರ ದುರುಪಯೋಗ ಪಡೆದುಕೊಂಡ ಮುಂಬಯಿ ಭೂಗತ ಜಗತ್ತು ಕೆಲವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ಭೂಗತ ಜಗತ್ತಿನಲ್ಲಿ ಭೀತಿ ಮೂಡಿಸಿದ ಕರಾವಳಿಗರು
ಭೂಗತ ಜಗತ್ತಿನಲ್ಲಿ ಕರಾವಳಿಗರ ಅನೇಕ ಹೆಸರುಗಳು ಉಲ್ಲೇಖೀತವಾಗಿವೆ. ಇವುಗಳಲ್ಲಿ ರಮೇಶ್‌ ಪೂಜಾರಿ, ಫ್ರಾನ್ಸಿಸ್‌ ಕುಟಿನ್ಹೊ, ಚಂದ್ರಶೇಖರ ಸಫಲ್ಯ, ಎರಿಕ್‌, ಸಾಧು ಶೆಟ್ಟಿ, ಹೇಮಂತ್‌ ಪೂಜಾರಿ, ಪಾಂಗಾಳ ರಾಮ, ಬನ್ನಂಜೆ ರಾಜ, ರವಿ ಪೂಜಾರಿ, ವಿಕ್ಕಿ ಶೆಟ್ಟಿ, ಕೊರಗ ವಿಶ್ವನಾಥ ಶೆಟ್ಟಿ ಹಾಗೂ ಕಲಿ ಯೋಗೀಶ ಮುಂತಾದವು ಪ್ರಮುಖ ಹೆಸರುಗಳು. ಮುಂಬಯಿಯಲ್ಲಿ ಭೂಗತ ಜಗತ್ತಿನಲ್ಲಿ ಅಂತಃಕಲಹ ಉಲ್ಬಣಗೊಂಡು ಪರಸ್ಪರ ಕಾದಾಟದಲ್ಲಿ ಅನೇಕ ಮಂದಿಯ ಹತ್ಯೆಗಳಾದವು. ಜತೆಗೆ ಪೊಲೀಸ್‌ ಇಲಾಖೆ ಎನ್‌ಕೌಂಟರ್‌ ಆರಂಭಿಸಿತು. ಇದರಿಂದ ಮುಂಬಯಿಯಿಂದ ಭೂಗತ ಪಾತಕಿಗಳು ಕಾಲ್ಕಿತ್ತು ಹೊರದೇಶಗಳಿಗೆ ತೆರಳಿದರು. ಅಲ್ಲಿಂದಲೇ ಭಾರತದಲ್ಲಿ ತಮ್ಮ ನೆಟ್‌ವರ್ಕ್‌ ಮೂಲಕ ಪಾತಕಿ ಚಟುವಟಿಕೆಗಳನ್ನು ನಡೆಸತೊಡಗಿದರು.

ಪ್ರತ್ಯೇಕ ತಂಡ
ಭೂಗತ ಜಗತ್ತಿನ ಅಂತಃಕಲಹದಿಂದ ಆದ ಇನ್ನೊಂದು ಬೆಳವಣಿಗೆಯೆಂದರೆ ಪ್ರಮುಖ ಡಾನ್‌ಗಳೊಂದಿಗೆ ಕೆಲಸ ಮಾಡಿಕೊಂಡಿದ್ದ ಕೆಲವು ಮಂದಿ ಅಲ್ಲಿಂದ ಹೊರಬಂದು ತಮ್ಮದೇ ಆದ ತಂಡವನ್ನು ಕಟ್ಟಿಕೊಂಡಿದ್ದು, ಛೋಟಾರಾಜನ್‌, ಬನ್ನಂಜೆ ರಾಜ, ರವಿ ಪೂಜಾರಿ ಇವರಲ್ಲಿ ಪ್ರಮುಖರು. ಬನ್ನಂಜೆ ರಾಜನನ್ನು ನಾಲ್ಕು ವರ್ಷಗಳ ಹಿಂದೆ ಮೊರೊಕ್ಕೊದಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿದ್ದು, ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾನೆ.

ಸಂಚಲನ ಮೂಡಿಸಿದ್ದ ಮುಂಬಯಿಯ ಆ ಒಂದು ಹತ್ಯೆ
1983ರ ಸೆ.21ರ ಒಂದು ಘಟನೆ ಈಗಲೂ ಹಚ್ಚಹಸುರಾಗಿದೆ. ಮುಂಬಯಿಯ ಎಸ್‌ಪ್ಲಾನಡೆ ನ್ಯಾಯಾಲಯಕ್ಕೆ ಪಾತಕಿ ಕೇರಳ ತ್ರಿಶ್ಯೂರ್‌ ಮೂಲದ ರಾಜನ್‌ ನಾಯರ್‌ ಅಲಿಯಾಸ್‌ ಬಡಾ ರಾಜನ್‌ನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತರುತ್ತಿದ್ದರು. ಆಗ ದಿಢೀರ್‌ ಹಾರಿ ಬಂದ ಗುಂಡು ಬಡಾ ರಾಜನ್‌ಗೆ ಎದೆ ಹೊಕ್ಕಿತ್ತು. ಕ್ಷಣಾರ್ಧದಲ್ಲಿ ಆತ ಕೊನೆಯುಸಿರೆಳೆದಿದ್ದ. ಈತನನ್ನು ಕೊಂದವನು ಕಿನ್ನಿಗೋಳಿ ಸಮೀಪದ, ಮುಂಬಯಿಯಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತಿದ್ದ ಚಂದ್ರಶೇಖರ ಸಫಲಿಗ. ಪಾತಕಿ ಆಮಿರ್‌ ಜಾದಾನ ಹತ್ಯೆಗೆ ಪ್ರತೀಕಾರವಾಗಿ ಎದುರಾಳಿ ಗ್ಯಾಂಗ್‌ ಈ ಕೃತ್ಯವನ್ನು ಆತನ ಮೂಲಕ ಮಾಡಿಸಿತ್ತು. ಚಂದ್ರಶೇಖರ ಸಫಲಿಗ ಈ ಕೊಲೆಗೆ ನೌಕಾದಳದ ಸಮವಸ್ತ್ರ ಧರಿಸಿಕೊಂಡು ದಪ್ಪ ಪುಸ್ತಕದೊಳಗೆ ರಿವಾಲ್ವರ್‌ ಇಟ್ಟುಕೊಂಡು ಬಂದಿದ್ದ. ಆತ ತನ್ನ ಸಹೋದರಿಯ ಮದುವೆಗೆ ಅವಶ್ಯವಿದ್ದ ಹಣಕ್ಕಾಗಿ ಈ ಹತ್ಯೆವೆಸಗಿದ್ದ. ಎದುರಾಳಿ ಗ್ಯಾಂಗ್‌ 10 ಲ. ರೂ. ನೀಡುವುದಾಗಿ ಭರವಸೆ ನೀಡಿ 1 ಲ.ರೂ. ಮುಂಗಡ ನೀಡಿತ್ತು. ಕೊಲೆಯ ಬಳಿಕ ಚಂದ್ರಶೇಖರನಿಗೆ ಬಾಕಿ ಹಣ ಸಿಗಲಿಲ್ಲ.

Advertisement

ಜೈಲ್‌ನಲ್ಲೂ ಸದ್ದು ಮಾಡಿತ್ತು
ಮುಂಬಯಿ ಭೂಗತ ಜಗತ್ತಿನೊಂದಿಗೆ ಮಂಗಳೂರು ಜೋಡಿಸಿಕೊಂಡಿದ್ದ ಕಾಲದಲ್ಲಿ ಪ್ರಮುಖ ಡಾನ್‌ಗಳ ಬಲಗೈಬಂಟ ಎನಿಸಿಕೊಂಡವರು ಮಂಗಳೂರು ಕಾರಾಗೃಹದಲ್ಲಿದ್ದರು. ಆದರೆ, ಜೈಲಿನೊಳಗೆ ಕಾದಾಡಿಕೊಂಡ ಘಟನೆಗಳು ಬಹಳ ಅಪರೂಪವಾಗಿತ್ತು. ಯಾವಾಗ ಪಾತಕ ಲೋಕಕ್ಕೆ ಹೊಸ ಡಾನ್‌ಗಳ ಪ್ರವೇಶವಾಯಿತೋ, ಮೇಲಾಟಕ್ಕೆ ಕಾದಾಟ ಪ್ರಾರಂಭವಾಯಿತೋ ಆಗ ಮಂಗಳೂರು ಜೈಲಿನ ಅಂಗಳವೂ ಬಿಸಿಯೇರತೊಡಗಿತ್ತು. ಬನ್ನಂಜೆ ರಾಜ, ರವಿ ಪೂಜಾರಿ, ಛೋಟಾ ರಾಜನ್‌ ಸಹಚರರೊಳಗೆ ಹೊರಗೆ ನಡೆಯುತ್ತಿದ್ದ ಕಾಳಗ ಜೈಲಿನೊಳಗೂ ಮುಂದುವರಿಯಿತು. ಇದು ಜೈಲಿನೊಳಗೆ ಹತ್ಯೆಯವರೆಗೂ ಮುಂದುವರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next