ಬರ್ಮಿಂಗ್‌ಹ್ಯಾಮ್: ಶುಕ್ರವಾರ ರಾತ್ರಿಯಂತೆ ಭಾರತದ ಕುಸ್ತಿಪಟುಗಳು ಶನಿವಾರವೂ ಮೂರು ಬಂಗಾರ ಮಾತ್ರವಲ್ಲದೇ ಅಷ್ಟೇ ಕಂಚಿನ ಪದಕ ಗೆದ್ದಿದ್ದಾರೆ ಅಲ್ಲಿಗೆ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಅದ್ಭುತ ಓಟ ಮುಂದುವರಿದಿದೆ.
57 ಕೆ.ಜಿ. ವಿಭಾಗದಲ್ಲಿ ರವಿಕುಮಾರ್ ದಹಿಯ, 53 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ವಿನೇಶ್ ಪೊಗಟ್, 74 ಕೆ.ಜಿ. ವಿಭಾಗದಲ್ಲಿ ನವೀನ್ ಬಂಗಾರವನ್ನು ಕೊರಳಿಗೇರಿಸಿಕೊಂಡಿದ್ದಾರೆ.
97 ಕೆ.ಜಿ.ಯಲ್ಲಿ ದೀಪಕ್ ನೆಹ್ರ ಕಂಚು ಗೆದ್ದರೆ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಪೂಜಾ ಗೆಹೊÉàಟ್ ಮತ್ತು 76 ಕೆ.ಜಿ ಫ್ರೀಸ್ಟೈಲ್‌ನಲ್ಲಿ ಪೂಜಾ ಸಿಹಾಗ್ ಕಂಚಿನ ಪದಕ ಗೆದ್ದಿದ್ದಾರೆ.
ಶುಕ್ರವಾರ ತಡರಾತ್ರಿ ದೀಪಕ್ ಪುನಿಯ, ಬಜರಂಗ್ ಪುನಿಯ, ಸಾಕ್ಷಿ ಮಲಿಕ್ ಚಿನ್ನ ಗೆದ್ದಿದ್ದರು. ಶನಿವಾರ ಈ ಸಾಲಿಗೆ ಮೊದಲು ಸೇರಿಕೊಂಡಿದ್ದು ರವಿಕುಮಾರ್ ದಹಿಯ. ಅವರು ನೈಜೀರಿಯದ ಎಬಿಕೆವೆನಿಮೊ ವೆಲ್ಸನ್‌ರನ್ನು ಮಣಿಸಿದರು. ಎರಡನೇ ಚಿನ್ನ ಗೆದ್ದದ್ದು ವಿನೇಶ್ ಪೊಗಟ್. ಅವರು ಶ್ರೀಲಂಕಾದ ಚಾಮೊದ್ಯಾ ಕೇಶಾನಿ ಮದುರವಳಗೆ ಅವರನ್ನು ಸುಲಭವಾಗಿ ಮಣಿಸಿದರು. ಮೂರನೇ ಚಿನ್ನವನ್ನು ನವೀನ್ ಪಡೆದರು. ಅವರು ಪಾಕಿಸ್ಥಾನದ ಎದುರಾಳಿ ತಾಹಿರ್ ಮುಹಮ್ಮದ್ ಶರೀಫ್ ಅವರನ್ನು ನೆಲಕ್ಕುರುಳಿಸಿದ್ದರು. ಶುಕ್ರವಾರದಂತೆ ಶನಿವಾರವೂ ಕುಸ್ತಿಯಲ್ಲಿ ಭಾರತ-ಪಾಕಿಸ್ಥಾನ ಹೋರಾಟ ನಡೆದಿದ್ದು ವಿಶೇಷವಾಗಿತ್ತು.
Related Articles
ದೀಪಕ್ ನೆಹ್ರ, ಪೂಜಾ ಹ್ಲೋಟ್ ಮತ್ತು ಪೂಜಾ ಸಿಹಾಗ್ ಕಂಚು ಗೆದ್ದವರು. ದೀಪಕ್ ಪಾಕಿಸ್ಥಾನದ ತಯಬ್ ರಾಜಾ ಅವರನ್ನು ಮಣಿಸಿದರೆ ಪೂಜಾ ಸಿಹಾಗ್ ಆಸ್ಟ್ರೇಲಿಯದ ನವೋಮಿ ಡೀ ಬ್ರೂಯ್ನ ವಿರುದ್ಧ 8-0 ಅಂತರದಿಂದ ಸುಲಭವಾಗಿ ಗೆದ್ದರು.
ವಿನೇಶ್‌ಗೆ “ಬಂಗಾರ’
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿರಾಶೆ ಅನುಭವಿಸಿದ್ದ ವಿನೇಶ್ ಪೊಗಾಟ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ 3ನೇ ಬಾರಿ ಬಂಗಾರದ ಪದಕ ಗೆದ್ದಿದ್ದಾರೆ. ಆರಂಭದಲ್ಲಿ 4 ಅಂಕ ಗಳಿಸಿದ ವಿನೇಶ್, ಅನಂತರ ಎದುರಾಳಿಯ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ನೆಲಕ್ಕುರುಳಿಸಿದರು. ಚಾಮೊದ್ಯಾ ಕೇಶಾನಿ ಉಸಿರೆತ್ತದೇ ಶರಣಾದರು. ವಿನೇಶ್ 2014 ಗ್ಲಾಸ್ಗೋ ಕಾಮನ್‌ವೆಲ್ತ್‌ನಲ್ಲಿ 48 ಕೆ.ಜಿ. ವಿಭಾಗದಲ್ಲಿ, 2018ರಲ್ಲಿ 50 ಕೆ.ಜಿ. ವಿಭಾಗದಲ್ಲಿ ಬಂಗಾರ ಗೆದ್ದಿದ್ದರು. ಈ ಬಾರಿಯೂ ಅದನ್ನೇ ಪುನರಾವರ್ತಿಸಿದರು. ವಿನೇಶ್ ಮೇಲೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರೀ ನಿರೀಕ್ಷೆಗಳಿದ್ದವು. ಆಗವರಿಗೆ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಆಗಿರಲಿಲ್ಲ.
ಪೂಜಾ ಗೆಹ್ಲೋಟ್ ಗೆ ಕಂಚು
ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ. ಈಕೆ ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಚಿಜಿಯೊ ವಿರುದ್ಧ ಪಿನ್‌ಫಾಲ್‌ನಲ್ಲಿ ಗೆಲುವು ಸಾಧಿಸಿದರು. ಎದುರಾಳಿಯನ್ನು ನೆಲಕ್ಕೆ ಕೆಡವಿಕೊಂಡು, ಅವರ ಭುಜವನ್ನು ಮೇಲೇಳಲಿಕ್ಕೆ ಆಗದಂತೆ ಅದುಮಿಹಿಡಿಯುವುದಕ್ಕೆ ಪಿನ್‌ಫಾಲ್ ಎನ್ನುತ್ತಾರೆ. ಈ ಮಾದರಿಯಲ್ಲಿ ಪೂಜಾ ಅದ್ಭುತ ಜಯ ಸಾಧಿಸಿದರು. ಗೆಲುವಿನ ಅಂತರ 12-2 ಅಂಕಗಳು. ವಿಶೇಷವೆಂದರೆ ಮೊದಲ ಸುತ್ತಿನಲ್ಲಿ 2 ಅಂಕ ಗಳಿಸಿ ಕ್ರಿಸ್ಟೆಲ್ಲೆ ಮುನ್ನಡೆ ಸಾಧಿಸಿದ್ದರು. ಮುಂದೆ ಪೂಜಾ ಹಿಡಿತ ಸಾಧಿಸಿದರು.