ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ, ಭಾನುವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರವನ್ನು ಸಂಪೂರ್ಣ ಲಂಚಮುಕ್ತಗೊಳಿಸುವ ಭರವಸೆ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಆದ್ಯತೆ ವಿಷಯಗಳಾಗಿದ್ದು, ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ಅರ್ಹ ಫಲಾನುಭವಿಗಳಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ.
ಜಯನಗರ ಕ್ಷೇತ್ರದ ಎಲ್ಲ ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ದೊರೆಯುವಂತೆ ಮಾಡಲಾಗುವುದು. ಸರ್ಕಾರಿ ಶಾಲೆ, ಕಾಲೇಜುಗಳನ್ನು ರಾಜ್ಯದಲ್ಲಿಯೇ ಮಾದರಿಯಾಗಿ ರೂಪಿಸುವುದು, ಎಲ್ಲ ಉದ್ಯಾನಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡುವುದು,
ಮಳೆನೀರು ಕೊಯ್ಲು, ಸೌರ ವಿದ್ಯುತ್ ಘಟಕ ಸ್ಥಾಪನೆ, ಸಾರ್ವಜನಿಕರ ಸುರಕ್ಷತಾ ಕ್ರಮಗಳಿಗೆ ಮೊದಲ ಒಂದು ವರ್ಷದಲ್ಲಿ ಕ್ರಮಕೈಗೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಎರಡು ವರ್ಷಗಳಲ್ಲಿ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ವಾರ್ಡ್ ಕ್ಲಿನಿಕ್ ನಿರ್ಮಿಸಲಾಗುವುದು.
ಜಯನಗರ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತಲಿನ ಆಸ್ಪತ್ರೆಗಳನ್ನು ಸಂಯೋಜಿಸಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ರೂಪಿಸುವ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡುವ ಯೋಜನೆ ಜನರ ಮುಂದಿಟ್ಟಿದ್ದಾರೆ.
ನಾನು ಆಸ್ತಿ ಮಾಡುವುದಿಲ್ಲ: ನಾನು ಶಾಸಕನಾಗಿರುವ ಅವಧಿಯಲ್ಲಿ ಯಾವುದೇ ಆಸ್ತಿ ಕೊಳ್ಳುವುದಿಲ್ಲ, ಯಾವುದೇ ಲಾಭದಾಯಕ ಉದ್ಯಮ ಅಥವಾ ವ್ಯವಹಾರ ನಡೆಸುವುದಿಲ್ಲ. ನನ್ನ ಹಾಗೂ ಕುಟುಂಬದ ಖರ್ಚು ವೆಚ್ಚಗಳನ್ನು ಶಾಸಕನಾಗಿ ನನಗೆ ಬರುವ ವೇತನ, ನನ್ನ ಪತ್ನಿಯ ವೇತನ/ಆದಾಯದಲ್ಲಷ್ಟೇ ನಿಭಾಯಿಸುತ್ತೇನೆ ಎಂದು ಜನರಿಗೆ ವಚನ ನೀಡುವುದಾಗಿ ರವಿಕೃಷ್ಣಾ ರೆಡ್ಡಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.